ಒಡಲುಗೊಂಡವರು

Author : ರಾಜಶೇಖರ ಹಳೆಮನೆ

Pages 196

₹ 235.00




Year of Publication: 2024
Published by: ಕ್ರಿಯೇಟಿವ್ ಪುಸ್ತಕ ಮನೆ
Address: #4-64/10 ಅದಧಾನ ದುರ್ಗ ಎನಕ್ಲೇವ್, ಜೋಡುರಸ್ತೆ, ಕಾರ್ಕಳ
Phone: 9606474289

Synopsys

“ಒಡಲುಗೊಂಡವರು” ಹಳೆಮನೆ ರಾಜಶೇಖರ ಅವರ ಕಾದಂಬರಿ. ಕತೆಗಾರ – ವಿಮರ್ಶಕ ಹಳೆಮನೆ ರಾಜಶೇಖರ ಅವರು ತಮ್ಮ ಸೂಕ್ಷ್ಮ ಸಂವೇದನೆಯ ಕತೆಗಳ ಕಟ್ಟುವಿಕೆಯ ಮೂಲಕ ಪ್ರಿಯರಾಗಿದ್ದು, ಇದೀಗ ಅವರ ಬರವಣಿಗೆಯ ಕಸುಬುದಾರಿಕೆಯು ಕಾದಂಬರಿಯಲ್ಲಿಯೂ ಮುಂದುವರೆದಿದೆ. ವಚನಕಾರ ದಾಸಿಮಯ್ಯನ ಸಾಲನ್ನು ಶೀರ್ಷಿಕೆಯಾಗಿಸಿಕೊಂಡಿರುವ 'ಒಡಲುಗೊಂಡವರು' ಕಾದಂಬರಿಯು ಕೇವಲ 'ಕತೆ'ಯಾಗಿಲ್ಲ. ಬದಲಿಗೆ ಜ್ವಲಂತ ಬದುಕಿನ ಜೀವಂತ ಚಿತ್ರಣವೇ ಆಗಿ ಅಕ್ಕರದ ರೂಪು ತಾಳಿದೆ. ಬದುಕಿನ ಬವಣೆಗಳ ದಾರುಣ ಚಿತ್ರ ಕಟ್ಟುವ ಕಾರಣಕ್ಕಾಗಿ ಓದಿಗೆ ಪ್ರಿಯವಾಗುವ ಈ ಕಾದಂಬರಿಯು ಮೊದಲ ಇನ್ನಿಂಗ್ಸ್ ನಲ್ಲಿಯೇ ಸಿಕ್ಸರ್ ಹೊಡೆದ ಹಾಗಿದೆ. ಕತೆಗೆ ಒಬ್ಬ ನಾಯಕನಿದ್ದಾನೆ. ಅವನು ಕೇರಿಯ 'ಭೀಮ'. ಬಾಲ್ಯದಲ್ಲಿಯೇ ಸರ್ವಸ್ವವನ್ನು ಕಳೆದುಕೊಂಡ ಗೌಡರ ಮನೆಯ ಆಳು. ಭೀಮನ ಸುತ್ತ ಹೆಣೆಯಲಾದ ಈ ಕತೆಯು ಕೇವಲ ಅವನಿಗಷ್ಟೇ ಸೀಮಿತವಾಗಿಲ್ಲ. ಒಂದು ಹಳ್ಳಿಯ ಏಳು-ಬೀಳಿನ ಹೃದಯಂಗಮ ಚಿತ್ರಣ ನೀಡುತ್ತದೆ. ಬದಲಾಗುತ್ತಿರುವ ಬದುಕಿನ ಸ್ವರೂಪ- ಕಳೆದು ಹೋಗುತ್ತಿರುವ ಮೌಲ್ಯಗಳು ಇಲ್ಲವಾಗುತ್ತಿರುವ ನೆಲಜಲ ಸಂಸ್ಕೃತಿ-ಆಧುನಿಕತೆಯ ದಾಳಿಗೆ ನಲುಗುವ ಹಳ್ಳಿಗಳ ಕಥನ ಕಾದಂಬರಿಯ ಕೇಂದ್ರವಾಗಿದೆ.

ಬಿಕ್ಕಟ್ಟಿನಿಂದ ಬಿಡುಗಡೆಯ ಕಡೆಗೆ ಚಲಿಸುವ ಕಾದಂಬರಿಯು ಕಂಡುಕೊಂಡ ಹುಡುಕಾಟವು ಬದಲಾವಣೆ ಹೌದು. ಆದರೆ, ಅದು ಬೆಳವಣಿಗೆಯೇನಲ್ಲ. ಪ್ರಕ್ರಿಯೆಯಲ್ಲಿ ನಡೆದ ಅನಾಹುತ-ಹಳಹಳಿಕೆಯ ಹಳವಂಡಗಳ ದಾಖಲೀಕರಣ. ರಾಯಚೂರು ಸೀಮೆಯ ಕನ್ನಡವನ್ನು ರಾಜಶೇಖರ ದುಡಿಸಿಕೊಂಡ ರೀತಿ ಅನನ್ಯ ಆಡುಮಾತಿನ ಲಯದ ನಾಡಿ ಹಿಡಿದ ಲೇಖಕರು ತಮ್ಮ ಬಾಲ್ಯದಲ್ಲಿ ಕಂಡು ಅನುಭವಿಸಿದ ಕೃಷಿಲೋಕದ ವಿವರಗಳನ್ನು ಕಂಡರಿಸಿದ ರೀತಿ ಸೊಗಸಾಗಿದೆ. ಭಾಷೆಯ ಬಳಕೆಯಲ್ಲಿ ವಹಿಸುವ ಲೇಖಕರ ಎಚ್ಚರವು ಓದುಗನ ಅರಿವಿನ ವಿಸ್ತಾರಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ, ಈಗಾಗಲೇ ಅಂಚಿಗೆ ಸರಿದುಹೋದ ಹಲವು ವಸ್ತು-ಸಂಗತಿಗಳನ್ನು ಕತೆಯ ಭಾಗವಾಗಿಸಿದ ಕ್ರಮ ಪ್ರಿಯವಾಗದೇ ಇರದು.

About the Author

ರಾಜಶೇಖರ ಹಳೆಮನೆ

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ತನಕ ಪ್ರಕಟಿಸಿದ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 2019ನೇ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿದೆ. ...

READ MORE

Related Books