ಜೋಗವ್ವ

Author : ಕುಮಾರ ಬೇಂದ್ರೆ

Pages 112

₹ 75.00




Year of Publication: 2017
Published by: ದಾಕ್ಷಾಯಿನಿ ಪ್ರಕಾಶನ
Address: # 149/1, ಎಫ್131, ವೀಣೇಶಾಮಣ್ಣ ರಸ್ತೆ, ಮೈಸೂರು- 570 004

Synopsys

‘ಜೋಗವ್ವ’ ಕವಿ, ಲೇಖಕ ಕುಮಾರ ಬೇಂದ್ರೆ ಅವರ ಕಾದಂಬರಿ. ಅಮೆರಿಕದಲ್ಲಿ ಜರುಗಿದ ಅಕ್ಕ ವಿಶ್ವ ಕನ್ನಡ ಸಮ್ಮೇಳನ-2006 ಅಂಗವಾಗಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ತೀರ್ಪುಗಾರರ ಬಹುಮಾನ ಪಡೆದ ಕಾದಂಬರಿ ಇದು. ಪರಂಪರೆ-ಸಾಂಪ್ರದಾಯಿಕತೆ, ಶ್ರದ್ದೆ-ಮೂಢನಂಬಿಕೆ, ಭಕ್ತಿ-ಆಚರಣೆ, ವಿವೇಚನೆ-ಕುರುಡುನಡೆ ಹೀಗೆ ಜೀವನ ಎದರಿಸುವ ದ್ವಂದ್ವಗಳ ಸೆಣೆಸಾಟದ ಒಂದು ಉತ್ತಮ ಚಿತ್ರಣ ಜೋಗವ್ವ ಕಾದಂಬರಿ. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಒಂದು ಸಣ್ಣ ಊರಿನಲ್ಲಿ ಸಾಮಾನ್ಯರಂತೆ ಜೀವಿಸುತ್ತಿದ್ದ ವಿಷ್ಣಪ್ಪನ ಬಾಳಿನ ವೈರುಧ್ಯಗಳನ್ನು ಮಡಿಲು ತುಂಬಿಕೊಂಡೇ ಪ್ರವೇಶಿಸಿದವಳು ಗಿರಿಜೆ, ಅವರದು ಅಂತರ್ಜಾತೀಯ ವಿವಾಹ; ಕಾಲೇಜಿನ ಈ ಸಹಪಾಠಿ ಬಡ ಕೊರಚರ ಮನೆಯಿಂದ ಬಂದವಳಾದರೂ, ತಾನು ಬೆಳೆದ ಪರಿಸರಕ್ಕೆ ಮೀರಿದ ಚಿಂತನಶೀಲೆ, ಆದರ್ಶವಾದಿ, - ಅಂಕದ ಪರದೆ ಏಳುವ ವೇಳೆ, ಇಂಥ ಪ್ರಬುದ್ದ ಮನಸಿನಾಕೆಯ ತಲೆಗೂದಲು ಸ್ವಲ್ಪ ದಿನ ಬಾಚದೇ ಬೆಳೆದ ಕಗ್ಗಂಟೇ ಜೋಗವ್ವನ ಜಡೆಯ ರೂಪದಲ್ಲಿ ಅತ್ತೆ ಮೈದುನ ನಾದಿನಿಯರ ಕಣ್ಣು ಕುಕ್ಕುತ್ತದೆ, ಇವಳ ಕೊರಳಿಗೆ ಉರುಳಾಗುತ್ತದೆ; ಇದೇ ತಮ್ಮ ಏಳು ಬೀಳುಗಳ ನಿಗೂಢ ರಸಹಸ್ಯದ ಅಡಗುತಾಣವಾಗಿ ಕಂಡು, ಗಿರಿಜೆಯಲ್ಲಿ ದೇವಿಯನ್ನು ಆವಾಹಿಸುವ ಪ್ರಯತ್ನ ನಡೆಯುತ್ತದೆ.

'ಕೈ ಹಿಡಿದ ಕುರುಡ ಗಂಡನಿಗೇ ಕಾಣದಿದ್ದಾಗ, ತಾನು ನೋಡಿದರೆಷ್ಟು ಬಿಟ್ಟರೆಷ್ಟು ಅಂದೆಯಂತಲ್ಲ ತಾಯಿ, ನೀನೆಂಥ ಪತಿವ್ರತೆಯಾ ' ಎನ್ನುತ್ತ ಗಾಂಧಾರಿಯ ಕಣ್ಣಿಗೆ ಬಟ್ಟೆ ಕಟ್ಟಿದವರು ನಾವೇ ಅಲ್ಲವೇ? ಹೀಗೇ, ಜಗತ್ತು ಬದಲಾದರೂ ತಾವು ಹಳೆಯದಕ್ಕೇ ಏಕೆ ಜೋತುಬಿದ್ದವರೆಂಬುದನ್ನು ಸಮರ್ಥಿಸಿಕೊಳ್ಳುವ ಈಶ್ವರಪ್ಪಗಳು, ಆ ಪದ್ಧತಿಗಳನ್ನೇ ನಡೆಸಿಕೊಂಡು ಹೋಗುವ ಅನಿವಾರ್ಯತೆಯನ್ನು ಬೋಧಿಸುವ ಭೀಮಣ್ಣಗಳು, ಹಕ್ಕೊತ್ತಾಯಗಳನ್ನು ಹೆಕ್ಕಿ ಸೊಸೆಯರನ್ನು ಕುಕ್ಕುವ, ಹುರಿದು ಮುಕ್ಕುವ ರೇಣುಕಜ್ಜಿಗಳೂ, ಇವೆಲ್ಲವನ್ನೂ ಪ್ರತಿಭಟಿಸುವ ಕಥಾ ನಾಯಕಿಯೊಂದಿಗೆ ಮೂಕ ಪ್ರೇಕ್ಷಕನಾಗುವ ಅಸಹಾಯಕ ಗಂಡ ಎಷ್ಟಪ್ಪನೂ ಕಾದಂಬರಿಯುದ್ದಕ್ಕೂ ನಮ್ಮನ್ನು ಭೇಟಿಯಾಗುತ್ತಾರೆ, - ಈ ನಡುವೆ ಮಿಂಚುವ, ವಾರಪೂರ್ತಿ ದೇವಿಯ ಹೆಸರಿನಲ್ಲಿ ವಿವಿಧ ಸೇವೆಯಲ್ಲೇ ತೊಡಗಿದ್ದ ನಿತ್ಯ ಜೋಗವ್ವ ಚಂದ್ರವ್ವನದು ವಿಶಿಷ್ಟ ಪಾತ್ರ ತನ್ನ ಅನುಭವಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಇವಳಿಗೆ ಜಗತ್ತು ಒಂದು ಕೈಗನ್ನಡಿಯಿದ್ದಂತೆ; ತನ್ನ ನಗು-ಅಳುಗಳೇ ಜಗತ್ತಿನ ನಲಿವು-ನೋವುಗಳು, ಗಿರಿಜೆಯನು. ತನ್ನಂತಾಗಿಸಿಕೊಳ್ಳಲು ಹವಣಿಸಿದ ಇವಳ ಜಿದ್ದು ಮುಸುಕಿನ ಗುದ್ದಾಗಿಯೇ ಉಳಿಯುತ್ತದೆ. ಕೊನೆಗೆ ಗಿರಿಜೆ ಹೇಗೆ ಒಲ್ಲದ ಮನಸ್ಸಿನ ಒಪ್ಪಿಗೆ ಸೂಸಿ ಜೋಗವ್ವಳಾದಳು, ನಿಷ್ಕರುಣೆಯಿಂದ ವಿಧಿ ಬೀಸಿದ ಬಿರುಗಾಳಿಗೆ ತತ್ತರಿಸಿ ಹೋದರೂ, ಕೈ ಹಿಡಿದ ನಲ್ಲನಿಗೆ ಕೊನೆಯವರೆಗೂ ಯಾವ ಬಗೆಯಲ್ಲಿ ಆಸರೆಯಾಗಿ ನಿಂತಳು ಎಂಬುದೆಲ್ಲವನ್ನು ಕುಮಾರ ಬೇಂದ್ರೆ ತಮ್ಮ ಚೊಚ್ಚಲ ಕಾದಂಬರಿ 'ಜೋಗವ್ವ'ದಲ್ಲಿ ಸರಳ ಶೈಲಿಯಲ್ಲಿ ಸಮರ್ಥವಾಗಿ ನಿರೂಪಿಸಿದ್ದಾರೆ. ದೇಸಿಯ ಸೊಗಡು, ಆಡುಭಾಷೆಯ ಸೊಗಸು, ಮಾತುಕತೆಯಲ್ಲಿ ಲವಲವಿಕೆ, ಪಾತ್ರಪೋಷಣೆಯಲ್ಲಿ ಬಂಧುರತೆ, ಕತೆಗೆ ಇಂಭನ್ನೀವ ಪ್ರಸಂಗಗಳ ಚಿತ್ರಣದಲ್ಲಿ ಕುಸುರಿಯ ಕೌಶಲ್ಯ ಮತ್ತು ಸಹಜತೆ ಕಾದಂಬರಿಯ ಮೆರಗುಗಳು ಕಂಗೊಳಿಸುತ್ತವೆ. 

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books