‘ನೀವು ಅರಿಯಲೇಬೇಕಾದ ಚಂಪಾ’ ಈ ಕೃತಿಯು ಟಿ. ಸುಬ್ರಹ್ಮಣ್ಯಂ ಅವರ ಲೇಖನಗಳ ಸಂಕಲನವಾಗಿದೆ. 7 ಅಧ್ಯಾಯಗಳನ್ನು ಒಳಗೊಂಡಿದೆ. ಚಂಪಾ ಮತ್ತು ಅಸಂಗತತೆ, ಹತ್ತು ಸಮಸ್ತರು ಕಂಡ ಚಂಪಾ, ಚಂಪಾ ಕಂಡ ಹತ್ತು ಸಮಸ್ತರು, ಚಂಪಾ : ಅಪೂರ್ಣ(ರ್ವ) ಸಂದರ್ಶನ, ಚಂಪಾ ಉವಾಚ : ಚಂಪಾ ಏನೆನ್ನುತ್ತಾರೆ? ಚಂಪಾ ಅಕ್ಷರ ಲೋಕ : ವಿಹಂಗಮ ನೋಟ, ಚಂಪಾ ಅಸಂಗತ ನಾಟಕಗಳು ಹಾಗೂ ಅನುಬಂಧದಲ್ಲಿ ಚಂಪಾ ಜೀವನದ ಪ್ರಮುಖ ಘಟ್ಟಗಳು, ಚಂಪಾ ಕಟ್ಟಿದ ಹೆಸರುಗಳು ಇವು ಪ್ರಮುಖ ಅಧ್ಯಾಯಗಳು.
ಕೃತಿಯ ಬೆನ್ನುಡಿಯಲ್ಲಿ ಲೇಖಕ ಸುಬ್ರಹ್ಮಣ್ಯಂ ಅವರು, ‘ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಹುಟ್ಟಿ ಇಡೀ ಕರ್ನಾಟಕವನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡು 78ರ ಹರೆಯದಲ್ಲೂ ಎಡೆಬಿಡದೆ ದುಡಿಯುತ್ತಿರುವ ಚಂಪಾ ಏನಲ್ಲ? ಕವಿ, ನಾಟಕಕಾರ, ವಿಮರ್ಶಕ, ಪ್ರಬಂಧಕಾರ, ಅಂಕಣಕಾರ, ವಿಡಂಬನಕಾರ, ರಂಗಕರ್ಮಿ, ಬೋಧಕ, ಆಡಳಿತಗಾರ, ಪತ್ರಿಕೋದ್ಯಮಿ, ಇವೆಲ್ಲಕ್ಕೂ ಕಳಸವಿಟ್ಟಂತೆ ಕನ್ನಡದ ಹೋರಾಟಗಾರ -ಸಮಾಜವಾದಿ ಹೋರಾಟಗಾರ. ಜನರು ಚಂಪಾ ಅವರನ್ನು ಅರ್ಥ ಮಾಡಿಕೊಂಡಿರುವುದಕ್ಕಿಂತ ಅಪಾರ್ಥಮಾಡಿಕೊಳ್ಳಲು ಈ ಕೃತಿ ನೆರವಾಗುತ್ತದೆ. ಚಂಪಾ ಅವರೊಡನೆ ಸುದೀರ್ಘ ಸಂದರ್ಶನ ಇಲ್ಲಿದೆ. ಚಂಪಾರನ್ನು, ಸಮಕಾಲೀನರನ್ನು ಚಂಪಾ ಹೇಗೆ ಕಂಡಿದ್ದಾರೆ? ಚಂಪಾ ಜೀವನದ ಮುಖ್ಯ ಘಟನೆಗಳೇನು? ಚಂಪಾ ಸಾಧನೆ ಏನು? ಚಂಪಾ ವಿಚಾರ ಏನು? ಚಂಪಾ ಯಾರು? ಚಂಪಾ ಏನು? ಹೀಗೆ ಈ ಎಲ್ಲಾ ವಿಚಾರಗಳನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ಸುಬ್ರಹ್ಮಣ್ಯಂ ಅವರು ಚಂಪಾ ಅವರನ್ನು ಹೀಗೆ ಪ್ರಸ್ತುತಪಡಿಸುತ್ತಾರೆ : ಚಂಪಾ ಕನ್ನಡದ ಅತ್ಯಂತ ವಿವಾದಾತ್ಮಕ ಸಾಹಿತಿಗಳಲ್ಲಿ ಪ್ರಮುಖರು. ಇವರನ್ನು ಅರ್ಥಮಾಡಿಕೊಂಡವರೇ ಹೆಚ್ಚೆಂದು ಕಾಣಿಸುತ್ತದೆ. ಪ್ರೀತಿಸುವವರು ಹೆಚ್ಚೋ, ದ್ವೇಷಿಸುವವರು ಹೆಚ್ಚೋ.. ಸರಿಯಾಗಿ ಹೇಳಲಾಗದು. ಅದಕ್ಕೆ ಮುಖ್ಯ ಕಾರಣ ’ಚಂಪಾ ಅವರೇ ಆಗಿರಬಹುದು’. ಅವರ ಜೀವನದ ತುಂಬ ಅಸಂಗತ ಸಂಗತಿಗಳು ತುಂಬಿವೆ ಎನ್ನುತ್ತಾರೆ ಕೆಲವರು. ಅವರ ನಡವಳಿಕೆ ನೇರ, ಸರಳ, ಪ್ರಾಮಾಣಿಕ ಎನ್ನಿಸುವ ಹಾಗಿದ್ದರೂ, ಹಲವಾರು ಪ್ರಸಂಗಗಳು ಜನರ ಹುಬ್ಬೇರಿಸುವಂತೆ ಮಾಡುತ್ತದೆ; ಪ್ರಶ್ನಾರ್ಥಕ ಚಿಹ್ಹೆಗಳು ಮೂಡುತ್ತವೆ. ಚಂಪಾ ಅವರನ್ನು ಸಮರ್ಪಕವಾಗಿ ಅರಿಯಲು ಇರುವ ಏಕೈಕ ಆಧಾರಗಳೆಂದರೆ, ಅತ್ಯುತ್ತಮ ಮಾರ್ಗವೆಂದರೆ ಅವರ ಬರವಣಿಗೆಯನ್ನು ಸರಿಯಾದ ದೃಷ್ಟಿಕೋನದಿಂದ ಓದುವುದು ಆಗಿದೆ’ ಎನ್ನುತ್ತಾರೆ.
ಲೇಖಕ ಟಿ. ಸುಬ್ರಹ್ಮಣ್ಯಂ ಅವರು ಮೂಲತಃ ಹಾಸನ ಜಿಲ್ಲೆಯವರು. ಸಮಾಜವಾದಿ ಧೋರಣೆಯವರು. ರೈತ ದಲಿತ-ಚಳವಳಿಯ ಹೋರಾಟಗಾರರು. 33 ವರ್ಷ ಕಾಲ ಕನ್ನಡ ಸಾಹಿತ್ಯ ಬೋಧಕರಾಗಿ, 8 ವರ್ಷ ಕಾಲ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಾಗಿದ್ದು, ಸದ್ಯ ನಿವೃತ್ತರು. ಮೈಸೂರಿನಲ್ಲಿ ವಾಸವಿದ್ದಾರೆ. ಕೃತಿಗಳು : ಕನ್ನಡ ನವ್ಯಸಾಹಿತ್ಯ ಮತ್ತು ಅಸ್ತಿತ್ವವಾದ, ಮೋಳಿಗೆಯ ಮಾರಯ್ಯ. ...
READ MORE