ಸಸ್ಯ ಶಾಸ್ತ್ರಜ್ಞರೂ, ವೈಜ್ಞಾನಿಕ ಬರಹಗಾರರೂ ಆದ ಬಿ.ಜಿ.ಎಲ್ ಸ್ವಾಮಿ ಅವರ ಬಿಡಿ ಲೇಖನಗಳ ಸಂಗ್ರಹವೇ ’ಮೀನಾಕ್ಷಿಯ ಸೌಗಂಧ’.
ಟಿ.ಆರ್ ಅನಂತರಾಮು, ಎಸ್.ಎಲ್. ಶ್ರೀನಿವಾಸಮೂರ್ತಿ, ಜಿ.ಎನ್ ನರಸಿಂಹಮೂರ್ತಿ ಮತ್ತು ಕೆ.ಎಸ್. ಮಧುಸೂಧನ ಅವರ ಸಂಪಾದಕತ್ವದಲ್ಲಿ ಬಿ.ಜಿ.ಎಲ್ ಸ್ವಾಮಿಯವರ ಅನೇಕ ಬಿಡಿ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಬಿ.ಜಿ.ಎಲ್ ಸ್ವಾಮಿ ಅವರ ಬಹುಮುಖ ಆಸಕ್ತಿ, ಸುಲಲಿತ ಹಾಸ್ಯ ಮಿಶ್ರಿತ ಭಾಷೆಯನ್ನು ಈ ಕೃತಿಯಲ್ಲಿ ಗಮನಿಸಬಹುದಾಗಿದೆ. ವಿಜ್ಞಾನ, ಚರಿತ್ರೆ,ಸಾಹಿತ್ಯ, ಕಲೆ, ಪರಿಶಿಷ್ಟ ಎನ್ನುವ 5 ಭಾಗಗಳನ್ನು ಈ ಪುಸ್ತಕ ಹೊಂದಿದೆ. 'ರಾಯರ ಅಭ್ಯಂಜನ' ಎನ್ನುವ ಲಲಿತ ಪ್ರಬಂಧವಂತೂ ಎಂಥ ಸಿಡುಕರ ಮುಖದ ನೆರಿಗೆಗಳನ್ನೂ ಸಡಿಲ ಮಾಡುವಂತಿದೆ. ಸ್ವಾಮಿಯವರ ಮೊಟ್ಟ ಮೊದಲಿನ ವೈಜ್ಞಾನಿಕ ಬರಹವನ್ನೂ ಈ ಕೃತಿಯಲ್ಲಿ ಸೇರಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಸ್ವಾಮಿಯವರ ಕೆಲವು ಪತ್ರಗಳನ್ನೂ ಓದುಗರು ಕಾಣಬಹುದು.
ಈ ಕೃತಿಯು ಸ್ವಾಮಿಯವರು ಬರೆದಿರುವ ಕೆಲ ಲಲಿತ ಬರಹಗಳೂ, ಕವಿತಾ ರಚನೆಗಳನ್ನೂ ಈ ಕೃತಿ ಒಳಗೊಂಡಿದೆ. ಚಿತ್ರಕಲೆ, ಸಂಗೀತಕ್ಕೆ ಸಂಬಂಧಪಟ್ಟ ಹಾಗೆ ಕಲಾವಿದರ ಬಗ್ಗೆಯೂ ಕುರಿತು ಈ ಕೃತಿ ಪರಿಚಯಿಸುತ್ತದೆ. ಇವರು ಬರೆದಿರುವ ಅನೇಕ ಬಿಡಿ ಲೇಖನಗಳಲ್ಲಿರುವ ಕುತೂಹಲ, ಆಸಕ್ತಿದಾಯಕ, ಮತ್ತು ಹಾಸ್ಯ ವಿನೋದಿತ ಮಾತು ಎಲ್ಲವೂ ಓದುಗರಿಗೆ ಹತ್ತಿರವಾಗುತ್ತದೆ.
'ಹಸುರು ಹೊನ್ನು, ’ಕಾಲೇಜುರಂಗ, 'ತಮಿಳು ತಲೆಗಳ ನಡುವೆ' ಮುಂತಾದ ವಿವಿಧ ಅಭಿರುಚಿಗಳ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಸು ಪರಿಚಿತರಾಗಿರುವ ದಿ. ಬಿ.ಜಿ.ಎಲ್. ಸ್ವಾಮಿ ಅವರ ಕೆಲವು ಅಪ್ರಕಟಿತ ಲೇಖನಗಳ ಸಂಗ್ರಹ ಮೀನಾಕ್ಷಿಯ ಸೌಗ೦ಧ' ಸ್ವಾಮಿಯವರ ಬಹುಮುಖಿ ವಿದ್ವತ್ತನ್ನು ಮತ್ತೊಮ್ಮೆ ಅನಾವರಣಗೊಳಿಸುವಂತಿದೆ. ಸಾಹಿತ್ಯ, ಸಂಗೀತ, ಚರಿತ್ರೆ, ಚಿತ್ರಕಲೆ ಇವುಗಳ ಜೊತೆಗೆ ಸಂಶೋಧನೆಯ ವಿಧಾನ-ವಿಚಾರಗಳ ಕುರಿತು ಅವರಿಗಿದ್ದ ಆಸಕ್ತಿ ಈ ಕೃತಿಯ ಉದ್ದಕ್ಕೂ ಕಾಣುತ್ತದೆ. ಮೂಲತಃ ’ಸಸ್ಯಶಾಸ್ತ್ರ’ದ ವಿದ್ವಾಂಸರಾದ ಸ್ವಾಮಿಯವರು ಯಾವುದೇ ವಿಚಾರವನ್ನು ಬಹುಬೇಗ ಸ್ವೀಕರಿಸುವುದಿಲ್ಲ. ಇದರಲ್ಲಿನ ಬಹುತೇಕ ಬರಹಗಳೇ ಇದನ್ನು ಸಾಬೀತು ಪಡಿಸುತ್ತವೆ.
ನಲವತ್ತರ ದಶಕದಲ್ಲೇ ಅನ್ಯಜ್ಞಾನ ಶಿಸ್ತುಗಳ ಕುರಿತು ಚಿಂತಿಸಿದ, ಬರೆದ ಕೆಲವೇ ಲೇಖಕರಲ್ಲಿ ಇವರೂ ಒಬ್ಬರು. ಅಂದರೆ ನಾವು ಇವತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ಕೇವಲ 'ಸಿದ್ದಾಂತ'ಗಳ 'ಪರಿಕಲ್ಪನೆ'ಗಳ ಆಧಾರದ ಮೇಲೆ ತಮ್ಮ ವಾದ ಸರಣಿಗಳನ್ನು ಬೆಳಸದೇ, ಇಲ್ಲಿನ ಎಲ್ಲ ಲೇಖನಗಳಿಗೂ ಸೃಜನಶೀಲ ಸ್ಪರ್ಶವನ್ನು ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇಂಥಹ ಹಿರಿಯರ ಬರಹಗಳನ್ನು ಇಂದಿನ ಕಾಲಮಾನದಲ್ಲಿ ಹೇಗೆ ಓದಬೇಕು? ಹೇಗೆ ಗ್ರಹಿಸಬೇಕು? ಎಂಬ ಪ್ರಶ್ನೆಗಳಿಗೆ ತೀರಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಾರಣ, ಇಂದಿಗೂ ಕೆಲ ಲೇಖನಗಳು ತಾಜತನದಿಂದ ಕೂಡಿವೆ. ಮಾತ್ರವಲ್ಲ, ವಿಜ್ಞಾನದ ವಿದ್ಯಾರ್ಥಿಯಾಗಿ ಸ್ವಾಮಿಯವರು ಎಲ್ಲವನ್ನು ಸಾರಾಸಗಟಾಗಿ ಸ್ವೀಕರಿಸದೇ ತಮ್ಮದೇ ವಾದ ಸರಣಿಯನ್ನು ಮಂಡಿಸಲು ಅನೇಕ ಸಂಶೋಧನಾ ಆಕರಗಳನ್ನು ಬಳಸಿಕೊಳ್ಳುತ್ತಾರೆ.
ಸ್ವಾಮಿಯವರ ಬಹುಮುಖ್ಯ ವಾದಗಳಲ್ಲಿ 'ಸಂಪ್ರದಾಯ ಶರಣತೆ'ಯ ಶೋಧನೆ. ಇದನ್ನು ತೀರಾ ಆಧುನಿಕತೆಯ ನಿಕಷಕ್ಕೊಡ್ಡುವ ಸರಳೀಕೃತ ಮಾರ್ಗ ಹಿಡಿಯದೆ ಆಕರಗಳ ಬೆಳಕಿನಲ್ಲಿ ಅದರ ಸತ್ಯ ಕುರಿತ ಪ್ರಶ್ನೆಗಳನ್ನು ಎತ್ತುವುದು ಈ ಶೋಧನೆಯ ವಿಶೇಷ. ಡಾರ್ವಿನ್‌ನ ಆರ್ಜಿತ ಗುಣಗಳು ಮತ್ತು ಅನುವಂಶೀಯತೆಗಳನ್ನು ವಿವರಿಸುವಾಗಲೂ ಅವರು ಡಾರ್ವಿನ ವಾದವನ್ನು ಸಂಪೂರ್ಣವಾಗಿ ನಿರಾಕರಿಸದೇ ಅದರಲ್ಲಿನ ಕೆಲವು ವಾದಗಳನ್ನು ಅನುಮೋದಿಸಿ ಅವನ ಶಿಷ್ಯ ಮಂಡಿಸಿದ ಹೊಸದಾದ ಅನುವಂಶೀಯತೆಯ ಸಿದ್ದಾಂತಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗುತ್ತಾರೆ. ಇವರಿಬ್ಬರ ಚಿಂತನೆಗಳ ನಡುವೆ ಸ್ವಾಮಿ ಚಿಂತನೆಗಳು ಕಾಣಿಸಿಕೊಳ್ಳುತ್ತವೆ. ತಾತನಂತೆ ಅಪ್ಪ ಅಪ್ಪನಂತೆ ಮಗ ಇರಲು ಸಾಧ್ಯವಿಲ್ಲ ಸಾಧ್ಯವಿದ್ದರೆ ಅದು ಮನುಷ್ಯನ ಸ್ವಂತ ಪ್ರಯತ್ನಗಳ ಫಲವೆಂದೇ ಭಾವಿಸುತ್ತಾರೆ. ಇದಕ್ಕೆ ಅವರು ಹೈದರ್ ಮತ್ತು ಟಿಪ್ಪುವಿನ ಉದಾಹರಣೆಯನ್ನೂ ನೀಡುತ್ತಾರೆ.
ಅವರ ಯಾವುದೇ ಲೇಖನದಲ್ಲೂ ಸಾಹಿತ್ಯದ ಜ್ಞಾನ ಪ್ರಜ್ಞಾಪೂರ್ವಕವಾಗಿಯೇ ಸೇರಿರುತ್ತದೆ. ಸಸ್ಯಶಾಸ್ತ್ರ ಮತ್ತು ಕನ್ನಡ, ತಮಿಳು ಅಭಿಜಾತ ಪಠ್ಯಗಳ ಜೋಡಣೆಯನ್ನು ಒಂದು ಕ್ರಮಬದ್ದವಾದ ಜ್ಞಾನ ಶಿಸ್ತುಗಳಾಗಿಯೇ ತರಲು ಅವರು ಯತ್ನಿಸಿದ್ದಾರೆ. ಅವರಿಗೆ ಪಂಪ ಮತ್ತು ತಮಿಳು ಅಭಿಜಾತ ಪಠ್ಯಗಳ ವಿವರಗಳು ಚರಿತ್ರೆಯ ಶೋಧನೆಗೂ ಇಲ್ಲಿ ಒದಗುತ್ತವೆ. ಏಕಕಾಲಕ್ಕೆ ಸಸ್ಯಶಾಸ್ತ್ರ ಮತ್ತು ಸಾಹಿತ್ಯ ಚರಿತ್ರೆಗಳು ಪರಸ್ಪರ ಒಗ್ಗೂಡುತ್ತವೆ. ಈ ಒಗ್ಗೂಡುವ ಪ್ರಕ್ರಿಯೆಯಲ್ಲಿ ಸಂಶೋಧಕನೊಬ್ಬನ ಕುತೂಹಲ, ವಿವೇಕ, ಸೃಜನಶೀಲ ಬರಹಗಾರನೊಬ್ಬನ ಕಲಾತ್ಮಕತೆಗಳೂ ಏಕೀಭವಿಸುತ್ತವೆ.
ಸ್ವಾಮಿಯವರ ಈ ಫುಸ್ತಕದಲ್ಲಿ ನಾವು ಗಮನಿಸಲೇಬೇಕಾದ ಲೇಖನಗಳು ಹಲವಿವೆ. ಅವರು ಚಿತ್ರಕಲೆ ಮತ್ತು ಸಂಗೀತಕ್ಕೆ ಸಂಬಂಧಪಟ್ಟ ಹಾಗೆ ಕಲಾವಿದರಾದ ವೆಂಕಟಪ್ಪನವರ ಬಗ್ಗೆ ಬರೆದ ಲೇಖನ ಇಂದಿಗೂ ಸಂಗೀತ ಮತ್ತು ಚಿತ್ರಕಲೆಗಳಿಗೆ ಸಂಬಂಧಿಸಿದಂತೆ ಹಲವು ಒಳನೋಟಗಳನ್ನು ನೀಡುತ್ತಾ ಯುವ ಕಲಾವಿಮರ್ಶಕರ ಗಮನವನ್ನು ಆಹ್ವಾನಿಸುವಂತಿದೆ. ಭೂಚಿತ್ರಗಳಲ್ಲಿ ಡಿಸ್ಟೆನ್ಸಿ ಸಾಲದು ಎಂಬ ಕೆಲ ಯುವ ಕಲಾವಿದರ ಅಭಿಪ್ರಾಯಕ್ಕೆ ಅವರು ಕೊಡುವ ಉತ್ತರಗಳು ಸಿಟ್ಟಿನಿಂದ ಇದ್ದರೂ ಹೊಸ ಕಲಾವಿದರಿಗೆ ಬೇಕಾದ ವಿವೇಕವನ್ನು ಕುರಿತು ಸ್ವಾಮಿಯವರು ವಿವರವಾಗಿ ಬರೆಯುತ್ತಾರೆ. ಇದರಲ್ಲಿ ಸ್ವಾಮಿಯವರ ಕಲಾ ಚಿಂತನೆ ವಿಸ್ತಾರ ನೆಲೆಯಲ್ಲಿ ಕಾಣಿಸುವುದು. ಚಿತ್ರಗಳ ಬಣ್ಣ ಮತ್ತು ನೆರಳು ಮುಂತಾದ ಆಯಾಮಗಳ ಮೂಲಕ ವೆಂಕಟಪ್ಪನವರ ಕಲೆಯನ್ನುದೇಸಿ ಕಲಾಚಿಂತನೆ ಅನ್ನುವುದಕ್ಕಿಂತ ಭಾರತೀಯ ಸಂಪ್ರದಾಯದ ಶೋಧನೆ ಎನ್ನಬೇಕು ಎಂದು ಅವರು ವಾದಿಸುವಾಗ, ವೆಂಕಟಪ್ಪನವರು ಅನ್ಯ ವಿದ್ವಾಂಸರ ಬಳಿ ಕಲಿತರೂ ಮತ್ತು ಅವರಿಗೆ ವಂಗಶೈಲಿಯ ವರ್ಣಗಳ ಪರಿಚಯ ಇದ್ದರೂ, ತಮ್ಮದೇ ಚಿತ್ರ ಶೈಲಿಯನ್ನು ಪಡೆದಿದ್ದರು ಎಂಬುದನ್ನು ಸ್ವಾಮಿಯವರು ವಿವರಿಸುವ ರೀತಿ ಅವರ ಕಲಾವಿಮರ್ಶೆಯನ್ನು ಸಾಬೀತುಪಡಿಸುವಂತಿದೆ.
ಸಾಮಿಯವರ ಬಹುಮುಖಿ ಚಿಂತನೆಗಳಿಗೆ ಹಲವು ನಿದರ್ಶನಗಳೆಂಬಂತೆ ಇಲ್ಲಿ ದಾಸಿಮಯ್ಯನ ಮತವಿಚಾರ ಕುರಿತು ಮತ್ತು ಪುರಂದರದಾಸರ ಸಂಗೀತದ ಧಾತು ವಿಚಾರಗಳ ಕುರಿತು ಲೇಖನಗಳಿವೆ. ದಾಸಿಮಯ್ಯನನ್ನು ಸ್ವಾಮಿಯವರು ’ದೇವರ ದಾಸಿಮಯ್ಯ’ ಎಂದು ಕರೆಯದೇ ’ಜೇಡರ ದಾಸಿಮಯ್ಯ’ ಎಂದು ಕರೆದಿದ್ದಾರೆ.
ಆ ಬಗ್ಗೆ ಅವರು ಹೆಚ್ಚು ಚರ್ಚೆ ಮಾಡದೇ, ದಾಸಿಮಯ್ಯನನ್ನು ಬಸವಣ್ಣನ ಕಾಲ ಮತ್ತು ಮತಕ್ಕೆ ಜೋಡಿಸುವುದಿಲ್ಲ. ಇಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲವಿದೆ ಎನಿಸಿದರೂ ಸಂಶೋಧನೆಯ ವಿಧಾನ ಅವರು ತಮ್ಮ ನಿಲುವುಗಳಿಗೆ ಬದ್ಧರಾಗಿರುವುದು ಸ್ಪಷ್ಟವಿದೆ. ಅವರ ಪ್ರಮುಖ ವಾದವಿರುವುದು ’ಅವನ ವಚನಗಳ ವಿಶ್ಲೇಷಣೆಯಿಂದ ಜಾಲಿಸಿ ಬರುವುದು ಪಾಶುಪತ ಪಂಥದ ಆಚರಣೆಗಳು, ಚಿಂತನೆಗಳು, ತಾತ್ವಿಕ ವಿಚಾರಗಳು ಎಂದು ಸ್ಪಷ್ಟವಾಗುತ್ತದೆ.’ (ಪು ೧೬೧) ಎಂಬ ಅವರ ಮಾತಿನಲ್ಲಿ. ಈ ಮಾತುಗಳನ್ನು ಈ ಮಾತುಗಳನ್ನು ಅವರು ಇನ್ನಿತರ ವಿದ್ವಾಂಸರ ಹೇಳಿಕೆಗಳ ಬೆನ್ನಲ್ಲಿ ಹೇಳುತ್ತಾರೆ. ದಾಸಿಮಯ್ಯನ ಮತಕ್ಕೂ ಬಸವಣ್ಣನ ಮತಕ್ಕೂ ವ್ಯತ್ಯಾಸಗಳಿವೆ ಎಂಬುದು ಸತ್ಯವಾದರೂ ಗೊಂದಲಕ್ಕೆ ಒಳಗಾಗುವುದು ಈ ಮಾತುಗಳಿಂದ : 'ಬಸವೇಶ್ವರರು ವರ್ಣಾಶ್ರಮ ವ್ಯವಸ್ಥೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾಗ ಜೇಡರ ದಾಸಿಮಯ್ಯ ಆ ವ್ಯವಸ್ಥೆಯನ್ನು ಬಹುನಿಷ್ಠೆಯಿಂದ ಆಚರಣೆಯಲ್ಲಿಟ್ಟುಕೊಂಡಿದ್ದಾನೆ.' (ಪು. ೧೬೦) ಈ ಮಾತುಗಳು ಚರ್ಚಾರ್ಹವಾಗಿದ್ದು ಬಹುಶಃ ಆ ಕಾರಣದಿಂದ ಈ ಲೇಖನವನ್ನು ಅಪೂರ್ಣವಾಗಿ ಬಿಟ್ಟಿದ್ದಾರೆ.
ಇನ್ನು ವಚನಕಾರರ ನಂತರ ಕಾಣಿಸಿಕೊಳ್ಳುವ ಪುರಂದರರ ಸಂಗೀತದ ಮಟ್ಟುಗಳ ಕುರಿತು ಮತ್ತು ಬಿ.ವಿ. ಕಾರಂತರು ಅವರ ಪದಗಳನ್ನು ನಾಟಕಗಳಿಗೆ ಒಳಪಡಿಸಿದ ಬಗ್ಗೆ ಸ್ವಾಮಿಯವರು ವಿಸ್ತಾರವಾಗಿ ಚರ್ಚಿಸಿದ್ದಾರೆ. ಈ ಲೇಖನ ಸಂಗೀತದ ವಿದ್ಯಾರ್ಥಿಗಳಿಗೆ ಇಂದಿಗೂ ವಿಶೇಷ ತಿಳುವಳಿಕೆಯನ್ನು ನೀಡುವಂತಿದೆ. ಪುರಂದರರ ಹಲವು ಪದಗಳನ್ನು ಸಂಗೀತಜ್ಞಾನದ ಹಿನ್ನೆಲೆಯಿಂದ ಈ ಲೇಖನ ವಿವರಿಸಿದರೂ ಬದಲಾದ ಸಂಗೀತ ಶಿಸ್ತಿನ ನಿಯಮಗಳನ್ನು-ಕಾರಂತರ ಅಳವಡಿಕೆಯ ರೀತಿಗಳ ಹಿನ್ನೆಲೆಯಲ್ಲಿ-ಸ್ವಾಮಿಯವರು ಒಪ್ಪಿಕೊಳ್ಳುತ್ತಾರೆ. ಆದರೆ ಪುರಂದರರ ಸಂಗೀತದ ಮಟ್ಟುಗಳ ಕುರಿತು ಪ್ರಸ್ತಾಪ ಮಾಡಿದರೂ ಅದನ್ನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಆದರೆ ಪುರಂದರ ಮತ್ತು ಕನಕರು ಆ ಕಾಲದ ಜನಪದ ಮಟ್ಟುಗಳಿಗೆ ಮಾರುಹೋಗಿದ್ದರು ಎಂಬುದನ್ನು ಸೂಚಿಸುವ ಅನೇಕ ಲೇಖನಗಳು ಬಂದಿವೆ. ದಾಸರ ಎಲ್ಲ ಪದಗಳನ್ನು ಬರೀ ಸಂಗೀತದ ನೆಲೆಯಲ್ಲಿ ಕಾಣಲು ಆಗದು ಎಂಬುದು ಸಾಮಿಯವರಿಗೆ ತಿಳಿದಿದೆ. ಹಾಗಾಗಿಯೇ ಅವರು ಕಾರಂತರ ಕೆಲವು ಬದಲಾವಣೆಗಳನ್ನು ಒಪ್ಪುತ್ತಾರೆ. ಈ ವಿದ್ವತ್ಪೂರ್ಣ ಬರಹಗಳ ಜೊತೆಗೇ ಈ ಕೃತಿಯಲ್ಲಿ ಮನಕ್ಕೆ ಮುದ ನೀಡುವ ಸ್ವಾಮಿಯವರಿಗೇ ವಿಶಿಷ್ಟವಾದ ಕೆಲ ಲಲಿತ ಬರಹಗಳೂ ಕವಿತಾ ರಚನೆಗಳೂ ಇವೆ ನಮ್ಮ ಹಳೆಯ ಪ್ರತಿಭೆಗಳ ಬಹುಮುಖತೆಯ ಸಾಮರ್ಥ್ಯ ಮತ್ತು ಸೊಬಗುಗಳನ್ನು ನಮ್ಮ ಯುವ ಜನಾಂಗಕ್ಕೆ ಪರಿಚಯಿಸುವ ಈ ಪ್ರಯತ್ನದಲ್ಲಿ ಭಾಗಿಯಾಗಿರುವ ಇದರ ಸಂಪಾದಕರು ಮತ್ತು ಪ್ರಕಾಶಕರು ಕನ್ನಡ ಸಾಹಿತ್ಯಾಭಿಮಾನಿಗಳ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
-ಡಾ. ಸುರೇಶ್ ನಾಗಲಮಡಿಕೆ
ಕೃಪೆ : ಹೊಸ ಮನುಷ್ಯ ( ನವೆಂಬರ್ 2018)
©2024 Book Brahma Private Limited.