ಬ್ರಹ್ಮ

Author : ಪೆರ್ಲ ಗೋಪಾಲಕೃಷ್ಣ ಪೈ

Pages 294

₹ 250.00




Year of Publication: 2020
Published by: ವಸಂತ ಪ್ರಕಾಶನ
Address: ನಂ. 360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560011

Synopsys

‘ಬ್ರಹ್ಮ’ ಲೇಖಕ ಗೋಪಾಲಕೃಷ್ಣ ಪೈ ಅವರ ಕಾದಂಬರಿ. ಕರಾವಳಿಯ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ/ತಾಳಮದ್ದಳೆಗಳ ಸ್ಪೂರ್ತಿಯಿಂದ ರಚನೆಯಾದ ಈ ಕಾದಂಬರಿ ಮಹಾಭಾರತಕ್ಕೆ ಸಂಬಂಧಿಸಿದ್ದು, ಹೆಸರೇ ಸೂಚಿಸುವಂತೆ ಇದೊಂದು ಪೌರಾಣಿಕ ಕಾದಂಬರಿ. ಇಲ್ಲಿ ಕೌಶಿಕ ಪರ್ವ, ದ್ವೈಪಾಯನ ಪರ್ವ, ಕನೋಜ ಪರ್ವ, ವ್ಯಾಸ ಪರ್ವ, ಮನು ಪರ್ವ, ತ್ರಿಶಂಕು ಪರ್ವ, ಮನು ಪರ್ವ, ಪಿಂಜಲಾ ಪರ್ವ, ವಿಶ್ವಾಮಿತ್ರ ಪರ್ವ, ಮೇನಕಾ ಪರ್ವ, ಹಾಗೂ ವಸಿಷ್ಠ ಪರ್ವ ಎಂಬ ಹತ್ತು ಪರ್ವಗಳನ್ನು ಕಾದಂಬರಿ ಒಳಗೊಂಡಿದೆ.

About the Author

ಪೆರ್ಲ ಗೋಪಾಲಕೃಷ್ಣ ಪೈ

ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...

READ MORE

Reviews

ಬ್ರಹ್ಮ ಕೃತಿಯ ವಿಮರ್ಶೆ- ಹೊಸ ಮನುಷ್ಯ

ನಮ್ಮ ಪ್ರಾಚೀನ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಮತ್ತೆ ಮತ್ತೆ ನೋಡುವ, ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರತಿಯೊಂದು ತಲೆಮಾರೂ ತನ್ನಕಾಲದ ಅನುಭವ ಮತ್ತು ಅರಿವಿನ ಬೆಳಕಿನಲ್ಲಿ ಪುರಾಣ, ಇತಿಹಾಸ ಮತ್ತು ಪರಂಪರೆಗಳನ್ನು ಮತ್ತೆಮತ್ತೆ ನೋಡುವ, ಮಾರ್ಪಡಿಸಿಕೊಳ್ಳುವ, ಹೊಸಹೊಸ ಅರ್ಥ, ಧ್ವನಿ ಸಾಧ್ಯತೆಗಳನ್ನು ಕಂಡುಕೊಳ್ಳುವ ಪರಿಪಾಠ ಎಲ್ಲ ದೇಶಗಳಲ್ಲಿಯೂ ಭಾಷೆಗಳಲ್ಲಿಯೂ ನಡೆದುಬಂದಿದೆ. ಇಂಥ ಪ್ರಯತ್ನಗಳಲ್ಲಿ ಮಹಾಕಾವ್ಯಗಳ, ಪುರಾಣಗಳ ಮೂಲಸ್ವರೂಪದಲ್ಲಿ ಬದಲಾವಣೆಯಾಗದಿದ್ದರೂ ಇವುಗಳ ಒಳನೇಯ್ದೆಯಲ್ಲಿ, ವಿನ್ಯಾಸಗಳಲ್ಲಿ, ಪಾತ್ರಗ್ರಹಿಕೆಯಲ್ಲಿ ಬದಲಾವಣೆಗಳು, ರೂಪಾಂತರಗಳು ಆಗಿ ಹೊಸ ಅರ್ಥಸಾಧ್ಯತೆಗಳು ದಕ್ಕುವುದು ಉಂಟು. ಹೊಸಬೆಳಕಿನಲ್ಲಿ ವರ್ತಮಾನದ ಬದುಕಿಗೆ ಪುರಾತನ ಕೃತಿಗಳು ಹತ್ತಿರವಾಗುತ್ತವೆ.

ಇಂಥ ಪ್ರಯತ್ನಗಳು ನಡೆದಾಗ, ವ್ಯಾಸ ವಾಲ್ಮೀಕಿಯರ ಈ ಮಹಾಕಾವ್ಯಗಳು ತಮ್ಮ ಮೂಲಸ್ವರೂಪದಲ್ಲಿಯೇ ಉಳಿದುಕೊಂಡಿರುತ್ತವೆ ಎಂದು ಹೇಳಲಾಗದು. ಈ ಮಹಾಕವಿಗಳ ಹೆಸರಿನಲ್ಲಿ ಕೆಲವು ಹಿತಾಸಕ್ತಿಗಳು ಪ್ರಕ್ಷಿಪ್ತಗಳನ್ನು ಸೇರಿಸಿರುವುದು ಅಸಂಭವವೇನಲ್ಲ. ಇಂಥ ಪ್ರಕ್ಷಿಪ್ತಗಳನ್ನು ಕತ್ತರಿಸಿಹಾಕಿ ಹೊಸನೋಟವನ್ನು ಪ್ರತಿಭಾವಂತರು ಕೊಟ್ಟಿರುವುದೂ ಇದೆ. ಜಡ-ಚೇತನಗಳ ವಿಭಜನೆಯನ್ನೊಪ್ಪದ ಕುವೆಂಪು ಅಹಲ್ಯೆ  ಪ್ರಸಂಗಕ್ಕೆ ಬೇರೆಯೇ ಅರ್ಥ, ಧ್ವನಿಯನ್ನು ತಂದಿರುವುದನ್ನು ಗಮನಿಸಬಹುದು. ಶಂಬೂಕನ ಪ್ರಸಂಗವೂ ಕುವೆಂಪು ಕೈಯಲ್ಲಿ ಬದಲಾವಣೆಯನ್ನು ಪಡೆದಿದೆ. ಇನ್ನೂ ಕೆಲವು ಉದಾಹರಣೆಗಳು ಕುವೆಂಪು ಅವರಲ್ಲಿಯೇ ಸಿಕ್ಕುತ್ತವೆ. ಈ ಕಾದಂಬರಿಕಾರರಾದ ಗೋಪಾಲಕೃಷ್ಣ ಪೈ ಅವರ ಹೊಸ ಕಾದಂಬರಿ 'ಬ್ರಹʼ ಇಂಥ ಒಂದು ಪ್ರಯತ್ನದಲ್ಲಿ ಮೈತಾಳಿದ ಕೃತಿ. ವ್ಯಾಸಮಹರ್ಷಿಯ ಮಹಾಭಾರತಕ್ಕೆ ತಾವು ಮತ್ತೆ ಹೊರಳಲು ಕಾರಣವೇನು ಎಂಬುದನ್ನು ಪೈ ಅವರು ಹೇಳಿಲ್ಲ. ಆದರೆ ಅರ್ಪಣೆಯ ಪುಟದಲ್ಲಿ ಪರೋಕ್ಷ ಸೂಚನೆಗಳಿವೆ. ಪ್ರತಿಯೊಂದು ಪೌರಾಣಿಕ ಪಾತ್ರವನ್ನೂ ವಿಶ್ಲೇಷಿಸುತ್ತಾ, ಆ ಪಾತ್ರಗಳಾಗಲೀ, ಘಟನೆಗಳಾಗಲೀ ನಾವು ತಿಳಿದುಕೊಂಡಷ್ಟೇ ಅಲ್ಲ, ಅದರಾಚೆಗೂ ಧ್ವನಿ ವಿಸ್ತಾರಗಳಿವೆ ಎಂಬ ಅರಿವನ್ನು ಮೂಡಿಸುವ ಕಾಯಕ ಇಂದು ನಿನ್ನೆಯದಲ್ಲ, ನಾನು ಅರ್ಥಮಾಡಿಕೊಳ್ಳಲು ಆರಂಭಿಸಿದ ಬಾಲ್ಯದ ದಿನಗಳಿಂದ ಹಿಡಿದು ಈಗಲೂ ನಡೆಯುತ್ತಿದೆ?”

'ಅದರಾಚೆಗೂ ಇರುವ ಧ್ವನಿವಿಸ್ತಾರಗಳನ್ನು ಹಿಡಿಯಲು ಪೈ ಈ ಕೃತಿಯಲ್ಲಿ ಅವಲಂಬಿಸಿರುವ ಮಾರ್ಗ 'ಪ್ರಜ್ಞೆಯದು. ಪುರಾಣ, ಮಹಾಕಾವ್ಯಗಳಿಗೆ ಎದುರಾದಾಗ ಪ್ರಜ್ಞೆಯ ಮಾರ್ಗ ಬಹಳ ಇಕ್ಕಟ್ಟಿನ, ಮಿತಿಗಳ ಮಾರ್ಗವಾಗಿಯೂ ತೋರಬಹುದು. ಆದರೆ ಈ ಮಾರ್ಗ ತರ್ಕದ ಕಡೆಗೆ, ಅನುಭವದ ಬೆಳಕಿನಲ್ಲಿ ಕಂಡುಕೊಳ್ಳುವ ಅರಿವಿನ ಕಡೆಗೆ ಚಲಿಸುವುದರಿಂದ ವರ್ತಮಾನದ ಬದುಕಿಗೆ ತೀರ ಪ್ರಸ್ತುತವಾಗಿರುವಂತೆ ಕಾಣಿಸುತ್ತದೆ. ಹೀಗಾಗಿಯೇ ಇಲ್ಲಿ ಪುರಾಣ, ಇತಿಹಾಸ ಮತ್ತು ವರ್ತಮಾನಗಳು ಬದಲಾಗುತ್ತ, ಒಂದು ಇನ್ನೊಂದಾಗುತ್ತ ಸಾಗುತ್ತವೆ.

ಮಹಾಭಾರತ ಒಂದು ಕಾಲಘಟ್ಟದಲ್ಲಿ ಆಗಿ ಹೋಗಿರುವ ಇತಿಹಾಸವಾಗಿರಬಹುದೇ? ವ್ಯಾಸರು ಕಟ್ಟಿದ ಕತೆ ಸೃಜನಶೀಲತೆಯ ಆಚೆಗೆ ಇರಬಹುದಾದ ಇತಿಹಾಸವನ್ನು ಹುಡುಕಿದ ಪ್ರಯತ್ನವಾಗಿರಬಹುದೇ ಇತ್ಯಾದಿ ಪ್ರಶ್ನೆಗಳು 'ಬ್ರಹ್ಮ'ದ ಹಿಂದೆ ಕ್ರಿಯಾಶೀಲವಾಗಿರುವಂತೆ ಕಾಣುತ್ತದೆ. ಈ ಕಾರಣದಿಂದಾಗಿಯೇ ಪೈ, ಮಹಾಭಾರತ ಕಥನವನ್ನು ಆಧುನಿಕ ವಿಚಾರಧಾರೆ ಮತ್ತು ಇತಿಹಾಸದ ಬದುಕಿನ ವಿನ್ಯಾಸಗಳ ಚೌಕಟ್ಟಿಗೆ ತಂದು ಜೋಡಿಸಲು ನೋಡುತ್ತಾರೆ. ಕಲ್ಪನಾವಿಲಾಸವನ್ನು ಬದಿಗೆ ಸರಿಸಿದಾಗಲೂ ಈ ಕಥನದ ಆಖ್ಯಾನಗಳು ನಮ್ಮ ಕೈಎಟುಕಿಗೆ ನಿಲುಕಬಹುದೇ ಎಂದೂ ನೋಡುತ್ತಾರೆ. ವಿಶ್ವಾಮಿತ್ರರು ಸೃಷ್ಟಿಸಿದ ತ್ರಿಶಂಕುಸ್ವರ್ಗ ಕೇವಲ ಕಾಲ್ಪನಿಕವಾಗಿರಬೇಕಾಗಿಲ್ಲ ಎಂದು ಹೇಳಲು ಇಲ್ಲಿ ಮಾಡಿಕೊಂಡಿರುವ ಬದಲಾವಣೆ ಪ್ರಜ್ಞೆಮಾರ್ಗದ ಮಿತಿಯನ್ನು ಹೇಳುತ್ತದೆ. ಆದರೆ ಪೈ ಈ ಪ್ರಸಂಗವನ್ನು ಇನ್ನೊಂದು ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ: ಪ್ರಭುತ್ವದ ಹಿಂಸೆಯ ಆತ್ಯಂತಿಕ ಸ್ವರೂಪ ಸೃಷ್ಟಿಸುವ ನರಕ ವಿಶ್ವಾಮಿತ್ರನನ್ನು ಅಲ್ಲಾಡಿಸಿ ಕಾಡುತ್ತದೆ. ಅವನ ಮನಸ್ಸನ್ನು ಬೇರೊಂದು ದಿಕ್ಕಿಗೆ ತಿರುಗಿಸುತ್ತದೆ. ಇದು ವಿಶ್ವಾಮಿತ್ರನ ಬದುಕಿನ ಬಹುದೊಡ್ಡ ತಿರುವಿಗೂ ಕಾರಣವಾಗುತ್ತದೆ. ಇದು ಪೈ ಅವರ ಶಕ್ತಿಯಾಗಿಯೂ ಕಾಣಿಸುತ್ತದೆ.

ಇನ್ನೊಂದು ಮುಖ್ಯ ಪ್ರಶ್ನೆಯನ್ನೂ ಪೈ ಅವರ ಈ ಕೃತಿ ಮೇಲಿಂದ ಮೇಲೆ ಮಥಿಸುತ್ತದೆ. ಸೃಜನಶೀಲಕ್ರಿಯೆ ಎನ್ನುವುದು ವ್ಯಕ್ತಿಯ ಅಂತರಂಗದ ಅರಿವಿನ ಶಕ್ತಿಯಾಗಿರುವಂತೆಯೇ, ಹೊರಜಗತ್ತಿನ ಒಡನಾಟದಲ್ಲಿ, ಸಮುದಾಯದ ಜೊತೆಗಿನ ಸಂವಾದದಲ್ಲಿ ವ್ಯಕ್ತಿ ಕಂಡುಕೊಂಡ ಅನುಭವದ ಫಲವೂ ಆಗಿರುತ್ತದೆ ಎಂಬುದನ್ನು ಈ ಕೃತಿ ಹಲವು ಮಜಲುಗಳಲ್ಲಿ ತೋರಿಸುತ್ತದೆ. ಲೋಕಸಂಚಾರದ ಮೂಲಕ ಪರಾಶರ ಮತ್ತು ದೈಪಾಯನರು(ವ್ಯಾಸ) ಪಡೆದುಕೊಂಡ ಅನುಭವ ಹೇಗೆ ಮಹಾಭಾರತ ಕಥನಕ್ಕೆ ಭೂಮಿಕೆಯನ್ನು ಒದಗಿಸುತ್ತದೆ ಎಂಬುದನ್ನು ಚಿತ್ರಿಸುತ್ತದೆ. ಸಮುದಾಯಕ್ಕೆ ವಿಮುಖವಾಗಿ ನಿಂತು ವ್ಯಕ್ತಿಪ್ರಜ್ಞೆಯನ್ನೇ ನಂಬಿದ ಮನು ರಚಿಸುವ ಕೃತಿ ಸಮಾಜದ ವಿಘಟನೆಗೆ ಕಾರಣವಾಗುವುದನ್ನೂ ತೋರಿಸುತ್ತದೆ.

ಸಾಮಾನ್ಯ ಜನ ತಮ್ಮ ಬದುಕಿನ ಮೌಲ್ಯಗಳನ್ನು, ನಂಬಿಕೆಗಳನ್ನು ಸಹಜರೀತಿಯಲ್ಲಿ ಕಾಪಿಟ್ಟುಕೊಳ್ಳುವ ರೀತಿಯನ್ನು ಇಲ್ಲಿನ ಕಥನ ಸಮರ್ಥ ರೀತಿಯಲ್ಲಿ ತೋರಿಸುತ್ತದೆ.ಪುರಾಣವಾಗಲಿ, ಇತಿಹಾಸವಾಗಲಿ, ವರ್ತಮಾನವಾಗಲಿ ಮಹಿಳೆಯನ್ನು ಕಡೆಗಣಿಸಿರುವ, ಶೋಷಿಸಿರುವ ರೀತಿಯನ್ನು ಜಾಬಾಲಾ, ಮೇನಕೆ, ಪಿಂಜಲಾ, ಕಾಳಿ, ಮೈತ್ರೇಯಿ, ವಿಶ್ವಾಮಿತ್ರನ ತಾಯಿ- ಇಂಥ ಪಾತ್ರಗಳು ಹೃದಯಕ್ಕೆ ನಾಟುವಂತೆ ಚಿತ್ರಿಸುತ್ತವೆ.

ಇನ್ನಷ್ಟು ಸೂಕ್ಷ್ಮವಾಗಿ ನೋಡಲಾಗದೆ ಹೋಗಿರುವ ಸಂಗತಿಗಳೂ ಇಲ್ಲಿವೆ. ಮನು ಬರೆದ ಶಾಸ್ತ್ರಗ್ರಂಥ, ಮನುಧರ್ಮವಾಗಿ ವಿಶ್ವಾಮಿತ್ರನ ರಾಜ್ಯದಲ್ಲೇ ಬೇರುಬಿಡುವ ರೀತಿ , ಈ ಗ್ರಂಥವನ್ನು ಬರೆದ ಹಿನ್ನೆಲೆಯ ಸಂಗತಿಗಳು, ಮನುವಿನ ಮನೋಧರ್ಮ, ಚಿಂತನಕ್ರಮ ಪರಿಣಾಮಕಾರಿಯಾಗಿ ಚಿತ್ರಿತವಾಗಿಲ್ಲ. ಚಾರ್ವಾಕರ ವಿಚಾರಗಳ ಮಂಥನವೂ ಇನ್ನಷ್ಟು ಗಾಢವಾಗಿ ನಡೆಯಬೇಕಾಗಿತ್ತು. ಇಂಥ ಕೊರತೆಗಳು ಅಲ್ಲಲ್ಲಿ ಕಾಣಿಸುತ್ತವೆ. ಇನ್ನಷ್ಟು ಸಾವಧಾನವಾಗಿ ನೋಡಿದ್ದರೆ ಇಂಥ ಕೊರತೆಗಳನ್ನು ಮೀರಬಹುದಿತ್ತು. ಬರವಣಿಗೆಯ ಚುರುಕು, ಹಗುರ ಶೈಲಿ, ಕಾವ್ಯದ ಮಿಂಚು, ಆಕರ್ಷಕ ಕಥಾನಿರೂಪಣೆ ಪೈ ಅವರ ಕಥನಕಲೆಯ ಹೆಚ್ಚುಗಾರಿಕೆಗಳು.

(ಕೃಪೆ: ಪುಸ್ತಕಾವಲೋಕನ, ಬರಹ: ಜಿ.ಪಿ ಬಸವರಾಜು)

Related Books