ಲೇಖಕ ಡಿ. ಎಸ್. ನಾಗಭೂಷಣ ಅವರ ಈವರೆಗಿನ ಸಾಹಿತ್ಯ ವಿಮರ್ಶೆ ಕೃತಿ ʻರೂಪ ರೂಪಗಳನು ದಾಟಿʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ನನ್ನ ಈವರೆಗಿನ ಸಾಹಿತ್ಯ ವಿಮರ್ಶೆಯ ಮುಖ್ಯ ಲೇಖನಗಳನ್ನು ಸಂಕಲಿಸಿ ಇಲ್ಲಿ ನೀಡುತ್ತಿರುವೆ. ಇಲ್ಲಿ ಸೇರದವು ಅಮುಖ್ಯ ಎಂದು ಇದರ ಅರ್ಥವಲ್ಲ. ನನ್ನ ಕಾಲದ ಸಾಹಿತ್ಯ ಕೃತಿಗಳನ್ನು ಮತ್ತು ಅದರ ಜೊತೆಗೇ ನಡೆದ ಹಲವು ವಾಗ್ವಾದಗಳನ್ನೂ ಅವುಗಳ ಚಾರಿತ್ರಿಕ ಪರಿಪ್ರೇಕ್ಷ್ಯದಲ್ಲಿ ನಾನು ಅರ್ಥೈಸಿಕೊಂಡಿರುವ, ಬೆಲೆ ಕಟ್ಟಿರುವ ಬಗೆಗಳ ಒಂದು ಸಂಯೋಜಿತ ನೋಟ ಕ್ರಮವೊಂದನ್ನು ಕೊಡುವಂತಹ ಲೇಖನಗಳನ್ನಷ್ಟೇ ಅದೂ ಪ್ರಕಾಶಕರು ಸೂಚಿಸಿದ ಪುಸ್ತಕದ ಗರಿಷ್ಠ ಗಾತ್ರದ ಮಿತಿಯಲ್ಲಿ-ಇಲ್ಲಿ ಸಂಕಲಿಸಿ ನೀಡಲಾಗಿದೆ. ಬಿಡಿ ಪುಸ್ತಕ ವಿಮರ್ಶೆಗಳು, ಸಂದರ್ಶನಗಳು, ಕಮ್ಮಟಗಳು ಮತ್ತು ಕೆಲವು ಸಾಂದರ್ಭಿಕ ಮಹತ್ವ ಮಾತ್ರವುಳ್ಳ ಲೇಖನಗಳು ಇಲ್ಲಿ ಸೇರಿಲ್ಲ. ಜೊತೆಗೆ, ಈ ಲೇಖನಗಳನ್ನು ನಾನು ಬರೆದ ಅಥವಾ ನಿಜವಾಗಿ ಹೇಳುವುದಾದರೆ ನನ್ನಿಂದ ಬರೆಸಲ್ಪಟ್ಟ ಕಾಲಕ್ರಮದಲ್ಲಿಯೇ ಜೋಡಿಸಿ ನೀಡಲಾಗಿದೆ. ನನ್ನ ವಿಮರ್ಶಾ ಕ್ರಮ ಮತ್ತು ನೋಟದ ವ್ಯಾಪ್ತಿ ಹಾಗೂ ಅವು ಬೆಳೆದ ಮತ್ತು ವಿಕಾಸಗೊಂಡ ರೀತಿ ನೀತಿಗಳನ್ನು ಓದುಗರು ಗಮನಿಸಬೇಕೆಂಬುದು ಇದರ ಉದ್ದೇಶ. ಇನ್ನು ಬರೆಸಲ್ಪಟ್ಟ ಎಂದು ಏಕೆ ಹೇಳುತ್ತಿರುವೆನೆಂದರೆ, ಇಲ್ಲಿರುವ-ಬಹುಶಃ ಒಂದು ಲೇಖನದ ಹೊರತಾಗಿ ಯಾವೊಂದು ಲೇಖನವನ್ನೂ ನಾನು ಸ್ವಯಂಸ್ಪೂರ್ತಿಯಿಂದ ನಾನಾಗಿ ಬರೆದವನಲ್ಲ. ಎಲ್ಲವೂ ಆಹ್ವಾನಿತ ಲೇಖನಗಳೇ. ಇಂದು ಸಾಹಿತ್ಯ ವಿಮರ್ಶೆ ಬಹುಶಿಸ್ತೀಯ ಅಧ್ಯಯನವಾಗಿದೆ, ಸಂಸ್ಕೃತಿ ವಿಮರ್ಶೆಯಾಗಿದೆ, ಕೆಳವರ್ಗಗಳ ಅಧ್ಯಯನವನ್ನು ಒತ್ತಾಯಿಸುತ್ತಿದೆ; ಹಾಗಾಗಿ ಕನ್ನಡ ಸಾಹಿತ್ಯ ಅಧ್ಯಯನ ಮೂಲತಃ ಸಂಸ್ಕೃತ ಸಾಹಿತ್ಯ ಮೀಮಾಂಸೆಯಾಗಿರುವ ಭಾರತೀಯ ಕಾವ್ಯ ಮೀಮಾಂಸೆಯಿಂದ ಮುಕ್ತಿ ಪಡೆದು ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆಯನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಕೂಗಾಡತೊಡಗಿರುವಾಗ, ಈ ಎಲ್ಲ ಮಾತು, ವಾದ, ಕೂಗು ಕಹಳೆಗಳು ಕೇಳಿಸುತ್ತಿರುವುದು ಯಾವ ಕೋಟೆಯ ಬತೇರಿಗಳಿಂದ ಎಂದು (ಒಳ)ಕಣ್ಣು ಬಿಟ್ಟು ನೋಡಬೇಕಾಗಿದೆ: ಒಮ್ಮೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. 'ಆಧುನಿಕತೆ'ಯನ್ನು ಒಂದು ಪ್ರಗತಿಪರತೆಯ ಸಂಕೇತ-ಸಾಧನವನ್ನಾಗಿ ನಾವು ಸ್ವೀಕರಿಸಿದ್ದರಲ್ಲಿ ಅಡಗಿರಬಹುದಾದ ವಿಸ್ಕೃತಿಯ ನೆಲೆಗಳನ್ನು ನಾವಿಂದು ಅನ್ವೇಷಿಸಬೇಕಿದೆ. ನನ್ನ ಈ ಕೃತಿಯ ಶೀರ್ಷಿಕೆ 'ರೂಪರೂಪಗಳನು ದಾಟಿ' ಎಂಬುದು ನನ್ನ ಪ್ರಜ್ಞೆಯ ಒಂದು ಭಾಗವಾಗಿರುವ ಕುವೆಂಪು ಅವರ ಪದ್ಯದ ಸಾಲೊಂದನ್ನು ನೆಪವಾಗಿಟ್ಟುಕೊಂಡು, ನಾನು ಅರ್ಥ ಮಾಡಿಕೊಂಡ ಗಣಿತಶಾಸ್ತ್ರದ ಸ್ವರೂಪವನ್ನೂ ಸೇರಿಸಿಕೊಂಡಂತೆ, ಇದನ್ನೆಲ್ಲ ಧ್ವನಿಸುವುದು ಎಂದು ಭಾವಿಸಿದ್ದೇನೆ”.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE