ಬಾಕಿ-ಎಂಬುದು ಗೀತಾ ನಾಗಭೂಷಣ ಅವರ ಕಾದಂಬರಿ. ಹೆಣ್ಣಿನ ಬದುಕಿನ ಏಳುಬೀಳುಗಳ, ನೋವು ನಲಿವಿನ, ಸಿಹಿ-ಕಹಿಯ, ಅಳುವು-ನಗುವುಗಳ ಮಿಶ್ರಣವಾದರೂ ಅವಳ ಪಾಲಿಗೆ ಬಂದದ್ದು ಮಾತ್ರ ಏಳುಗಿಂತ ಬೀಳೇ ಜಾಸ್ತಿ. ಖುಷಿಗಿಂತ ನೋವಿನ ಕಹಿಯ ಹೆಚ್ಚಿರುವ ವಾಸ್ತವ ಚಿತ್ರಣಗಳನ್ನು ಲೇಖಕಿ ಚಿತ್ರಿಸುತ್ತಲೇ ಪ್ರವಾಹದ ವಿರುದ್ಧ ಕೈಕಾಲು ಬಡಿಯುತ್ತಲೇ ಅವಳು ಬದುಕಿಗಾಗಿ ಹೇಗೆ ಬಡಿದಾಡುತ್ತಾಳೆ ಎಂಬುದನ್ನು ವಾಸ್ತವದ ನೆಲೆಗಟ್ಟಿನಲ್ಲಿ ರಚಿಸಿದ್ದಾರೆ. ಎಂತೆಂಥಾ ಭಯಂಕರ ವಿಷಮ ಪರಿಸ್ಥಿತಿ ಬಂದರೂ ಹೋರಾಡುವ ಇಲ್ಲಿಯ ಪಾತ್ರಗಳು ಓದುಗರಿಗೆ ಹೊಸ ಚೈತನ್ಯವನ್ನು ತುಂಬಬಲ್ಲದು.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE