‘ಮೊಗ ಪಡೆದ ಮನ’ ಎಂಬುದು ಶಿವರಾಮ ಕಾರಂತರ ಕಾದಂಬರಿ. ನೃತ್ಯ, ನಾಟಕಗಳ ಗೀಳನ್ನು ಅಂಟಿಸಿಕೊಂಡ ಕಲಾವಿದನೊಬ್ಬನ ಕಲಾಜೀವನ ಮತ್ತು ಭಾವಜೀವನದ ಪರಿಚಯವನ್ನುಈ ಕಾದಂಬರಿ ನೀಡುತ್ತದೆ. ಕಲಾಸಕ್ತಿಗೆ ಸಂಬಂಧಿಸಿದ ಮನಸ್ಸಿನ ಭಾವನೆಗಳನ್ನು ಕಾರ್ಯಗತಗೊಳಿಸುವ ಸೂಚನೆಯೊಂದಿಗೆ ಕಾದಂಬರಿ ಮುಂದುವರೆಯುತ್ತದೆ.
ಗುಮಾಸ್ತ ಅನಂತರಾಯರು ಮಧ್ಯೆ ವಯಸ್ಸಿನಲ್ಲಿ ನಿಧನರಾಗುತ್ತಾರೆ. ಪತ್ನಿ ನಂದಿನಿ ಮೂವರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಾಳೆ. ಮಗ ವ್ಯಾಸನಿಗೆ ಗಂಡನ ಬಯಕೆಯಂತೆ ಕಾನೂನು ಓದಿಸುತ್ತಾಳೆ. ನಂದಿನಿ ಸಹೊದರ ಶ್ರೀನಿವಾಸರಾಯರ ಮಗ ಕೃಷ್ಣ ಓದಿನಲ್ಲಿ ಸ್ವಲ್ಪ ಹಿಂದೆ. ಕೃಷ್ಣನಿಗೆ ಮುಂಬೈ ನೋಡುವ ಆಸೆ. ಆದರೆ, ತಂದೆ ಶ್ರೀನಿವಾಸ ರಾಯರಿಗೆ ಒಬ್ಬನನ್ನೇ ಕಳುಹಿಸಲು ಮನಸ್ಸಿಲ್ಲ. ಜೊತೆಗೆ ವ್ಯಾಸನನ್ನು ಕಳುಹಿಸುತ್ತಾನೆ. ದಾದರಿನಲ್ಲಿ ಇಬ್ಬರು ಸುತ್ತುತ್ತಾರೆ. ನಾಟಕ ನೋಡುತ್ತಾರೆ. ಫ್ರೆಂಚ್ ನಟಿ ಟೂಬಾಳ ನಟನೆ ವ್ಯಾಸನನ್ನು ಸೆಳೆಯುತ್ತದೆ. ಮುಂದೆ, ಇದೇ ನಟಿ ಟೂಬಾ ಅವರಿಂದ ನೃತ್ಯ ತರಬೇತಿಗೆ ಕರೆಸಲಾಗುತ್ತದೆ. ಇದರಿಂದ, ವ್ಯಾಸನು ಟೂಬಾಳಿಗೆ ಹತ್ತಿರವಾಗುತ್ತಾನೆ. ಟೂಬಾಳೊಂದಿಗೆ ನೃತ್ಯಶಾಲೆ ಆರಂಭಿಸಿದಾಗ ಇಂದುವತಿ, ಸುಧಾ ಅಸಮಾಧಾನಗೊಳ್ಳುತ್ತಾರೆ. ವಿಮಲೆಯನ್ನು ಮದುವೆಯಾಗಬೇಕೆಂದು ಸಹೋದರಿ ವ್ಯಾಸನನ್ನು ಒತ್ತಾಯಿಸುತ್ತಾಳೆ. ವಿಮಲೆ ಹಾಗೂ ಟೂಬಾ ಯಾರನ್ನು ಮದುವೆಯಾಗಬೇಕು ಎಂಬ ದ್ವಂದ್ವದಲ್ಲಿ ವ್ಯಾಸ ಸಿಲುಕುತ್ತಾನೆ. ಟೂಬಾಳನ್ನು ಮದುವೆಯಾದರೆ ಆಕೆಯದು ಕಲಾಬದುಕು ತನಗೂ ಇಷ್ಟ ಎಂದುಕೊಳ್ಳುತ್ತಾನೆ. ಆದರೆ, ಈ ಮಧ್ಯೆ ಜರುಗುವ ವಿದ್ಯಮಾನಗಳಿಂದಾಗಿ ಟೂಬಾಳ ಬಗ್ಗೆ ವ್ಯಾಸನಿಗೆ ಅಸಮಾಧಾನವಾಗುತ್ತದೆ. ನಂತರ, ವಿಮಲೆಯನ್ನು ಮದುವೆಯಾಗಿ ಮುಂಬೈನಲ್ಲಿ ತದನಂತರ ಧಾರವಾಡದಲ್ಲಿ ನೆಲೆಸಿ, ಕಲಾಶಾಲೆಯನ್ನು ನಡೆಸುತ್ತಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1948ರಲ್ಲಿ (ಪುಟ:304) ಈ ಕಾದಂಬರಿಯು ಮೊದಲಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE