‘ಗೃಹಪುರಾಣ’ ಕೃತಿಯು ಲೇಖಕ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ. ಈ ಕೃತಿಗೆ ಖ್ಯಾತ ಚಿಂತಕ ಜ.ಹೊ.ನಾರಾಯಣಸ್ವಾಮಿ ಮುನ್ನುಡಿ ಬರೆದು ‘‘ಕಾದಂಬರಿಯನ್ನು ಓದಲು ಕೈಗೆತ್ತಿಕೊಂಡಾಗ ಅದರಲ್ಲಿರುವ ಕಥಾವಸ್ತು, ನಿರೂಪಣಾ ಶೈಲಿ, ಬಳಸಿರುವ ಭಾಷೆ, ಕಥೆಯ ತಂತ್ರಗಾರಿಕೆ ಇವುಗಳ ಸೆಳೆತಕ್ಕೆ ಪುಳಕಿತನಾದೆ, ಹಾಡ್ಲಹಳ್ಳಿಯವರದ್ದು ಕಥೆ ಕಾದಂಬರಿಯಲ್ಲಿ ಪಳಗಿದ ಕೈ ಎಂಬುದು ಶೃತವಾಯ್ತು. ಹಾಗಾಗಿ, ಗೃಹಪುರಾಣ ಕಾದಂಬರಿ ಸಾಹಿತ್ಯ ಕ್ಷೇತ್ರಕ್ಕೆ ಸಂದ ಮಹತ್ವದ ಕೊಡುಗೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ಪ್ರಕೃತಿಯನ್ನು ವರ್ಣಿಸುವಲ್ಲಿ ನಾಗರಾಜ್ ಪರಿಣತರು. ಒಂದು ಸಂದರ್ಭದಲ್ಲಿ ಶಿವಣ್ಣ ರಾತ್ರಿ ಮಂಜಿನಲ್ಲಿ ಸಿಕ್ಕಿಹಾಕಿಕೊಂಡು ಅನುಭವಿಸಿದ ಸನ್ನಿವೇಶವನ್ನು ಓದಿದಾಗ ಮಡಿಕೇರಿಯಲ್ಲಿ ಸುರಿವ ಮಂಜಿನ ರುದ್ರ ಗಂಭೀರತೆಯ ಅನುಭವವಾಗುತ್ತದೆ. ಅಲ್ಲಿಯ ಮಳೆಯ, ಬೆಟ್ಟಗುಡ್ಡ ಗಿರಿಶ್ರೇಣಿಗಳ, ದಟ್ಟಡವಿಯ ಅತ್ಯಪೂರ್ಣ ಅನುಭವವನ್ನು ಓದುಗ ಈ ಕಾದಂಬರಿಯಿಂದ ತನ್ನದಾಗಿಸಿಕೊಳ್ಳಬಹುದು. ವಿಶೇಷವೆಂದರೆ ಈ ಕಾದಂಬರಿ ಕೊನೆಯಲ್ಲಿ ಪಡೆದುಕೊಳ್ಳುವ ತಿರುವು ವಿಶ್ವದ ಶ್ರೇಷ್ಠ ಕಥೆಗಾರನಾದ ಅಮೆರಿಕದ ಓ ಹೆನ್ರಿಯ ಕಥೆಗಳಲ್ಲಿಯಂತೆ ಓದುಗನ ನಿರೀಕ್ಷೆಯನ್ನೂ ಮೀರಿ ಕಾದಂಬರಿ ಮುಕ್ತಾಯವಾಗುತ್ತದೆ. ಹಾಗೆ ಮುಕ್ತಾಯಗೊಳ್ಳುವುದರಿಂದಲೇ ಈ ಕಾದಂಬರಿ ಅಪ್ಯಾಯಮಾನವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...
READ MORE