ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್. ಸ್ವಾಮಿ. `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ.
ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ಆಗಿದ್ದರು. ಪದವಿ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಕೆಲಕಾಲ, ಆ ನಂತರ ಅರಣ್ಯ ಸಂಶೋಧನ ಇಲಾಖೆಯಲ್ಲಿ ಕೆಲಸ ಮಾಡಿದರು. ಮನೆಯಲ್ಲಿಯೇ ಪ್ರಯೋಗಾಲಯ ಮಾಡಿಕೊಂಡು ಸದಾಕಾಲ ಸಂಶೋಧನೆಯಲ್ಲಿ ತೊಡಗಿರುತ್ತಿದ್ದರು. 1947ರಲ್ಲಿ ಪಿಎಚ್.ಡಿ. ಪದವಿ ಪಡೆದರು. ಮುಂದೆ ಖ್ಯಾತ ಸಸ್ಯ ವಿಜ್ಞಾನಿಯಾದ ಇರ್ವಿಂಗ್ ಬೈಲಿಯ ಶಿಷ್ಯರಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿದರು.
1950ರಲ್ಲಿ ಅಮೇರಿಕೆಯಿಂದ ಭಾರತಕ್ಕೆ ಮರಳಿ ಬಂದು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಆದ ಅವರು. 25 ವರ್ಷ ಅಲ್ಲಿ ಕೆಲಸ ಮಾಡಿದರು. ಸಸ್ಯಶಾಸ್ತ್ರ ಸಂಶೋಧನೆ ಮುಂದುವರೆಸಿ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪತ್ರಿಕೆಗಳಿಗೆ ಸಂಶೋಧನಾ ಲೇಖನ ನೀಡಿ ಜಗತ್ತಿನ ಗಮನ ಸೆಳೆದರು. ಕೆಲಕಾಲ ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್‍ಯರಾಗಿದ್ದ ಅವರು ನಿವೃತ್ತಿಯ ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಸ್ವಾಮಿ ಅವರ ಬರವಣಿಗೆ ಆರಂಭವಾದದ್ದು ವೈಜ್ಞಾನಿಕ ಬಿಡಿ ಲೇಖನಗಳಿಂದ. 'ಅಮರಿಕದಲ್ಲಿ ನಾನು' ಎಂಬ ಪ್ರವಾಸ ಕಥನ ಪ್ರಥಮ ಕೃತಿ. ಇವರ 'ಪಂಚಕಲಶ ಗೋಪುರ' ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸ್ವಾಮಿ ಕಂಡ ವ್ಯಕ್ತಿಗಳಾದ ಬೆಳ್ಳಾವೆ ವೆಂಕಟನಾರಾಯಣಪ್ಪ, ಟಿ. ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್.ಕೃ. ಹಾಗೂ ವೀಸೀಯವರ ಸಾಮಾನ್ಯ ಬದುಕಿನ ವಿಶಿಷ್ಟ ಸಂಗತಿಗಳನ್ನು ದಾಖಲಿಸುತ್ತದೆ. ಫಲಶ್ರುತಿ, ಶಾಸನಗಳಲ್ಲಿ ಗಿಡಮರಗಳು, ಹಸಿರು ಹೊನ್ನು, 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ' ಅವರು ಸಸ್ಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಬರೆದು ಪ್ರಕಟಿಸಿದ ಕೃತಿಗಳು. ತಮಿಳು ತಲೆಗಳ ನಡುವೆ, ಕಾಲೇಜು ರಂಗ, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ ಇವು ಸಂಪೂರ್ಣ ವ್ಯಂಗ್ಯ ಸಾಹಿತ್ಯ ಕೃತಿಗಳು. ಸ್ವತಃ ರೇಖಾ ಹಾಗೂ ವ್ಯಂಗ್ಯ ಚಿತ್ರಕಾರರಾಗಿದ್ದ ಅವರು ತಮ್ಮ ಕೃತಿಗಳಿಗೆ ತಾವೇ ಚಿತ್ರ ಬರೆಯುತ್ತಿದ್ದರು.
1976ರಲ್ಲಿ 'ಬೀರಬಲ್ ಸಾಹನಿ ಸುವರ್ಣ ಪದಕ', 1978 ರಲ್ಲಿ 'ಹಸಿರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸ್ವಾಮಿ ಅವರಿಗೆ ಸಂದಿದ್ದವು. ತಂದೆ ಹಾಗೂ ಮಗ ಇಬ್ಬರೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಇದೊಂದು ವಿಶೇಷ. 1975ರಲ್ಲಿ ರಶಿಯಾದ ಲೆನಿನ್‌ಗ್ರಾಡ್‌ನ ಅಂತರ್‌ರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನದ ಉಪಾಧ್ಯಕ್ಷರಾಗಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಕೂಡ ಆಗಿದ್ದರು.
ತಮಿಳು, ಕನ್ನಡ ಹಾಗೂ ಇಂಗ್ಲಿಷ ಬಲ್ಲವರಾಗಿದ್ದ ಅವರಿಗೆ ಚಿತ್ರಕಲೆ ಹಾಗೂ ಸಂಗೀತದಲ್ಲಿಯೂ ಪರಿಣಿತಿ ಇತ್ತು. ಸ್ವಾಮಿ ಅವರು 1980ರ ನವೆಂಬರ್ ಎರಡರಂದು ನಿಧನರಾದರು.