‘ರೆಕ್ಕೆಗಳೊಡೆದಾವೋ ಮುಗಿಲಿಗೆ’ ಕವಿ, ಲೇಖಕ ಡಾ. ಸತ್ಯಮಂಗಲ ಮಹಾದೇವ ಅವರ ಜೀವಸರಪಳಿಯ ಸಾಹಿತ್ಯ ಕಥನ- ಲೇಖನಗಳ ಕಟ್ಟು. ಇಲ್ಲಿ ಸತ್ಯಮಂಗಲ ಮಹಾದೇವ ಅವರ 24 ಲೇಖನಗಳು ಸಂಕಲನಗೊಂಡಿದೆ. ಈ ಕೃತಿಗೆ ಲೇಖಕ ಡಾ. ಬೈರಮಂಗಲ ರಾಮೇಗೌಡ ಅವರ ಬೆನ್ನುಡಿಯ ನುಡಿಗಳಿವೆ. ಕೃತಿಯ ಕುರಿತು ಬರೆಯುತ್ತಾ ‘ಭಾವತೀರದ ಹಾದಿಯಲ್ಲಿ' 'ಹೆಜ್ಜೆ ಮೂಡಿದ ಮೇಲೆ' ಮತ್ತು 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಎನ್ನುವ ಮೂರು ಕವನ ಸಂಕಲನಗಳನ್ನು ಪ್ರಕಟಿಸಿ, ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿ, ರಾಜ್ಯದ ಒಳಗೆ ಮತ್ತು ಹೊರಗೆ ಪ್ರತಿಷ್ಠಿತ ಕವಿಗೋಷ್ಠಿ ಕವಿಸಮ್ಮೇಳನಗಳಲ್ಲಿ ಕವಿತೆಗಳನ್ನು ವಾಚನ ಮಾಡಿ ಹೊಸ ತಲೆಮಾರಿನ ಮುಖ್ಯ ಕವಿಗಳಲ್ಲಿ ಒಬ್ಬರಾಗಿರುವ ಸತ್ಯಮಂಗಲ ಮಹಾದೇವ ರೆಕ್ಕೆಗಳೊಡೆದಾವೋ ಮುಗಿಲಿಗೆ' ಲೇಖನಗಳ ಸಂಕಲನ ಹೊರತರುವ ಮೂಲಕ ಅವರ ಸಾಹಿತ್ಯ ಕೃಷಿಯ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿದ್ದಾರೆ ಎಂದಿದ್ದಾರೆ ಬೈರಮಂಗಲ ರಾಮೇಗೌಡ. ಜೊತೆಗೆ ‘ಕವಿಯಾಗಿ ಹೆಸರು ಮಾಡಿದವರು ಗದ್ಯ ಬರವಣಿಗೆಯತ್ತ ಆಸಕ್ತಿ ತೋರಿದರೆ ಉಂಟಾಗುವ ಸಹಜ ಕುತೂಹಲದಿಂದಲೇ ಈ ಕೃತಿಯಲ್ಲಿರುವ 24 ಲೇಖನಗಳನ್ನು ಓದಿದಾಗ ನನಗೆ ಎದ್ದು ಕಂಡದ್ದು ಅನುಭಾವ, ಅಧ್ಯಾತ್ಮದ ಬಗೆಗೆ ಅವರಿಗಿರುವ ಪ್ರೀತಿ, ಮಹಾದೇವ ಪಿಎಚ್.ಡಿ. ಪದವಿಗಾಗಿ ನಡೆಸಿದ ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿನ ಅನುಭಾವದ ತೌಲನಿಕ ಅಧ್ಯಯನ ಅವರ ಮೇಲೆ ಉಂಟುಮಾಡಿರುವ ಗಾಢವಾದ ಪ್ರಭಾವ ಇದಕ್ಕೆ ಕಾರಣವಾಗಿರಬಹುದು ಎನ್ನುತ್ತಾರೆ. ಅಲ್ಲದೇ ಅನುಭಾವ-ಅಧ್ಯಾತಗಳ ಅಪೂರ್ವ ಸಂಗಮವೇ 'ದರ್ಶನ'ದ ಸ್ವರೂಪವನ್ನು ಪಡೆದು, ಕವಿಯ ವ್ಯಕ್ತಿತ್ವವೂ ಕವಿಸೃಷ್ಟಿಯೂ ಔನ್ನತ್ಯಕ್ಕೇರಿದ್ದಕ್ಕೆ ಕುವೆಂಪು ಮತ್ತು ಅವರ ಸಾಹಿತ್ಯ ಅದ್ಭುತ ಸಾಕ್ಷಿಯಾಗಿ ನಮ್ಮೆದುರಿಗಿದೆ.
ಮಹಾದೇವ ಅಂಥ ವಿಶಿಷ್ಟ ಮಾದರಿಯೊಂದಕ್ಕೆ ತಮಗರಿವಿಲ್ಲದೆಯೇ ಒಲಿಯುತ್ತಿರುವ ಪ್ರಾರಂಭಿಕ ಲಕ್ಷಣ ಈ ಲೇಖನಗಳಲ್ಲಿ ಗೋಚರವಾಗುತ್ತದೆ. ಜಾನಪದ, ಶಾಸನ, ವೀರಗಲ್ಲು, ಭಾಷಾಶಾಸ್ತ್ರ, ಮಹಾಕಾವ್ಯದ ಒಂದು ವಿಶೇಷ ಪ್ರಸಂಗ, ಕಾವ್ಯ ಮೀಮಾಂಸೆ, ಕೀರ್ತನ ಸಾಹಿತ್ಯ, ಪ್ರಗತಿಶೀಲ ಸಾಹಿತ್ಯ ಕುರಿತಂತೆ ಮತ್ತೆ ಮತ್ತೆ ಅಲ್ಲಿ ಇಲ್ಲಿ ಚರ್ಚೆಯಾಗುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮುಂದುವರಿದ ಚರ್ಚೆಯನ್ನು ಬೆಳೆಸಿ ತಮ್ಮ ಗ್ರಹಿಕೆಯನ್ನು ಮಂಡಿಸುವ ಕ್ರಮವನ್ನು ಮಹಾದೇವ ಇಲ್ಲಿ ಅನುಸರಿಸಿದ್ದಾರೆ. ಅನುಭಾವ, ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯ ಕುರಿತಂತೆಯೇ ಆರು ಲೇಖನಗಳಿರುವುದು ಮಹಾದೇವ ಅವರ ತೀವ್ರವಾದ ಆಸಕ್ತಿ ಯಾವ ಕಡೆಗಿದೆ ಎನ್ನುವುದನ್ನು ಸೂಚಿಸುತ್ತದೆ. ಅಧ್ಯಯನದ ವಿಸ್ತಾರ ಮತ್ತು ಸ್ವತಂತ್ರ ಚಿಂತನೆಯ ಜಾಡಿನಲ್ಲಿ ನಡೆಯುತ್ತಿರುವ ಡಾ. ಸತ್ಯಮಂಗಲ ಮಹಾದೇವ ಅವರ 'ಸಾಹಿತ್ಯ ಕಥನ ಲೇಖನಗಳ ಕಟ್ಟು' ಅವರ ಮುಂದಿನ ಹೆಜ್ಜೆಗಳ ಮೇಲೆ ಭರವಸೆಯಿಡುವಂತೆ ಮಾಡುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು. ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ, ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು. ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...
READ MORE