ಶಿವರಾಮ ಕಾರಂತರ ಜನಪ್ರಿಯ ಕಾದಂಬರಿಗಳ ಪೈಕಿ ‘ಮುಗಿದ ಯುದ್ಧ’ವೂ ಒಂದು. ಅಧ್ಯಾಪಕನೊಬ್ಬನ ಬಡತನದ ಚಿತ್ರ. ಬಾಳಿನ ಬವಣೆಗಳು, ಮನೋದೈಹಿಕ ಸಂಘರ್ಷ, ಅನಾರೋಗ್ಯ, ಪ್ರೀತಿ ತುಂಬಿದ ಸಾಂಸಾರಿಕ ಬದುಕು - ಇವೆಲ್ಲವೂ ಕೊನೆಗೊಂದು ದಿನ ಸಾವಿನೊಂದಿಗೆ ಪರ್ಯವಸಾನವಾಗುತ್ತವೆ ಎಂಬುದೇ ಕಾದಂಬರಿಯ ಸಂದೇಶ.
ಕೊಂಬಾರಿನ ಕೃಷ್ಣರಾಯರಿಗೆ ಕಾಯಿಲೆ. ಹಾಸಿಗೆ ಹಿಡಿದಿದ್ದರಿಂದ ಸಾಲ ತೀರಿಸಲಾಗದೇ ಮತ್ತಷ್ಟು ಕೊರಗುತ್ತಾರೆ. ಆಸ್ತಿಯೂ ಸಾಲಗಾರರ ಪಾಲಾಗುತ್ತದೆ. ಹಣ ಕಳುಹಿಸಲಾಗದೇ ಮಗ ಅಚ್ಯುತ್ ನ ವಿದ್ಯಾಭ್ಯಾಸ ಮೊಟಕಾಗುತ್ತದೆ. ಆದರೆ, ಆತನಿಗೆ ಓದುವ ಹಂಬಲ. ಈ ಮಧ್ಯೆ ಕೃಷ್ಣರಾಯರು ನಿಧನರಾಗುತ್ತಾರೆ. ಮಗಳು ಸೀತೆಯ ಗಂಡನೂ ಆಸ್ತಿ ಮಾರಾಟ ಮಾಡಿ ಅಬ್ಬೇಪಾರಿ ಆಗಿರುತ್ತಾನೆ. ಸೀತೆಯು ಮಕ್ಕಳೊಂದಿಗೆ ತವರಿಗೇ ಬಂದು ವಾಸವಿರುತ್ತಾಳೆ. ಮಗ ಅಚ್ಯುತ್ ಶಾಲಾ ಶಿಕ್ಷಕನಾಗುತ್ತಾನೆ. ನಂತರ ಶಾಲೆಯ ಅಭಿವೃದ್ಧಿ ಕಾಣುತ್ತದೆ. ತಂದೆ ಮಾಡಿದ ಸಾಲವನ್ನೂ ತೀರಿಸುತ್ತಾನೆ. ಪಂಜದಲ್ಲಿದ್ದ ಪುಟ್ಟಯ್ಯನ ಮಗಳು ರುಕ್ಮಿಣಿಯೊಂದಿಗೆ ಮದುವೆಯಾಗುತ್ತದೆ. ಬೆಳ್ತಂಗಡಿಯ ಶಾಲೆಯಲ್ಲಿ ನೌಕರಿ ದೊರೆಯುತ್ತದೆ. ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚುತ್ತವೆ. ವೈರಿಗಳೂ ಹೆಚ್ಚಾಗುತ್ತಾರೆ. ಶಾಲೆಯ ದಿನನಿತ್ಯದ ಓಡಾಟದಿಂದ ಸುಸ್ತಾಗುತ್ತಾನೆ. ರಜೆಯನ್ನು ನಿರೀಕ್ಷಿಸುತ್ತಾನೆ. ಸಹೋದ್ಯೋಗಿಗಳ ಅಸಮಾಧಾನ ಹೆಚ್ಚುತ್ತದೆ. ಸಾಲದ ಹೊರೆಯೂ ಅಧಿಕಗೊಳ್ಳುತ್ತದೆ. ರುಕ್ಮಿಣಿಗೆ ಎಂಟನೇ ಬಸಿರು. ಜೊತೆಗೆ ಕಾಯಿಲೆಗಳು. ಈ ಮಧ್ಯೆ, ಒಕ್ಕಲಗಿತ್ತಿ ಸುಬ್ಬಿಯೊಂದಿಗೆ ಪ್ರಣಯ ಸಂಬಂಧ. ಸಾಲದ ಹೊರೆ ಹೆಚ್ಚಾಗುತ್ತದೆ. ಆತನಿಗೆ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಈ ಮಧ್ಯೆ ಯುದ್ಧ ಮುಗಿಯಿತೆಂಬ ಸಮಾಧಾನ. ರುಕ್ಮಿಣಿಯೊಂದಿಗೆ ಮಾತನಾಡಿ ಧೈರ್ಯವಾಗಿರು ಎಂದು ಹೇಳುತ್ತಾನೆ. ಆದರೆ, ಬೆಳಗಾಗುವಷ್ಟರಲ್ಲಿ ಅಚ್ಯುತನ ಜೀವ ಹಾರಿಹೋಗಿರುತ್ತದೆ. ಬಾಳಿನ ಯುದ್ಧವೇನೋ ಮುಗಿಯಿತು ಎಂಬಂತೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1945ರಲ್ಲಿ (ಪುಟ:315) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE