ಇನ್ನೊಂದೇ ದಾರಿ-ಡಾ. ಶಿವರಾಮ ಕಾರಂತ ಅವರ ಕಾದಂಬರಿ. ಕಥಾನಾಯಕ ಜಯರಾಮ ಸ್ವತಂತ್ರ ವಿಚಾರವಾದಿ. ಸಾಂಪ್ರದಾಯಿಕ ವಿಚಾರಸರಣಿಯನ್ನು ಅವನು ಒಪ್ಪುವುದಿಲ್ಲವಾದರೂ, ನಿತ್ಯ ಜೀವನದಲ್ಲಿ ಉಳಿದವರ ಶ್ರದ್ಧೆ ನಂಬಿಕೆಗಳ ವಿಚಾರದಲ್ಲಿ ಸಹಾನುಭೂತಿ- ಗೌರವಾಭಾವಗಳನ್ನು ತಳೆದಿರುತ್ತಾನೆ. ಶಿವಮೊಗ್ಗೆಯ ಆಸ್ಪತ್ರೆಯಿಂದ ತಾಯಿ ಸತ್ತ ಮಗುವೊಂದನ್ನು ತಂದು ಸಾಕುತ್ತಾನೆ. ಅದನ್ನು ನೋಡಿಕೊಳ್ಳಲು ಉಮಾ ಎಂಬ ದಾದಿಯನ್ನು ನೇಮಿಸುತ್ತಾನೆ. ಉಮಾ ವೇಶ್ಯೆ ಕುಲಕ್ಕೆ ಸೇರಿದವಳು ಎಂಬ ಕಾರಣಕ್ಕಾಗಿ, ಆಕೆಗೆ ಸರಿಯಾದ ನಂಟುತನ ಸಿಗದೇ ಹೋದರೆ ಆಕೆಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಇಂತಹ ಮನಸ್ಸಿನ ಜಯರಾಮ, ತನ್ನ ಸಹೋದರ ಮಾಡಿಕೊಂಡ ಅಂತರ್ ಜಾತಿಯ ವಿವಾಹದಿಂದ ಪಾಪ ತಟ್ಟೀತೆಂದು ನೊಂದ ತಾಯಿಗೆ 'ಗೋದಾನ ಮಾಡು' ಎಂಬ ಸಲಹೆ ನೀಡುತ್ತಾನೆ. ಅದೊಂದು ಬಗೆಯ ಮಾನಸಿಕ ಚಿಕಿತ್ಸೆ ಎಂಬುದನ್ನು ಅವನು ತಿಳಿದಿರುತ್ತಾನೆ. ಅಂತಹ ನಂಬಿಕೆಯ ನೆರಳಿನಲ್ಲಿ ಬದುಕಿದ ತನ್ನ ತಾಯಿಗೆ ಆ ಚಿಕಿತ್ಸೆ ಫಲಕಾರಿಯಾಗಬಹುದೆಂಬ ಅರಿವು ಅವನಿಗಿದೆ. ಅದಕ್ಕಿಂತ ಹೆಚ್ಚಾಗಿ, ತನ್ನ ಪ್ರೀತಿಯ ತಾಯಿಯ ಮನಸ್ಸಿಗೆ ಸಮಾಧಾನ ಕೊಡಬಲ್ಲ ಧರ್ಮದ ಕುರಿತು ಅವನಿಗೆ ನಂಬಿಕೆ ಇಲ್ಲದಿದ್ದರೂ, ಅಸಡ್ಡೆಯಿಲ್ಲ, ಜಯರಾಮ ಎಲ್ಲರೊಂದಿಗೂ ಇದೇ ರೀತಿಯ ಅನುಕಂಪದಿಂದ ಕೂಡಿದ ತಿಳಿವಳಿಕೆಯಿಂದ ವರ್ತಿಸುತ್ತಾನೆ. ಆದರೆ, ತಾನು ಮಾತ್ರ ತನ್ನ ಬದುಕನ್ನು ವೈಚಾರಿಕತೆಯ ಮೂಸೆಯಲ್ಲಿ ತಿಕ್ಕಿ, ತೀಡಿ, ತನಗೆ ಸರಿಕಂಡ ರೀತಿಯಲ್ಲಿಯೇ ನಡೆಯುತ್ತಾನೆ. ಆದರೆ, ತನ್ನ ಆ ಪ್ರಯತ್ನ, ಅದರಿಂದ ಹೊಳೆಯುವ ಬೆಳಕು, ಅದರಿಂದ ಕಾಣಿಸುವ ಆಕಾರಗಳನ್ನು ಇತರರು ಒಪ್ಪದೆ ಹೋದರೆ? ಎಂಬ ಸಂದೇಹ ಅವನಲ್ಲುಂಟಾದಾಗ, ಅವನ ಗೆಳತಿ ಸುಮತಿ ಅದಕ್ಕೆ ನೀವೇಕೆ ದುಃಖ ಪಡಬೇಕು? ನಿಮಗೆ ಸತ್ಯವೆಂದು ತೋರಿದ್ದನ್ನು ನೀವು ಹೇಳಿ ಎಂದು ಪ್ರೋತ್ಸಾಹಿಸುತ್ತಾಳೆ. ಹಾಗೆ ಹೇಳಿದರೆ ಸಾಕೇ ಸುಮತಿ ? ಹೇಳುವುದೂ ಕಷ್ಟ. ಹೇಳಬೇಕಾದುದು ಯಾಕೆ ? ಬಾಳುವುದಕ್ಕಾಗಿ ಹೇಳಬೇಕು. ಬಾಳದೆ ಹೋದರೆ ಬೋಳು ಮಾತಾದೀತು'' ಎಂದೆನ್ನುತ್ತಾನೆ. ತೋರಿಸಲಾಗದ ಆದರ್ಶಗಳನ್ನು ಬರೇ ಬೋಳು ಮಾತಿನಿಂದ ತೋರಿಸಿಕೊಳ್ಳುವುದು ನಿಷ್ಟ್ರಯೋಜಕ ಎಂಬ ಭಾವನೆ ಆತನದು. ಅದು ಕಾದಂಬರಿಯ ಸಂದೇಶವೂ ಹೌದು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE