ಲೇಖಕ ಗಣೇಶ್ ಕಾಸರಗೋಡು ಅವರು ಬರೆದ ಲೇಖನ ಕೃತಿ ʻಬೆಳ್ಳಿ ತೆರೆಯ ಬಂಗಾರದ ಗೆರೆʼ. ಸಿನೆಮಾ ಪತ್ರಕರ್ತ ಹಾಗೂ ಲೇಖಕ ಡಾ. ಶರಣು ಹುಲ್ಲೂರು ಅವರು ಪುಸ್ತಕದಲ್ಲಿ, “ದೂರದಿಂದ ಇವರು ಸಂಜೆ ಆಕಾಶ. ಹಲವು ರೀತಿಯ ಆಕಾರ, ಚಿತ್ತಾರ. ಕೆಲವರಿಗೆ ಉರಿವ ಜಮದಗ್ನಿ, ಹಿಡಿದರೆ ಬಿಡದ ವಿಶ್ವಾಮಿತ್ರ, ಬಲ್ಲವರಿಗೆ ಹಿರಿಯಣ್ಣ, ಮಾರ್ಗದರ್ಶಿ, ಉರಿವ ದೀಪದಲ್ಲಿನ ಬೆಳಗು, ಬೆಳಕು. ಆಯ್ಕೆ ನಿಮ್ಮದು. ಸಿನಿಮಾ ಪತ್ರಕರ್ತರಿಗೆ ಗಾಸಿಪ್, ಗ್ಲಾಮರ್ ಹೊರತಾಗಿ ಬೇರೆ ಏನಾದರೂ ಬರೆಯುವ ತಾಕತ್ತು ಇದೆಯಾ ಅಂದವರಿಗೆ ಉಡಿತುಂಬ ಪುಸ್ತಕ ಕೊಟ್ಟರು. ಸ್ಟಾರ್ ಕಲಾವಿದರ ಹಿಂದೆ ಬೀಳದೆ ನೊಂದ ನಟ ನಟಿಯರ ಮನೆಬಾಗಿಲು ತಟ್ಟಿದರು. ಯಾವುದೇ ಮುಲಾಜಿಗೆ ಒಳಗಾಗದೇ ಕಂಡದ್ದನ್ನು ಕಂಡಂತೆ ಬರೆದರು, ನುಡಿದರು. ಸರಿ ಅನಿಸದಿದ್ದಾಗ ತನ್ನ ವೃತ್ತಿ ಬಾಂಧವರ ಮೇಲೆಯೇ ಸಿಟ್ಟು ಮಾಡಿಕೊಂಡರು. ನೇರ-ದಿಟ್ಟನಿರಂತರತೆಯ ಕಾರಣಕ್ಕಾಗಿ ವಿವಾದ ಮೈಮೇಲೆ ಎಳೆದುಕೊಂಡರು. ಇದು ಅವರ ವ್ಯಕ್ತಿತ್ವ ಮತ್ತು ವರ್ಣರಂಜಿತ ಬದುಕು. ಕೆಲ ಹಿರಿಯ ಪತ್ರಕರ್ತರನ್ನು ಕಂಡಾಗ ಹಲವು ರೀತಿಯ ಪ್ರಶ್ನೆಗಳು ನನ್ನಲ್ಲೇ ಹರಿದಾಡಿದ್ದುಂಟು. ಅವರೊಂದಿಗೆ ಮಾತನಾಡಿದಾಗ ಅನುಮಾನಗಳೇ ಹೆಚ್ಚಾಗಿದ್ದುಂಟು. ಅವರಿಗೆ ಸಿಕ್ಕ ಅವಕಾಶ, ಅನನ್ಯತೆ, ಅನುಕೂಲ ನಮಗೇಕೆ ಸಿಗಲಿಲ್ಲ ಎಂದು ಕೊರಗಿದ್ದುಂಟು. ಈ ಸಂಘರ್ಷವನ್ನು ಮತ್ತಷ್ಟು ಹೆಚ್ಚು ಮಾಡಿದ್ದು ಗಣೇಶ್ ಕಾಸರಗೋಡು. ಅವರ ಪ್ರತಿ ಪುಸ್ತಕ ಓದಿದಾಗಲೂ ಇತಿಹಾಸ ಇಣುಕುತ್ತದೆ. ಇಂಥದ್ದೊಂದು ಘಟನೆ ನಡೆದಿರಲಿಕ್ಕೆ ಸಾಧ್ಯವಾ ಅನಿಸುತ್ತದೆ. ಛೇ.. ಅವರು ಹಾಗೆ ಬರೆಯಬಾರದಿತ್ತು ಎಂಬ ಸಣ್ಣ ಮರುಕ ಮೂಡುತ್ತದೆ. ಅದಕ್ಕೆ ಕೊಟ್ಟ ಪೂರಕ ಮಾಹಿತಿ ನಂಬಿಕೆ ಹುಟ್ಟಿಸುತ್ತದೆ. ಇದು ಲೇಖಕನಿಗೆ ಇರಬೇಕಾದ ಗುಣಲಕ್ಷಣ. ಈ ಲಕ್ಷಣದೊಂದಿಗೆ ಅವರು ಜೀವಿಸಿದ್ದಾರೆ. ನಾವು ಹೊದ್ದು ಮಲಗಿದ್ದೇವೆ. ಅವರ ವಿಷಯವನ್ನು ಗ್ರಹಿಸುವ ಪರಿ, ಅದಕ್ಕೆ ಬೇಕಿರುವ ಆಕರ ಸಂಗ್ರಹ, ಸಾಂದರ್ಭಿಕ ಚಿತ್ರಗಳ ಬಳಕೆ, ವಸ್ತುಸ್ಥಿತಿಯನ್ನು ಅದೇ ಕಾಲಘಟ್ಟಕ್ಕೆ ಹೋಗಿ ಕಟ್ಟಿಕೊಡುವ ಚಮತ್ಕಾರ ಅನನ್ಯ” ಎಂದು ಹೇಳಿದ್ದಾರೆ.
ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ. ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ...
READ MORE