‘ಬಾಸಿಂಗ’- ಸದಾಶಿವ ಎಂ. ಗುಡಿಗಾರ್ ಅವರ ಕಾದಂಬರಿ. ನಮ್ಮ ನಾಡನ್ನು ಶ್ರೀಗಂಧದ ಗೂಡು ಎನ್ನುತ್ತಾರೆ. ಈ ಹೆಸರು ಬಂದಿದ್ದು ತಮ್ಮ ಕೆತ್ತನೆಯಿಂದ ನಾಡಿನ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ಗುರಿಗಾರರಿಂದ. ಸೊರಬ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡಿಗಾರರ ಸಂಖ್ಯೆ ಗಣನೀಯವಾಗಿದೆ. ಆದರೆ ಇವರ ಜೀವನ ವಿಧಾನ, ನಂಬಿಕೆ, ಆಚರಣೆ, ಅವರ ಶ್ರಮ, ಸಾರ್ಥಕತೆ ಇತ್ಯಾದಿಗಳ ಬಗ್ಗೆ ನಮಗೆ ಗೊತ್ತಿರುವುದು ಸ್ವಲ್ಪ. ಕನ್ನಡದ ಕತೆ, ಕಾದಂಬರಿಗಳಲ್ಲಿ ಗುಡಿಗಾರರ ಆಂತರಿಕ ಬದುಕನ್ನು ಕುರಿತಂತೆ ಬಂದಿರುವುದು ಏನೂ ಇಲ್ಲವೆಂದರೂ ಅದು ಸತ್ಯವೆ. ಆದರೆ ಆ ಜನಾಂಗದಿಂದ ಬಂದಿರುವ ಸದಾಶಿವ ಅವರು ಅಂತಹ ಒಂದು ಪ್ರಯತ್ನವನ್ನು ಮಾಡಿದ್ದಾರೆ.
ಬಾಸಿಂಗ ಗುಡಿಗಾರರು ಮದುವೆ ಸಂದರ್ಭದಲ್ಲಿ ಗಂಡಿಗಾಗಿ ಸಿದ್ಧಪಡಿಸುವ ಒಂದು ಸುಂದರ ಶಿರೋಭೂಷಣ, ವಧುವಿಗಾಗಿ ಅವರು ತೊಂಡಿಲು ಎನ್ನುವ ಇನ್ನೊಂದು ಶಿರೋಭೂಷಣವನ್ನು ಮಾಡುತ್ತಾರೆ. ಈ ಬಾಸಿಂಗವನ್ನು ಮಾಡಿಸಲು ಗುಡಿಗಾರರಿಗೆ ವೀಳ್ಯ ಕೊಡುವುದು, ಸಿದ್ಧಪಡಿಸಿದ ನಂತರ ಅದನ್ನು ಕೊಂಡೊಯ್ಯುವ ವಿಧಾನ, ಧರಿಸುವ ಕ್ರಮ, ಮದುವೆಯ ನಂತರ ಅದನ್ನು ಸಿಕ್ಕಲ್ಲಿ ಎಸೆಯದೇ ಕಾಪಿಡುವ ರೀತಿ ಇವೆಲ್ಲವೂ ಅರ್ಥಪೂರ್ಣ. ಬಾಸಿಂಗವನ್ನು ಗುಡಿಗಾರರು ಬೆಂಡಿನಿಂದ ಮಾಡುತ್ತಾರೆ. ಈ ಬೆಂಡು ಕೆರೆಗಳಲ್ಲಿ ಸಿಗುವ ಒಂದು ಜೊಂಡು. ಈ ಜೊಂಡು ಹಗುರವಾದದ್ದು ಆದರೆ ಬಾಸಿಂಗ ಮಾಡುವ ಕೆಲಸವನ್ನು ಗುಡಿಗಾರರು ಹಗುರ ಎಂದು ತಿಳಿಯುವುದಿಲ್ಲ ಏಕೆಂದರೆ ಮುಂದಿನ ಒಂದು ದಾಂಪತ್ಯವನ್ನು ಬಾಸಿಂಗ ಹರಸುತ್ತದೆ ಎಂಬ ನಂಬಿಕೆ ಅವರದು. ಅವರ ಬದುಕು, ಬಾಸಿಂಗದ ಕಲೆ ಎಲ್ಲವನ್ನು ತಿಳಿಸುವ ಕೃತಿ ‘ಬಾಸಿಂಗ’.