ಗಾಂಧಿ ಅಂತಿಮ ದಿನಗಳು

Author : ರಾಜಶೇಖರ ಮಠಪತಿ (ರಾಗಂ)

Pages 194

₹ 160.00




Year of Publication: 2012
Published by: ಕಣ್ವ ಪ್ರಕಾಶನ
Address: ಚಂದ್ರಾ ಲೇಔಟ್, ಬೆಂಗಳೂರು-72

Synopsys

‘ಗಾಂಧಿ ಅಂತಿಮ ದಿನಗಳು’ ಕೃತಿಯು ರಾಜಶೇಖರ ಮಠಪತಿ (ರಾಗಂ ) ಅವರ ಗಾಂಧಿ ಕುರಿತ ಲೇಖನಸಂಕಲನವಾಗಿದೆ. ಅಂತಿಮ ದಿನಗಳಲ್ಲಿ ಗಾಂಧಿಯ ವಿಚಾರ, ಅವರ ತುಮುಲ ಮತ್ತು ಒಟ್ಟಾರೆ ಅವರ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಹಿಡಿದಿಟ್ಟಿರುವ ಪುಸ್ತಕ ‘ಗಾಂಧಿ ಅಂತಿಮ ದಿನಗಳು’.

ಕೌಟುಂಬಿಕ ವಿಷಯದಲ್ಲಿ ಗಾಂಧೀಯವರು ಅನುಸರಿಸುತ್ತಿದ್ದ ಮಾರ್ಗಗಳನ್ನು ಈ ಕೃತಿಯು ವಿಶ್ಲೇಷಿಸುತ್ತದೆ. ಗಾಂಧೀ ಉಪೇಕ್ಷೆಗೆ ಒಳಗಾಗಿಯೋ ಏನೋ ಗಾಂಧಿಯಿಂದ ಸಿಡಿದು ನಿಂತ ಹಿರಿಯ ಮಗ ಹರಿಲಾಲ್ ಕುಡಿತದ ವ್ಯಸನಕ್ಕೆ ಬಲಿಯಾಗಿ ಸಮಸ್ಯೆಯಾಗಿಯೇ ಉಳಿಯುತ್ತಾನೆ ಎನ್ನುವ ವಿಚಾರಗಳನ್ನು ಇಲ್ಲಿ ಲೇಖಕ ತೆರೆದಿಟ್ಟಿದ್ದಾರೆ. ಮದ್ಯಪಾನದ ವಿರುದ್ಧ ಸಮರವನ್ನು ಸಾರಿದ ಗಾಂಧಿಗೆ ಇದರಿಂದ ಉಂಟಾದ ಸಂಕಟ ಅಪರಿಮಿತ. ಹೀರಾಲಾಲ್‌ನ ಜೀವನ ವೃತ್ತಾಂತವನ್ನು ಅವನ ಮಗಳು ನೀಲಮ್ ಪಾರಿಖ್ ತಮ್ಮ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ತಮ್ಮ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿ ಮತ್ತು ಪತ್ನಿ ಕಸ್ತೂರಬಾ ಅವರ ಮರಣ ಗಾಂಧಿಯನ್ನು ಕಂಗೆಡಿಸುತ್ತದೆ. ಈ ರೀತಿಯ ಗಾಂಧಿಯ ವಿವಿಧ ಛಾಯೆಯುಳ್ಳ ವಿಶಿಷ್ಟ ಬದುಕನ್ನು ತೆರೆದಿಡುತ್ತದೆ ಈ ಕೃತಿ. ಭಾರತ ಹಾಗೂ ಪಾಕ್‌ನಲ್ಲಿ ಧರ್ಮದ ಹೆಸರಿನಲ್ಲಿ ನಡೆದ ಹಿಂಸೆ, ಹತ್ಯೆ, ಅತ್ಯಾಚಾರಗಳ ಅಬ್ಬರದಲ್ಲಿ ಗಾಂಧಿ ವಾಸ್ತವ ನೆಲೆಯ ನಿವಾರಣೆ ಮತ್ತು ಪರಿಹಾರದ ದಿಕ್ಸೂಚಿಯನ್ನು ಕೊಡಲಾಗದೆ ಹೋಗುತ್ತಾರೆ. ಆಗ ಅವರು ಮೂಕಪ್ರೇಕ್ಷಕನಂತೆ ಪರಿತಪಿಸುವುದನ್ನು ಮತ್ತು ಹತಾಶರಾಗುವುದನ್ನು ಇಲ್ಲಿನ 34 ಲೇಖನಗಳಲ್ಲಿ ಕಾಣಬಹುದು.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Reviews

(ಹೊಸತು, ಸಪ್ಟೆಂಬರ್ 2012, ಪುಸ್ತಕದ ಪರಿಚಯ)

ರಾಷ್ಟ್ರಪಿತ ಮಹಾತ್ಮಾಗಾಂಧಿಯನ್ನು ಅರಿಯದವರು ನಮ್ಮ ದೇಶದಲ್ಲಷ್ಟೇ ಅಲ್ಲ; ಪ್ರಪಂಚದಲ್ಲೇ ಯಾರೂ ಇಲ್ಲ. ಗತಿಸಿ ಅರವತ್ನಾಲ್ಕು ವರ್ಷ ಕಳೆದರೂ ನಮಗೆ ಗಾಂಧಿಯನ್ನು ಮರೆಯ ಲಾಗುತ್ತಿಲ್ಲ. ಹಿಂದೆಂದಿಗಿಂತಲೂ ಇಂದು ಹೆಚ್ಚು ಚರ್ಚೆಗೊಳಗಾಗುತ್ತಿರುವ ವ್ಯಕ್ತಿ ಗಾಂಧೀಜಿ. ಸ್ವಾತಂತ್ರ್ಯ ಚಳುವಳಿ, ಅಸ್ಪೃಶ್ಯತಾ ನಿವಾರಣೆಯ ಹರಿಕಾರರಾಗಿ ಅವರು ಸಫಲರಾದದ್ದು ಮತ್ತು ಕೆಲವೊಂದು ಪ್ರಯತ್ನಗಳಲ್ಲಿ ವಿಫಲರಾದದ್ದು ಯಾಕೆ ? ಹಿಂದೂ ಮುಸ್ಲಿಂ ದಂಗೆಯನ್ನು ಅಹಿಂಸಾಮೂರ್ತಿಯಾಗಿದ್ದ ಅವರು ಹೇಗೆ ಕಂಡರು ? ಶಾಂತಿ ಮಂತ್ರ ಜಪಿಸುತ್ತ ಉಪವಾಸ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಅವರನ್ನು ಅವರ ಅನುಯಾಯಿಗಳು, ನಿಕಟವರ್ತಿಗಳು ಕಂಡ ಬಗೆ ಹೇಗೆ ? ಅವರ ಪರ-ವಿರೋಧ ಶಕ್ತಿಗಳ ಪ್ರಮಾಣವೆಷ್ಟು? ಗಾಂಧಿಯ ಒಂದು ಮುಖವನ್ನು ಅನಾವರಣಗೊಳಿಸಿದ ಮತ್ತು ಅವರ ವ್ಯಕ್ತಿತ್ವವನ್ನು ಎತ್ತರಿಸಿದ ಸಾಹಿತ್ಯ ನಮ್ಮಲ್ಲಿ ಸಾಕಷ್ಟಿದೆ. ಅವರು ಎದುರಿಸಿದ ಒತ್ತಡಗಳು, ಬಿಕ್ಕಟ್ಟುಗಳು, ದುಗುಡಗಳು ಹೇಳಿ ಮುಗಿಯದಷ್ಟಿವೆ. ಅವರೇ ತಮ್ಮ ಆತ್ಮಕಥೆಯಲ್ಲಿ ಸತ್ಯದೊಂದಿಗೆ ನಡೆಸಿದ ಪ್ರಯೋಗಗಳೆಂದು ಎಷ್ಟೋ ಸತ್ಯಗಳನ್ನು ಧಾರೆ ಧಾರೆಯಾಗಿ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಗಾಂಧಿ ತನ್ನ ಕೆಲವು ಅಚಲ ನಿಲುವಿಗೆ ಬದ್ಧರಾಗಿ ಎಷ್ಟೆಷ್ಟನ್ನೋ ಸಾಧಿಸಿದರು. ಆದರೆ ಕೆಲವೊಂದನ್ನು ಸಾಧಿಸಲಾಗಲಿಲ್ಲ. ಅವರ ಕೊನೆಯ ದಿನಗಳಲ್ಲಿ ಇದು ಅವರನ್ನು ಕಾಡುತ್ತಿತ್ತು ಗಾಂಧಿ ಹಾಗೆ ಮಾಡಬೇಕಿತ್ತು - ಹೀಗೆ ಮಾಡಬೇಕಿತ್ತು - ಹಾಗೆ ಮಾಡಬಾರದಿತ್ತು ಎಂಬಂತಹ ನಿರ್ದೇಶನಗಳನ್ನು ಏನೂ ಸಾಧಿಸಲಾಗದವರು ಕೊಡುತ್ತಲೇ ಇರುತ್ತಾರೆ. ಗಾಂಧಿಯ ತಲ್ಲಣಗಳೇನಾಗಿದ್ದವೆಂದು ಇಲ್ಲಿ ಓದಿನೋಡಿ.

Related Books