ರಂಗನಾಥ ಕಂಟನಕುಂಟೆ ಅವರ ನಿಜಾತೀತ ಕಾಲದ ನುಡಿ ಬಿಕ್ಕಟ್ಟುಗಳ ವಿಶ್ಲೇಶಣೆ ಕೊಲುವೆನೆಂಬ ಭಾಶೆ. ಈ ಕೃತಿಗೆ ಲೇಖಕ ಕೆ. ಪಿ ಸುರೇಶ್ ಅವರು ಹಿನ್ನುಡಿ ಬರೆಹವನ್ನು ಬರೆದಿದ್ದಾರೆ.
ಲೇಖಕ ಕೆ. ಪಿ ಸುರೇಶ್ ಅವರ ಹಿನ್ನುಡಿಯ ಬರಹದಲ್ಲಿರುವಂತೆ, ’ರಂಗನಾಥ ಕಂಟನಕುಂಟೆಯವರ ‘ಕೊಲುವೆನೆಂಬ ಭಾಷೆ’ ಕೃತಿ ಭಾಷೆಯನ್ನು ಭ್ರಷ್ಟಗೊಳಿಸುವ ವರ್ತಮಾನದ ದುಷ್ಟತನದ ಬಗ್ಗೆ ತೀವ್ರ ವಿಷಾದದಿಂದ ಧ್ಯಾನಿಸುವ ಅಪರೂಪದ ಕೃತಿ. ಅಪರೂಪವೆಂದು ಯಾಕೆ ಹೇಳಿದೆನೆಂದರೆ ಇಲ್ಲಿನ ಬರೆಹಗಳು ಮೊದಲು ಅಂಕಣ ಬರಹವಾಗಿ ಪ್ರಕಟವಾದವು. ಅಂಕಣ ಬರಹದಲ್ಲಿ ಒಂದು ಕಾಲಯಾನದುದ್ದಕ್ಕೂ ಒಂದು ಕೇಂದ್ರವನ್ನು ಇಟ್ಟುಕೊಂಡು ಸತತವಾಗಿ ಆಯಾ ಕಾಲ ಸಂದರ್ಭದ “ಘಟನೆ”ಗಳಿಗೆ, ಅವುಗಳ ನಟನಾ ವಿಶೇಷಗಳಿಗೆ ಇರುವ ಈ ವಿಶಿಷ್ಟ ಆಯಾಮಗಳನ್ನು ಶೋಧಿಸಿ ಅವುಗಳನ್ನು ವ್ಯಾಖ್ಯಾನಿಸುವುದು ಮಹತ್ವದ ಕೆಲಸ. ಇದು ಏಕಕಾಲಕ್ಕೆ ವರ್ತಮಾನವನ್ನು ಗಮನಿಸುತ್ತಾ ಅದರ ಹಿಂದು ಮುಂದಲನ್ನೂ ಕನೆಕ್ಟ್ ಮಾಡುವ ಮತಿವಿಶೇಷವನ್ನು ಅಪೇಕ್ಷಿಸುತ್ತದೆ. ಇವು ಅಂಕಣ ಬರಹಗಳಾದರೂ ಇವುಗಳ ಜೋಡಣೆಯಲ್ಲೊಂದು ತಾತ್ವಿಕ ಸಾತತ್ಯ ಮತ್ತು ವಿವಿಧ ಮಗ್ಗಲುಗಳ ವಿಶ್ಲೇಷಣೆಯಿದೆ. ಒಂದು ಕೇಂದ್ರದಿಂದ ಅದರ ವೈವಿಧ್ಯಮಯ ಪ್ರೊಜೆಕ್ಷನ್ನುಗಳನ್ನು ನೋಡುವ ಬಗೆ ಇದು. ವರ್ತಮಾನದ ಪ್ರಭುತ್ವಮತ್ತು ಮನೋನಿಯಂತ್ರಣದ ಸೂತ್ರ ಹಿಡಿದಿರುವ ಕಾರ್ಪೋರೇಟ್ ಶಕ್ತಿಗಳ ಹವಣಿಕೆಯ ಮೇಲೆ ಈ ಲೇಖನಗಳು ಬೆಳಕು ಚೆಲ್ಲಿ ಅವುಗಳ ಹಿಂದಿರುವ ಹುನ್ನಾರವನ್ನು ಸ್ಪಷ್ಟಗೊಳಿಸುತ್ತವೆ. ಲೇಖನಗಳ ಹರವು ಒಂದರ್ಥದಲ್ಲಿ ಸೀಮಿತ. ವರ್ತಮಾನಕ್ಕೆ ತೆರೆದುಕೊಂಡೇ ಅಂಕಣಗಳನ್ನು ಬರೆಯುವ ಪೂರ್ವ ನಿರ್ಧಾರ ಈ ಲೇಖನಗಳಲ್ಲಿ ಕಾಣುತ್ತದೆ. ಆಳದ ವಿಶ್ಲೇಷಣೆಗೆ ಇವು ಕೊಂಚ ತೊಡಕಾದರೂ ಸ್ಪಂದನದ ತುರ್ತಿನ ದೃಷ್ಟಿಯಿಂದ ಇವು ಅನಿವಾರ್ಯ. ನಮ್ಮ ಅಧ್ಯಾಪಕ ಸಮೂಹ ಬೌದ್ಧಿಕ ಜಡತ್ವ ಮತ್ತು ನೈತಿಕ ಅಂಜುಕುಳಿತನದಿಂದ ನರಳುತ್ತಿರುವ ಈ ದಿನಗಳಲ್ಲಿ ರಂಗನಾಥ ಕಂಟನುಕುಂಟೆ ತೋರಿರುವ ಬೌದ್ಧಿಕ ಚೂಪುತನ ಮತ್ತು ನೈತಿಕ ಸ್ಥೈರ್ಯ ನನಗೆ ವೈಯಕ್ತಿಕವಾಗಿ ಭರವಸೆ ನೀಡಿದೆ. ಹೊಸ ತಲೆಮಾರಿನ ಬಗ್ಗೆ ಇಡಬಹುದಾದ ಭರವಸೆ ಇದು’ ಎಂಬುದಾಗಿ ಬರೆದಿದ್ದಾರೆ.
ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...
READ MORE