ಕಾದಂಬರಿಕಾರ್ತಿ ಎಚ್ ಜಿ ರಾಧಾದೇವಿ ಅವರ ವಿಭಿನ್ನ ಸಾಮಾಜಿಕ ಕಾದಂಬರಿ ಹೃದಯ ರಥದಲ್ಲಿ.ಇಲ್ಲಿ ನಾಯಕ- ನಾಯಕಿಯರ ಪ್ರೇಮ ನಿವೇದನೆಯಿಲ್ಲ. ಹುಸಿ ಮುನಿಸು, ಲಜ್ಜೆ ಇಲ್ಲವೇ ಇಲ್ಲ. ವೈವಾಹಿಕ ಬದುಕಿನಲ್ಲಿ ಒಲವೇ ಜೀವನ ಸಾಕ್ಷಾತ್ಕಾರ ಅನ್ನುವುದಕ್ಕಿಂತ ಬರೀ ಲೆಕ್ಕಾಚಾರ. ಹಣ- ಕಾಸು-ಒಡವೆ- ವಸ್ತ್ರ- ಬಂಗ್ಲೆ- ಅಂತಸ್ತುಗಳು ಮನುಜ ಸಂಬಂಧಗಳಿಗಿಂತ ಮುಖ್ಯವೆನಿಸಿ ಸ್ವಾರ್ಥವೇ ವಿಜೃಂಭಿಸುತ್ತದೆ.
ದುಬೈನಲ್ಲಿರುವ ಗಂಡ ಮೋಹನ ಎರಡು ವರ್ಷಗಳಿಗೊಮ್ಮೆ ಸ್ವದೇಶಕ್ಕೆ ಬರುವಾತ. ದುಬೈನಲ್ಲಿ ಮನೆ ಮಾಡಲು ಖರ್ಚು ಜಾಸ್ತಿ, ದುಡ್ಡು ಉಳಿಸಲಾಗದು ಎಂಬ ಕಾರಣಗಳು!ಹಾಗಾಗಿ ಸ್ವದೇಶದಲ್ಲಿರುವ ಹೆಂಡತಿ ಚಂದ್ರಿಕಾಗೆ ತಿಂಗಳಿಗೆ ಮೂರು ಸಾವಿರ ಕೊಟ್ಟು ತವರಲ್ಲಿ ಅಥವಾ ಅತ್ತೆ- ಮಾವಂದಿರ ಅಥವಾ ಮುಂಬಯಿನ ಚಿಕ್ಕಮ್ಮನ ಮನೆಯಲ್ಲಾದರೂ ಇರಬಹುದೆಂಬ ಆಯ್ಕೆಯ ಸ್ವಾತಂತ್ರ್ಯ! ಕಡು ಬಡತನದ ಉಡುಪರ ನಾಲ್ವರು ಹೆಣ್ಣುಮಕ್ಕಳಲ್ಲಿ ಎಸ್ಸೆಲ್ಸಿ ಫ಼ೇಲಾಗಿದ್ದ ಚಾರುಮತಿ, ವಸುಮತಿಯ ನಂತರದ ಪಿಯುಸಿ ಫ಼ೇಲಾಗಿದ್ದ ಚೆಲುವೆ ಚಂದ್ರಿಕಾಳನ್ನು ಮೋಹನ ವರದಕ್ಷಿಣೆ, ವರೋಪಚಾರವಿಲ್ಲದೆ ಮದುವೆಯಾದ. ಕೊನೆಯ ರಾಧಿಕಾ ಬಿ.ಕಾಂ ಮುಗಿಸಿ ಬ್ಯಾಂಕ್ ಕೆಲಸದಲ್ಲಿದ್ದು, ತಾನು ಪ್ರೀತಿಸಿದ ಮಾಧವನೊಂದಿಗೆ ಮದುವೆಯಾಗಲು ಹಣ ಕೂಡಿಡುತ್ತಿದ್ದಳು. ಮದುವೆಯಾದ ನಂತರ ಹದಿನೈದು ದಿನಗಳು ಮಾತ್ರ ಇದ್ದ ಗಂಡನ ಬಳಿಯೂ ತನ್ನ ಬದುಕಿನ ಭದ್ರತೆಗೆ ಅರವತ್ತು ಸಾವಿರ ವಸೂಲು ಮಾಡಿ ಸ್ವಾರ್ಥವನ್ನೇ ಸಾಧಿಸಿಕೊಳ್ಳುವ ಚಂದ್ರಿಕಾ, ಯಾವ ಸಂಬಂಧಗಳಲ್ಲೂ ವಿಶ್ವಾಸವಿಡದೆ ಗೆಳತಿ ಸಂಧ್ಯಾಳ ಸಹಾಯದಿಂದ , ಧೂರ್ತ , ಆಷಾಢಭೂತಿ ಗಂಡ ನಂತರ ಮಾರಲೆಂದೇ ಕೊಡಿಸಿದ ಬಂಗಾರವನ್ನು ತಾನೇ ಮಾರಿ , ಏಟಿಗೆ ಎದುರೇಟು ಕೊಟ್ಟು ಸ್ವತಂತ್ರ ಬದುಕು ಕಟ್ಟಿಕೊಳ್ಳುತ್ತಾಳೆ. ಗಂಡ ಹೆಂಡಿರಲ್ಲಿ ಸಾಮರಸ್ಯ ಕುದುರದೇ ಇದ್ದರೂ ಹದಿನೈದು ದಿನದ ದಾಂಪತ್ಯಕ್ಕೆ ಚಂದ್ರಿಕಾಗೆ ಒಬ್ಬ ಮಗ ಹುಟ್ಟಿದ. ಅಲ್ಲದೆ ಮೋಹನ್ ಮತ್ತೊಂದು ಮದುವೆಯಾದ. ಆ ಮದುವೆಗೂ ದೀರ್ಘಾಯುಷ್ಯವಿರಲಿಲ್ಲ. ಗತ ಬದುಕಿನ ಮೋಸವನ್ನು ಮುಚ್ಚಿಟ್ಟ ಎರಡನೇ ಪತ್ನಿ ಲಲಿತಾ, ಮೋಹನನೊಂದಿಗೆ ಬಾಳಲಾರದೆ ಮತ್ತೊಬ್ಬನ ಆಮಿಷಕ್ಕೆ ಮರುಳಾದಳು. ಚಂದ್ರಿಕಾಳ ಅಪಾರ ಶ್ರಮ ಅವಳನ್ನು ಎತ್ತರಕ್ಕೆ ಕರೆದೊಯ್ದಿತ್ತು. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹೆತ್ತವರಿಗೂ , ಅಕ್ಕಂದಿರಿಗೂ ಬದುಕುವ ಮಾರ್ಗ ತೋರಿದಳು, ಕೇವಲ ದೊಡ್ಡಸ್ತಿಕೆಗಾಗಿ! ಮೋಹನ ದುಬೈನಿಂದ ಮುಂಬೈಗೆ ವಾಪಾಸು ಬಂದು ಕೌಟುಂಬಿಕ ಹಾಗೂ ವ್ಯವಹಾರಿಕ ಬದುಕು ಎರಡರಲ್ಲೂ ಸೋತಿದ್ದ. ಗೆಳೆಯ ರಮಾಕಾಂತ ಸಹಾಯ ಹಸ್ತ ಚಾಚಿ ಮಂಗಳೂರಿಗೆ ಕರೆತಂದ. ಇತ್ತ ಶ್ರೀಮಂತ ಚಂದ್ರಿಕಾಳ ಮರು ಮದುವೆಗೆ ಪ್ರಯತ್ನ...ಪ್ರೀತಿ , ಪ್ರೇಮದಿಂದಲ್ಲ ಮತ್ತದೇ ದುಡ್ಡೇ ದೊಡ್ಡಪ್ಪ...ಹಣ ಎಂದರೆ ಹೆಣ ಕೂಡಾ ಬಾಯಿ ಬಿಡುತ್ತದೆ ಅಂತಾರಲ್ಲ ಹಾಗೆ. ಬದುಕಿನ ರಥೋತ್ಸವ ಸಾಗಲು ಪ್ರೀತಿ, ನಂಬಿಕೆಗಿಂತ ಹೆಚ್ಚಾಗಿ ಕೆಚ್ಚು, ಸ್ವಾಭಿಮಾನ ತುಂಬಿಕೊಂಡವಳು ಚಂದ್ರಿಕಾ. ಕೊನೆಗೂ ಆಕೆಯ ಹೃದಯದ ಆಂತರ್ಯದಲ್ಲಿ ಭಾವನೆಗಳ ಲಹರಿ ಮೂಡಲೇ ಇಲ್ಲ! ಇದೊಂತರಹ ಸುಖಾಂತವೂ ಅಲ್ಲದ ದುಖಾಂತವೂ ಅಲ್ಲದ , ನಮ್ಮ ಬದುಕಿಗೆ ನಾವೇ ಶಿಲ್ಪಿ ಎಂದುಕೊಂಡ ದಿಟ್ಟ ಹಾಗೂ ಚಾಣಾಕ್ಷ ಹೆಣ್ಣಿನ ಕಥೆ.
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE