ಖ್ಯಾತ ಚಿಂತಕ ಶಿವರಾಮ ಕಾರಂತರ ಕಾದಂಬರಿ -ಹೆತ್ತಳಾ ತಾಯಿ. ದಾಂಪತ್ಯ ಸುಖ ಎಂಬುದು ಗಂಡ-ಹೆಂಡತಿ ಇಬ್ಬರನ್ನೂ ಅವಲಂಬಿಸಿರುತ್ತದೆ. ಇಬ್ಬರ ಮಧ್ಯೆ ಮೇಲರಿಮೆ-ಕೀಳರಿಮೆ ಇತ್ಯಾದಿ ಕಾಡಿದ್ದರೆ ಖಂಡಿತವಾಗಿಯೂ ದಾಂಪತ್ಯದಲ್ಲಿ ವಿರಸ ತಲೆದೋರುತ್ತದೆ. ವಿರಸ ತಲೆದೋರಿದರೆ ಆಗಿಂದಾಗ್ಗೆ ಶಮನ ಮಾಡಬೇಕು ಇಲ್ಲವಾದರೆ ಅವು ದೊಡ್ಡದಾಗುತ್ತದೆ ಎಂಬ ಎಚ್ಚರಿಕೆಯ ವಸ್ತುವೇ ಈ ಕಾದಂಬರಿ.
ನಾಗಪ್ಪ ದಂಪತಿಯ ಪುತ್ರಿ ಗಿರಿಜಾ; ಅವಳನ್ನು ಮಂಗಳೂರಿನ ವಕೀಲ ಸುಬ್ಬಯ್ಯನೊಂದಿಗೆ .ಮದುವೆಯಾಗುತ್ತದೆ. ನಂತರ ಗಿರಿಜೆಯ ಹೆಸರು ಕುಸುಮೆ ಎಂದಾಗುತ್ತದೆ. ಸಾಕಷ್ಟು ವರ್ಷಗಳಾದರೂ ಮಕ್ಕಳಾಗುವುದಿಲ್ಲ ಎರಡು ಬಾರಿ ಗರ್ಭೀಣಿಯಾಗಿ ಮಕ್ಕಳು ಸಾಯುತ್ತವೆ. ತನಗೆ ಮಕ್ಕಳ ಯೋಗವಿದ್ದು, ಪತಿ ಸುಬ್ಬಯ್ಯನಿಗೆ ಮಕ್ಕಳ ಯೋಗವಿಲ್ಲ ಎಂದು ಒಬ್ಬ ಜ್ಯೋತಿಷಿಯು ಭವಿಷ್ಯ ಹೇಳುತ್ತಾನೆ. ಈ ಮಧ್ಯೆ, ವೆಂಕಪ್ಪಯ್ಯನೊಂದಿಗೆ ಸಲಿಗೆಯಿಂದ ಮಾತನಾಡುವ ಪತ್ನಿ ಕುಸುಮೆ ತನ್ನೊಂದಿಗೇಕೆ ಮಾತನಾಡುತ್ತಿಲ್ಲ ಎಂಬ ಸಂಶಯ ಬಂದಿದ್ದರೂ ‘ಅವಳ ತಾಳಕ್ಕೆ ತಕ್ಕ ಹಾಗೆ ಕುಣಿಯುವವನಲ್ಲ’ ಎಂದು ಸುಮ್ಮನಿರುತ್ತಾನೆ- ಸುಬ್ಬಯ್ಯ. ಈ ಮಧ್ಯೆ, ಕುಸುಮೆಗೆ ಮಗು ಜನಿಸುತ್ತದೆ. ಐದು ವರ್ಷದ ನಂತರ, ಮಗು ಹೆರುವ ಬಯಕೆಯಾಗಿ ಮತ್ತೆ ವೆಂಕಪ್ಪಯ್ಯನೊಂದಿಗೆ ಕೂಡುತ್ತಾಳೆ. ಹೆಣ್ಣು ಮಗು ಜನಿಸುತ್ತದೆ. ಆದರೆ, ಒಂದು ಕಾಯಿಲೆಯಿಂದ ಬಳಲುತ್ತಿದ್ದ ಸುಬ್ಬಯ್ಯನಿಗೆ ಪತ್ನಿಯಿಂದ ದೂರವೇ ಇರುವಂತೆ ವೈದ್ಯರು ಸಲಹೆ ನೀಡಿರುತ್ತಾರೆ. ಆದರೆ, ಕುಸುಮೆಗೆ ಮಗು ಜನಿಸಿದ್ದು, ಅವನನ್ನುಸಂಶಯಕ್ಕೀಡು ಮಾಡುತ್ತದೆ. ವೆಂಕಪ್ಪನ ಸಹವಾಸವೇ ಎಂದು ಸುಬ್ಬಯ್ಯನಿಗೆ ಖಚಿತವಾಗಿ, ಇನ್ನು ಮುಂದೆ ಮನೆ ಬರಬೇಡ ಎಂದು ವೆಂಕಪ್ಪಯ್ಯನಿಗೆ ಪತ್ರ ಬರೆಯುತ್ತಾನೆ. ಕುಸುಮೆಗೆ ಸಿಟ್ಟು ಬರುತ್ತದೆ. ಕೊನೆಗೂ, ಸುಬ್ಬಯ್ಯ ಆ ಕಾಯಿಲೆಯಿಂದ ಸಾಯುತ್ತಾನೆ. ಇಲ್ಲಿಗೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ.
ಧಾರವಾಡದ ಸಮಾಜ ಪುಸ್ತಕಾಲಯವು 1945ರಲ್ಲಿ (ಪುಟ: 155) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE