‘ವಿಧವೆಯರು ವಿವಾಹವಾದರು’ ಕೃತಿಯು ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ಅವರ ಲೇಖನಸಂಕಲನವಾಗಿದೆ. ಹೆಣ್ಣಿನ ಬದುಕಿಗೊಂದು ಘನತೆ ತಂದುಕೊಡಲು ಮಹತ್ತರ ಪಾತ್ರ ವಹಿಸಿರುವ ಎಲ್ಲಾ ಹೋರಾಟಗಳಿಗೆ ಈ ಕೃತಿಯು ಸಮರ್ಪಿತವಾಗಿದೆ. ಕೃತಿಯ ಕುರಿತು ಜಿ.ಎನ್. ಮೋಹನ್ ಹೀಗೆ ಹೇಳುತ್ತಾರೆ; ಈ ಕೃತಿ ಪುಟ್ಟದು. ಆದರೆ ದೊಡ್ಡ ಪರಿಣಾಮ ಬೀರುವಂತಹದ್ದು. ನಮ್ಮ ರಾಜ್ಯದ ಒಳಗೆ ವಿಧವೆಯರ ವಿವಾಹ ಒಂದು ಆಂದೋಲನವಾಗಿ ರೂಪು ತಳೆದದ್ದರ ಮಹತ್ವದ ದಾಖಲೆ ಇದು. ಶಾಲೆಯ ಮೆಟ್ಟಿಲು ಹತ್ತುವ ಮುಂಚೆಯೇ ವಿಧವೆಯರಾದ, ಗರ್ಭದಲ್ಲಿರುವಾಗಲೇ ಇನ್ನೊಬ್ಬರಿಗೆ ಹೆಂಡತಿ ಎಂದು ನಿಗದಿಯಾದ ಸಮಾಜದಲ್ಲಿ ಅದನ್ನು ಧಿಕ್ಕರಿಸಿ ನಡೆದವರ ಕಥನವಿದು. ಎಷ್ಟೊಂದು ಹಣತೆ ಬೆಳಗಲು ಮೊದಲು ಹಚ್ಚಬೇಕಾದದ್ದು ಒಂದು ಹಣತೆಯನ್ನು ಮಾತ್ರ. ಅಂತೆಯೇ ಅಕದಾಸ ಭಟ್ಟರು. ಮೊದಲ ಹೆಜ್ಜೆ ಇಟ್ಟು ತಾವೇ ವಿಧವಾ ವಿವಾಹವಾಗಿ ಆರಂಭಿಸಿದ ಆಂದೋಲನ ನೂರಾರು ವಿಧವೆಯರ ಮರು ವಿವಾಹಕ್ಕೆ ಮುನ್ನುಡಿ ಬರೆಯಿತು. ಸಮಾಜದ, ಮಠಗಳ ಕಟ್ಟು ಕಟ್ಟಳೆಗಳನ್ನು ಎದುರಿಸಿ ಗೆದ್ದಿತು. ಇದು ಬದುಕಿನಲ್ಲಿ ಸೋತವವರು ಗೆದ್ದ ಕಥನ.
ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ಅವರು ಮೂಲತಃ ಪತ್ರಕರ್ತರು. ಹಲವಾರು ಹೋರಾಟಗಳಲ್ಲಿ ಭಾಗವಹಿಸಿರುವ ಅವರು ಬಾಲ್ಯ ವಿವಾಹ, ವಿಧವಾ ವಿವಾಹದ ಬಗ್ಗೆ ಸಮಾಜ ಬೆಚ್ಚಿ ಬೀಳುವಂತಹ ಸಂಗತಿಗಳನ್ನು ಹೊರತೆಗೆದಿದ್ದಾರೆ. ಶರಾವತಿ ಅಭಿಯಾನದಲ್ಲಿ ಭಾಗವಹಿಸಿ, ಶರಾವತಿ ಅಭಯಾರಣ್ಯದೊಳಗಿನ ನಿವಾಸಿಗಳ ಪರ ದನಿ ಎತ್ತಿದರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಲೇಖನಗಳನ್ನ ಮತ್ತು ಕೃತಿಯನ್ನು ಬರೆದಿದ್ದಾರೆ. ಕೃತಿಗಳು: ವಿಧವೆಯರು ವಿವಾಹವಾದರು ...
READ MORE