ಲೇಖಕ ಸೃಜನ್ ಗಣೇಶ ಹೆಗಡೆ ಅವರ ಪೌರಾಣಿಕ ಕಾದಂಬರಿ-ಪಾದುಕೆಯ ಕಣ್ಣಂಚಿನಲಿ. ಆದಿಕವಿ ವಾಲ್ಮೀಕಿ ಕೃತ ಶ್ರೀರಾಮಾಯಣ ಮಹಾಕಾವ್ಯದಲ್ಲಿನ ಅನುಸಂಧಾನದ ಲೇಖಕರ ಎರಡನೆಯ ಪ್ರಯತ್ನವಾಗಿ ಈ ಕೃತಿಯಿದ್ದು, ಮೊದಲನೆಯ ಪ್ರಯತ್ನದಲ್ಲಿ ಸೀತೆಯ ಪಾತ್ರ ಚಿತ್ರಣವನ್ನು ಕಾವ್ಯಾತ್ಮಕ ಅಭಿವ್ಯಕ್ತಿಯ ಮೂಲಕವೇ 'ಮಿಥಿಲೆಯ ಮೊಗ್ಗು' ಎಂಬ ಹೆಸರಿನ ಕಾವ್ಯ ಕಾದಂಬರಿಯಲ್ಲಿ ಗಮನಿಸಬಹುದು.
'ಪಾದುಕೆಯ ಕಣ್ಣಂಚಿನಲ್ಲಿ' ಈ ಕೃತಿಯು ಶ್ರೀರಾಮಾಯಣ ಮಹಾಕಾವ್ಯದ ಭರತನ ಮುಖ್ಯ ಭೂಮಿಕೆಯಲ್ಲಿ ಅಂತರಂಗ ತೆರೆದುಕೊಂಡಂತಹ ಕಾದಂಬರಿ. ಕಾದಂಬರಿಯು ಎರಡು ಬೇರೆ ಬೇರೆಯ ಕಾಲ ಮತ್ತು ಸ್ಥಳದಲ್ಲಿನ ಚಿತ್ರಣದ ಹರವಿನಲ್ಲಿಯೆ ಸಾಗುತ್ತ, ಒಂದೇ ಕಾಲ ಮತ್ತು ಸ್ಥಳಕ್ಕೆ ಬಂದು ಮುಕ್ತಾಯವಾಗುವ ರಚನಾ ವಿಧಾನವು ಮತ್ತು ಪ್ರತೀ ಭಾಗಗಳಲ್ಲಿಯೂ ಒಂದಿಷ್ಟು ಪೂರಕವಾಗಬಲ್ಲಂತಹ ಸಾಲುಗಳನ್ನು ಬರೆದುಕೊಂಡು ಹೆಣೆಯಲ್ಪಟ್ಟ ಪ್ರಯತ್ನವಿದೆ.
ಕೃತಿಯ ಕುರಿತು ಲೇಖಕರು 'ಶ್ರೀರಾಮಾಯಣ ಮಹಾಕಾವ್ಯದಲ್ಲಿ ಹುಡುಕಾಟಕ್ಕೆ ಇಳಿದುಕೊಂಡರೆ ಅದರ ಆಳ ವೈಶಾಲ್ಯತೆಯ ಅರಿವು ಖಂಡಿತ ತಿಳಿ ತಿಳಿಯಾಗಿಯೇ ತಿಳಿವಾಗುತ್ತದೆ. ಒಂದೊಂದು ಪಾತ್ರ ಚಿತ್ರಣದಲ್ಲಿಯೂ ದಾಖಲಾದಂತಹ ವೈದೃಶ್ಯಗಳು ಅಷ್ಟು ಸುಲಭದ ವಿವೇಚನೆಯಂತೂ ಅಲ್ಲವೆ ಅಲ್ಲ. ಆ ವಿವೇಚನೆಗೆ ಸಾಮಾನ್ಯವಾದ ಒಂದು ಈಜು ಸಾಲದು; ಅಸಾಮಾನ್ಯವಾದ ಮುಳುಗೇ ಬೇಕಾದೀತು. ಸತ್ಯವೆಂದರೆ, ಇಲ್ಲಿ ಮುಳುಗಿದರೂ ಜೀವಕ್ಕೆ ಹಾನಿಯಾಗಬಹುದಾದ ಯಾವ ಸಂಭವನೀಯತೆಯೂ ಇರದು. ಏಕೆಂದರೆ ಮುಳುಗಿದಷ್ಟೂ ಜ್ಞಾನ ಹೆಚ್ಚುತ್ತದೆಯೆ ಹೊರತು ಅಜ್ಞಾನಿಗಳಂತೂ ಆಗುವುದೇ ಇಲ್ಲ. ಪ್ರತೀ ಕ್ಷಣದ ಹುಟ್ಟು ಜ್ಞಾನ ರೂಪಕವಾದರೆ ಸಾವು ಅಜ್ಞಾನದ ಅಥವಾ ತಮದ ಸಂಕೇತವಾಗಬೇಕಲ್ಲ. ಹಾಗೆ ನೋಡಿದರೆ , ಶ್ರೀರಾಮಾಯಣದ ಶರಧಿಯಲ್ಲಿನ ಮುಳುಗು ಜ್ಞಾನದ ಬೆಳಗು; ಸುಜ್ಞಾನದ ಗುನುಗು' ಎಂದಿದ್ದಾರೆ. ಹಾಗೆಯೆ, 'ಇಡಿಯಾದ ನನ್ನ ಬರಹದಲ್ಲಿ ಶ್ರೀರಾಮಾಯಣ ಮಹಾಕಾವ್ಯದ ಕಥೆಯಷ್ಟೇ ಸಿಗದು. ಒಂದು ತಾತ್ತ್ವಿಕ ಮುಖಾಮುಖಿಯಲ್ಲಿಯೇ ಅನುಭಾವದ ಅನುಭೂತಿಯನ್ನು ಅಧ್ಯಾತ್ಮಿಕವಾಗಿ ತೋರಬಲ್ಲಂತಹ ಪ್ರಯತ್ನವೂ ಕಾಣಸಿಗುತ್ತದೆ. ಇಲ್ಲಿ ಭರತನ ಪಾತ್ರ ಚಿತ್ರಣದಲ್ಲಿಯೆ ಕಥಾ ಸಂವಿಧಾನವು ರೂಪುಗೊಂಡಿರುವಾಗಿಯೂ ಮಾಂಡವಿ, ಮಂಥರೆ, ಕೈಕೇಯಿಯಂತಹ ಸ್ತ್ರೀ ಪಾತ್ರಗಳ ವಿವೇಚನೆ ವಿಶೇಷವಾಗಿ ಚಿತ್ರಿಸುವ ಪ್ರಯತ್ನ ಕೈಗೊಂಡಿದ್ದೇನೆ' ಎಂದು ಲೇಖಕರು ಹೇಳಿದ್ದಾರೆ.
ಕೃತಿಗೆ ವಿದ್ವಾನ್ ಜಗದೀಶ ಶರ್ಮಾ ಅವರು ಬೆನ್ನುಡಿ ಬರೆದಿದ್ದು, 'ಕೃತಿಯು ಸೃಷ್ಟಿಶೀಲತೆಯ ಫಲಿತ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ. ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...
READ MORE