ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ.
ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ಭಾಷಾ ಅಧ್ಯಯನ, ಭಾಷಾಂತರ, ಸಿನಿಮಾ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ಕೃತಿಗಳಲ್ಲಿ 'ಗಾಂಧೀ ಮತ್ತು ಗೂಂಡಾ', 'ಎರಡು ದಡಗಳ ನಡುವೆ', 'ಒಂದಷ್ಟು ಕರುಣೆ ಮತ್ತಷ್ಟು ನೀರು', 'ಫಕೀರನ ಫಿಲ್ಮಿ ದುನಿಯಾ', 'ನನ್ನೊಳಗಿನ ನಾನು', 'ಓಶೋ-ಒಂದು ಕಿರಣದ ಪಯಣ', 'ಶಬ್ದ ಸೂತಕದಿಂದ', 'ನಿಶಾಗಾನ', 'ವಿಭಂದ', 'ಬೇಷರತ್', 'ಜಗತ್ಪ್ರಸಿದ್ಧ ಭಾಷಣಗಳು', ‘ಹೆಣ್ಣು ಹೇಳುವ ಅರ್ಧ ಸತ್ಯ’, ‘ಕೀಟ್ಸ್ -ನೀರ ಮೇಲೆ ನೆನಪ ಬರೆದು’, ‘ಕಾವಕ್ಕೆ ಉರುಳು’, 'ಜಾಡಮಾಲಿಯ ಜೀವ ಕೇಳುವುದಿಲ್ಲ’,' Abbas-an Island', 'Songs of Saint' Rabindranth Tagore my faith and strength’ ಅವರ ಪ್ರಮುಖ ಕೃತಿಗಳು. ಅವರ 'ಜಗದ್ವಂದ್ಯ ಭಾರತಂ' ಕೃತಿಗೆ ಶಿವಮೊಗ್ಗದ ಕರ್ನಾಟಕ ಲೇಖಕರ ಸಂಘವು ಕುವೆಂಪು ಅವರ ಹೆಸರಿನಲ್ಲಿ ಕೊಡುವ ಅತ್ಯುತ್ತಮ ಕಾದಂಬರಿ 2019ನೇ ಸಾಲಿನ ಪುಸ್ತಕ ಬಹುಮಾನ ಸಂದಿದೆ.