ಹೆಣ್ಣಿನ ಅಧೀನತೆ ಮತ್ತು ಅವಳ ಮೇಲೆ ನಡೆಯುವ ಅಮಾನವೀಯ ಕ್ರೌರ್ಯದ ಸ್ಥಿತಿಯೊಂದನ್ನು ಪ್ರತಿಬಿಂಬಿಸುವ ಕಾದಂಬರಿ 'ಅಶ್ರುತರ್ಪಣ'. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ 'ಮಹಾಭಾರತ' ಕಾಲದಿಂದಲೂ ಅವ್ಯಾಹತವಾಗಿ ನಡೆದು ಬಂದಿದೆ. 'ಮಹಾಭಾರತ' ಪುರಾಣ ಕಾವ್ಯದಲ್ಲಿ ಬರುವ ದೌಪದಿ, ಕುಂತಿಯಂತಹ ಹೆಚ್ಚಿನ ಸ್ತ್ರೀ ಪಾತ್ರಗಳು ರಾಜಕೀಯ ಪ್ರಭುತ್ವದ ದಾಳವಾಗಿ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಬಲಿಪಶುಗಳಾದವರೇ; ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಈ ವ್ಯವಸ್ಥೆ ಮುಂದುವರೆಯುತ್ತಲೇ ಇದೆ.
ಐವತರ ದಶಕದಲ್ಲಿ ಒಂದು ಗ್ರಾಮೀಣ ಪರಿಸ್ಥಿತಿ, ಅಲ್ಲಿನ ವಾತಾವರಣವನ್ನು ಅನಾವರಣಗೊಳಿಸುತ್ತಾ ಒಂದು ಸ್ಥಿತಿವಂತ ಬ್ರಾಹ್ಮಣ ಕುಟುಂಬದಲ್ಲಿ ಹೆಣ್ಣಿಗೆ ಅನಿರೀಕ್ಷಿತವಾಗಿ ಎರಗಿ ಬರುವ ಆಘಾತ ಹಾಗೂ ಅದು ತಂದೊಡ್ಡುವ ದಾರುಣತೆಯೇ ಕಾದಂಬರಿಯ ಕಥಾವಸ್ತು.