‘ಕಣ್ಣ ಕೋಣೆಯ ಕಿಟಕಿ’ ಪತ್ರಕರ್ತೆ ಟೀನಾ ಶಶಿಕಾಂತ್ ಅವರ ಲೇಖನ ಸಂಕಲನ. ಕನ್ನಡದ ಸದಭಿರುಚಿಯ ಸಂವೇದನಶೀಲ ಮನಸ್ಸೊಂದು ಲೋಕದ ಬೇರೆ ಬೇರೆ ಸಾಹಿತ್ಯ ಕೃತಿಗಳನ್ನು ಓದಿ, ಸಂಗೀತವನ್ನು ಕೇಳಿ, ಸಿನಿಮಾಗಳನ್ನು ನೋಡಿ ಬರೆದ ಬರಹಗಳಿವು ಎನ್ನುತ್ತಾರೆ ಹಿರಿಯ ಲೇಖಕ ರಹಮತ್ ತರೀಕೆರೆ. ತನ್ನನ್ನು ಸೆಳೆದ ಕೃತಿಯ, ಲೇಖಕರ ಓದಿನಿಂದ ಹುಟ್ಟಿದ ಈ ಸಹೃದಯ ಟಿಪ್ಪಣಿಗಳು ಓದುಗರಲ್ಲಿ ಪುಸ್ತಕಪ್ರೀತಿ ಬೆಳೆಸುವಂತಿವೆ.
ತನ್ನ ಓದಿನ ಅನುಭವಗಳನ್ನು ಇಲ್ಲಿ ಸಹಜವಾಗಿ ನಿರಾಳವಾಗಿ ಹಂಚಿಕೊಳ್ಳಲಾಗಿದೆ. ಮಹಾದೇವಿಯಕ್ಕ ಕನಸುಗಳನ್ನು ಗೆಳತಿಯ ಜತೆ ಹಂಚಿಕೊಳ್ಳುವಂತೆ ಇಲ್ಲಿನ ಬರಹಕ್ಕೆ ಗಾಢ ಆಪ್ತತೆಯೊಂದು ಪ್ರಾಪ್ತವಾಗಿದೆ. ಇಲ್ಲಿ ಪ್ರಸ್ತಾವಗೊಂಡಿರುವ ಪುಸ್ತಕಗಳ ಮತ್ತು ಲೇಖಕರ ಹರಹು, ವಿಸ್ಮಯ ಹುಟ್ಟಿಸುತ್ತದೆ. ಇಲ್ಲಿನ ಸಾಹಿತ್ಯ ಜಗತ್ತು ಪಾಶ್ಚಿಮಾತ್ಯ ಕೇಂದ್ರಿತವಾಗಿಲ್ಲ. ಉರ್ದು ಆಫ್ರಿಕನ್ ಒಳಗೊಂಡಂತೆ ಬಹುರೂಪಿಯಾಗಿದೆ. ವಿಶ್ವಾತ್ಮಕ ಓದನ್ನು ಕನ್ನಡದ ಅನುಭವಗಳಿಗೆ ಲಗತ್ತಿಸುವ ತುಡಿತದಿಂದ ತಿರುಗಾಟವು ತಿರುಗಿ ಮಣ್ಣಿಗೆ ಬರುತ್ತದೆ.
ವಿಶ್ವಸಾಹಿತ್ಯದ ಪರಿಚಯವನ್ನು ಸಾಹಿತ್ಯ ಚರಿತ್ರೆಯ ಕಗ್ಗವನ್ನಾಗಿಸದೆ, ಓದುಗರ ಅಭಿರುಚಿ ಮತ್ತು ಜೀವನದೃಷ್ಟಿ ಬೆಳೆಸಲು ಬರೆಯುತ್ತಿದ್ದ ಲಂಕೇಶರ ಜೀವಂತಿಕೆ ಮಿಡಿವ ಟೀಕೆ-ಟಿಪ್ಪಣಿಗಳನ್ನು ಇವು ನೆನಪಿಸುತ್ತವೆ. ಇಲ್ಲಿ ಸ್ತ್ರೀವಾದದ ಒಜ್ಜೆಯಿಲ್ಲದೆ ಸ್ತ್ರೀಸಂವೇದನೆಯಿದೆ. ಇಲ್ಲಿನ ಸಾಹಿತ್ಯ ಪ್ರೀತಿ ಬಾಳ ಪ್ರೀತಿಯಾಗಿಯೂ, ಕಲಾಸಂವೇದನೆ ಮನುಷ್ಯ ಸಂವೇದನೆಯೂ ಆಗಿದೆ. ಲವಲವಿಕೆಯ ಶೈಲಿಯಲ್ಲಿರುವ ತುಂಟತನವುಳ್ಳ ಕೆಲವು ಬರಹಗಳು ಚಂದದ ಹರಟೆಗಳೂ ಆಗಿವೆ. ಭಾವಪೂರ್ಣವಾಗಿರುವ, ಸರಳ ಭಾಷೆಯಲ್ಲಿ ಹಗುರಭಾವದಲ್ಲಿ ಇರುವ ಪುಟ್ಟ ಪುಟ್ಟ ಬರಹಗಳಲ್ಲಿ ಘನ ವಿಮರ್ಶಕರಿಗೂ ದಕ್ಕದ ಒಳನೋಟಗಳಿವೆ ಎಂಬುದು ರಹಮತ್ ತರೀಕೆರೆ ಅವರ ಅಭಿಪ್ರಾಯ.
ಟೀನಾ ಹುಟ್ಟಿದ್ದು ಬೆಳೆದಿದ್ದು ಮತ್ತು ಓದಿದ್ದೆಲ್ಲಾ ಮಲೆನಾಡಿನ ಸುಂದರ ಪರಿಸರದಲ್ಲಿ. ನಂತರ ಅವರ ಬದುಕು ಬಯಲು ಸೀಮೆಯತ್ತ ನಡೆದು ತುಮಕೂರು, ಮೈಸೂರು ಸುತ್ತಿ ಇದೀಗ ಬೆಂಗಳೂರಿನಲ್ಲಿ ನೆಲೆ ನಿಂತಿದೆ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ. ಓದಿದ ಟೀನಾ ಅಚಾನಕ್ಕಾಗಿ ಪತ್ರಿಕೆಗಳಲ್ಲಿ ಫ್ರೀಲಾನ್ಸ್ ಆಗಿ ಬರೆಯತೊಡಗಿ ಈಗ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪೂರ್ಣಾವಧಿ ಪತ್ರಕರ್ತರಾಗಿಬಿಟ್ಟಿದ್ದಾರೆ. ಆಪಾರ ಓದು ಮತ್ತು ಆಸಕ್ತಿಗಳಿರುವ ಇವರು ಬರೆದಿದ್ದು ಕಡಿಮೆಯೇ, ಆದರೆ ಮಾತಿಗೆ ಕುಳಿತಾಗ ಮಾತ್ರ ಮೂಗಿನ ಮೇಲೆ ಬೆರಳಿಡುವಂತೆ ಬೆರಗುಗೊಳಿಸಬಲ್ಲರು...ಆಳದ ಓದು, ಪತ್ರಿಕೋದ್ಯಮದ ಜೊತೆ ಜೊತೆಗೆ ಕಾವ್ಯದ ಒಡನಾಟವಿರುವ ಟೀನಾ ಚಂದದ ಕವಿತೆಗಳನ್ನೂ ಬರೆಯುತ್ತಾರೆ. ...
READ MORE