ಡಾ. ಶಿವರಾಮ ಕಾರಂತರ ಕಾದಂಬರಿ-ನಂಬಿದವರ ನಾಕ ನರಕ. ಧಾರ್ಮಿಕ ರೀತಿ-ರಿವಾಜು, ಧರ್ಮ, ಮೇಲ್ಜಾತಿ, ಕೀಳು ಜಾತಿ ಮುಂತಾದ ಸಾಮಾಜಿಕ ಪದ್ಧತಿಗಳನ್ನು ರೂಢಿಸಿಕೊಂಡು ಬೆಳೆದಿದ್ದ ಬ್ರಾಹ್ಮಣ ಕುಟುಂಬವೊಂದರ ಹೆಣ್ಣು ಮಗಳನ್ನು ಮೋಸದಿಂದ ಕೆಳಗಿನ ಜಾತಿಯವನೊಬ್ಬನಿಗೆ ಮದುವೆ ಮಾಡಿಕೊಡ ಲಾಗುತ್ತದೆ. ವಿಷಯ ಆಕೆಗೆ ತಿಳಿದಾಗ ಉಂಟಾದ ಮಾನಸಿಕ ಆಘಾತದ ಪರಿಣಾಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿರುವ ಕಾದಂಬರಿ ಇದು. ಹಿಸ್ಟೀರಿಯಾದಂತಹ ಮಾನಸಿಕ ವಿಭ್ರಮೆಗೊಳಗಾಗಿರುವ ಹೆಣ್ಣಿನ ಮನೋರೋಗದ ಲಕ್ಷಣ, ಅದರ ಆಳ – ವಿಸ್ತಾರಗಳನ್ನು ಮನೋವಿಜ್ಞಾನದ ಪರಿಭಾಷೆಯ ತಾಂತ್ರಿಕ ತೊಡಕುಗಳಿಲ್ಲದೆಯೇ, ಸಮಾಜಶಾಸ್ತ್ರಜ್ಞನ ಕಣ್ಣಿಂದ ಕಂಡು ಓದುಗರ ಮನಸ್ಸಿಗೆ ತಟ್ಟುವಂತೆ ಕಥೆ ಹೆಣೆಯಲಾಗಿದೆ.
ವಾಗ್ದೇವಿ-ಸಾಹುಕಾರ ನಾಗೇಂದ್ರರ ಮದುವೆ ನಡೆಯುತ್ತದೆ. ಈ ನಾಗೇಂದ್ರ ಬ್ರಾಹ್ಮಣನಲ್ಲ ಎಂಬುದು ತಂದೆ ಶಿರೂರು ಶಂಕರಯ್ಯನವರಿಗೆ ಚಿಂತೆ ಕಾಡುತ್ತದೆ. ಇದೇ ಕೊರಗಿನಲ್ಲಿ ವಾಗ್ದೇವಿಯ ತಾಯಿ ಸಾಯುತ್ತಾಳೆ. ಯಾತ್ರಾರ್ಥಿಯೊಬ್ಬಳು ಇವರ ಮನೆಯಲ್ಲಿ ಊಟ ಮಾಡಲು ನಿರಾಕರಿಸಿದ್ದು, ಆ ಮನೆ ಬ್ರಾಹ್ಮಣರದ್ದಲ್ಲ ಎಂಬ ಟೀಕೆಯನ್ನು ವಾಗ್ದೇವಿ ಕೇಳಬೇಕಾಗುತ್ತದೆ. ಇದೇ ರೀತಿಯ ಟೀಕೆಗಳು ಹೆಚ್ಚಾಗಿ ಅವಳು ಉನ್ಮಾದಕ್ಕೆ ಒಳಗಾಗುತ್ತಾಳೆ. ಪತಿ ನಾಗೇಂದ್ರನು ಬಹಳಷ್ಟು ಕಡೆ ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ರೋಗ ಗುಣವಾಗದು. ಮಠಕ್ಕೂ ಕರೆದೊಯ್ದಾಗ ಅಲ್ಲಿಯ ಸ್ವಾಮೀಜಿ, ವಾಗ್ದೇವಿಯ ಅಸಹಾಯಕ ಸ್ಥಿತಿಯ ದುರುಪಯೋಗ ಮಾಡಿಕೊಂಡು ಅತ್ಯಾಚಾರ ಮಾಡುತ್ತಾನೆ. ಇದರಿಂದ, ಆಕೆ ಮತ್ತಷ್ಟು ಹುಚ್ಚಿಯಂತಾಗುತ್ತಾಳೆ. ಊರಿನಲ್ಲಿ ವಿಷ್ಣು ಎಂಬಾತ ಸನ್ಯಾಸಿ ವೇಷಧರಿಸಿ ಜನರನ್ನು ವಂಚಿಸುತ್ತಿರುತ್ತಾನೆ. ಆತನ ವೈರಾಗ್ಯವೆಂಬುದು ಕೇವಲ ಮೋಸದಾಟವಾಗಿರುತ್ತದೆ, ಕೆಲಸಕ್ಕೆ ಬಾರದ ಸಂಗತಿಗಳು ಬದುಕನ್ನು ನಿಯಂತ್ರಿಸುವ ವ್ಯವಸ್ಥೆಯಿಂದ ಮನುಷ್ಯ ತಾನು ಬಾಳಬೇಕಾದ ನೈಜ ಬದುಕನ್ನು ಬಾಳುತ್ತಿಲ್ಲ ಎಂದು ತೋರಿಸಿ, ವಿಡಂಬನಾತ್ಮಕ ಶೈಲಿಯ ಈ ಕಾದಂಬರಿಯು ಮುಕ್ತಾಯಗೊಳ್ಳುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 158ರಲ್ಲಿ (ಪುಟ: 344) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE