ಆತ್ಮ ಬಂಧನ-ಲೇಖಕ ಸಂಜಯ್ ರಾಜಾರಾವ್ ಅವರ ಮೊದಲನೇ ಕಾದಂಬರಿ. ಕಾಲ್ಪನಿಕ ಕಥಾವಸ್ತುವನ್ನು ಹೊಂದಿದೆ. ದಿನೇ-ದಿನೇ ಹೆಚ್ಚುತ್ತಿರುವ ಅಕಾಲಿಕ ಮರಣದ ಪ್ರಮಾಣವನ್ನು ಕಂಡು, ಯಮಧರ್ಮರಾಜ ಮತ್ತು ಇಂದ್ರ ಚಿಂತಾಕ್ರಾಂತರಾಗುತ್ತಾರೆ. ಆದ್ದರಿಂದ ಚರ್ಚಿಸಿ ಇಂದ್ರನ ಮಗಳು ಇಂದ್ರಜಳನ್ನು ಭೂಮಿಗೆ ಕಳುಹಿಸಲು ನಿರ್ಧರಿಸುತ್ತಾರೆ. ಇತ್ತ ತಂದೆಯೊಡನೆ ಯಮಲೋಕ ನೋಡಲು ಬಂದಿದ್ದ ಇಂದ್ರಜ, ಒಂದು ಆತ್ಮವನ್ನು ಭೇಟಿ ಮಾಡಿ, ಅದರ ಕಥೆ ಕೇಳಿ, ತಾನೂ ಮನುಷ್ಯಳಾಗಬೇಕೆಂದು ಕೊಳ್ಳುತ್ತಾಳೆ. ಎಲ್ಲರ ಆಸೆಯಂತೆ ಭೂಮಿಯಲ್ಲಿ ಹುಟ್ಟಿದ ಇಂದ್ರಜ ತಾನು ಪ್ರೀತಿಸಿದ ಹುಡುಗ ನಟರಾಜನನ್ನು ವರಿಸಿ, ಅವನ ಮನೆಗೆ ಪ್ರವೇಶಿಸಿದಾಗ, ತನ್ನ ಅತ್ತೆ ಮತ್ತು ನಾದಿನಿಯ ಕಿರುಕುಳಕ್ಕೆ ಒಳಗಾಗುತ್ತಾಳೆ. ಹಾಗೂ ಎದೆಗುಂದದೆ ಇಬ್ಬರನ್ನೂ ಪ್ರೀತಿಯಿಂದ ಗೆದ್ದು ಇನ್ನೇನು ಸುಖ ಜೀವನ ನಡೆಸಬೇಕೆನ್ನುವಷ್ಟರಲ್ಲಿ, ಕೂಗುಮಾರಿ ಇಂದ್ರಜಳ ಅತ್ತೆಯನ್ನು ಕೊಂದು, ನಾದಿನಿ ರೋಹಿಣಿಯನ್ನು ಅಪಹರಿಸುತ್ತಾಳೆ. ಆತ್ಮವಾಗಿರುವ ತಾನು ಮನುಷ್ಯಳಾಗಿ, ಕಳೆದು ಹೋದ ತನ್ನ ತಂಗಿಯನ್ನು ಹುಡುಕಬೇಕೆಂದಿರುವ ಮಂದಾಕಿನಿ ಒಂದು ಅತಿಮಾನುಷ ಶಕ್ತಿಯನ್ನು ಒಲಿಸಿಕೊಂಡು, ತನ್ನನ್ನು ಬಂಧಿಸಿಟ್ಟಿದ್ದ ಮಂತ್ರವಾದಿಯನ್ನು ಕೊಂದು, ಆ ಶಕ್ತಿಯ ಆದೇಶದಂತೆ ನರಬೇಟೆಗಿಳಿದು ಕೂಗುಮಾರಿಯಾಗುತ್ತಾಳೆ. ತನ್ನ ತಂತ್ರಗಳು ವಿಫಲವಾದಂತೆಲ್ಲಾ ಹೊಸ ತಂತ್ರಗಳನ್ನು ಬಳಸಿ ನೂರಕ್ಕೂ ಹೆಚ್ಚು ಜನರನ್ನು ಕೊಂದು, ಅವರ ಆತ್ಮಗಳನ್ನು ಬಂಧಿಸಿಟ್ಟುಕೊಳ್ಳುತ್ತಾಳೆ. ಹೀಗೇ ದಿನ ಕಳೆದಂತೆ, ಇಂದ್ರಜ ತನ್ನನ್ನು ಸಂಹರಿಸಲು ಬಂದಿಹಳು ಎಂದು ತಿಳಿದು ಅವಳನ್ನು ಕೊಲ್ಲಲು ಹೊಂಚು ಹಾಕುತ್ತಾಳೆ. ಅದರಂತೆ ಅವಳ ಗಂಡನ ಆತ್ಮವನ್ನು ಹಿಂಸಿಸಿ, ಅವಳನ್ನು ಮನೆಯಿಂದ ಹೊರಗೆ ಕರೆಯಲೆತ್ನಿಸಿದಾಗ, ಇಂದ್ರಜ ಗಂಡ ಪಕ್ಕದಲ್ಲೇ ಮಲಗಿರುವುದ ಕಂಡು "ನಾಳೆ ಬಾ" ಎನ್ನುತ್ತಾಳೆ. ಇದನ್ನು ಕೇಳಿ ಮಂದಾಕಿನಿ ಹಿಂತಿರುಗಿದಾಗ, ಮರುದಿನ "ನಾಳೆ ಬಾ" ಎಂಬ ಫಲಕಗಳು ಪ್ರತಿ ಮನೆಯಲ್ಲೂ ಕಾಣಸಿಗುತ್ತವೆ. ಇದಕ್ಕೆ ಕುಪಿತಗೊಂಡ ಮಂದಾಕಿನಿ ಸ್ವಲ್ಪ ದಿವಸ ಕಾದು, ಸಮಯ ನೋಡಿಕೊಂಡು, ಇಂದ್ರಜಳ ಅತ್ತೆಯನ್ನು ಕೊಂದು, ಅವಳ ನಾದಿನಿ ರೋಹಿಣಿಯನ್ನು ಅಪಹರಿಸುತ್ತಾಳೆ. ಇಂತಹ ಕುತೂಹಲಕರ ಸಂಗತಿಗಳನ್ನು ಒಳಗೊಂಡ ಕಾದಂಬರಿಯು ತನ್ನ ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಓದುಗರ ಗಮನ ಸೆಳೆಯುತ್ತದೆ.
ಲೇಖಕ ಸಂಜಯ್ ರಾಜಾರಾವ್ ಅವರು ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಲೆಕ್ಕಿಗರು. ಪ್ರವೃತ್ತಿಯಲ್ಲಿ ಲೇಖಕರು. ಇಪ್ಪತ್ತೆರಡು ಅಂಕಣಗಳು, ಎರಡು ಕವನಗಳು ಮತ್ತು ನೂರಕ್ಕೂ ಹೆಚ್ಚು ಚುಟುಕುಗಳನ್ನು ಬರೆದು ಪ್ರಕಟಿಸಿದ್ದಾರೆ. ಆರು ಸಂಕಲನಗಳಲ್ಲಿ ತಮ್ಮ ಕವನಗಳನ್ನು ಇತರ ಲೇಖಕರೊಂದಿಗೆ ಪ್ರಕಟಿಸಿದ್ದಾರೆ. "ಆತ್ಮ ಬಂಧನ" ಅವರ ಮೊದಲನೇ ಕಿರು ಕಾದಂಬರಿ. ...
READ MOREಆತ್ಮ ಬಂಧನ ಪುಸ್ತಕ ಪರಿಚಯ.