ಕೃಷ್ಣಾ ಕೌಲಗಿ ಅವರು ತಮ್ಮ ಜೀವನಾನುಭವದ ಬುತ್ತಿಯನ್ನು ಮುಂದಿನ ತಲೆಮಾರುಗಳಿಗೆ ತಲುಪಲೆಂಬ ಶುದ್ಧ ಭಾವನೆಯಿಂದ ಬರೆದ ಲಹರಿಗಳಿವು. ಸಾಮಾನ್ಯರಂತಿರುವ ಅಸಮಾನ್ಯರ ವ್ಯಕ್ತಿತ್ವಗಳು ನಮ್ಮನ್ನು ಎದುರುಗೊಳ್ಳುತ್ತವೆ. ಅನಗತ್ಯ ರೂಪಕ, ಸಾಹಿತ್ಯಾಲಂಕಾರಗಳಿಗೆ ಕಡಿವಾಣ ಹಾಕಿ ವಿಚಾರಗಳನ್ನು ನೇರವಾಗಿ ತೆರೆದಿಟ್ಟಿದ್ದಾರೆ.
‘ಕೌಲಗಿ ಸ್ವಾಮಿರಾಯರೂ ಮಾವಿನ ಹಣ್ಣಿನ ಸೀಕರಣೆಯೂ’, ಹೀಗೊಬ್ಬ ಕನಸುಗಾರ ಶಿಕ್ಷಕನಾದ ಕತೆ, ಮುಚ್ಚಿಟ್ಟ ಕಣ್ಣುಗಳ ಹಿಂದೆ, ಬದುಕು ಪ್ರಕೃತಿಯ ಪ್ರತಿಫಲನ, ಕಳೆದರೆ ಪುಸ್ತಕ ಸಂತೆಯಲ್ಲಿ ಕಳೆದುಹೋಗಬೇಕು ಎಂಬ ಪರಿವಿಡಿಗಳು ಮನದಲ್ಲಿ ತಂಗಾಳಿಯ ಅಲೆಗಳನ್ನೆಬ್ಬಿಸುತ್ತವೆ.
"ಶಾಂತವಾಗಿ ಹರಿವ ನೀರಿನಲ್ಲಿ ಚಿಕ್ಕದೊಂದು ಕಲ್ಲು ಬಿದ್ಧಾಗ ಕಂಪನಗಳನ್ನೆಬ್ಬಿಸಿ ಅಲೆಗಳ ಉಂಗುರಗಳನ್ನು ಎಬ್ಬಿಸುದಿಲ್ಲವೇ ಥೇಟ್ ಅದೇ ರೀತಿಯಲ್ಲಿ, ಶಾಂತ ಮನಸ್ಸನ್ನು ಯಾವುದಾದರು ಒಂದು ವಿಷಯ ಕಲಕಿದಾಗ ಮನದಾಳದಿಂದ ಬರಬಹುದಾದ ವಿಚಾರಧಾರೆಯನ್ನ ಮನಸ್ಸಿನಲ್ಲಿಟ್ಟುಕೊಂಡು ಕೊಟ್ಟ ಹೆಸರು ‘ನೀರ ಮೇಲೆ ಅಲೆಯ ಉಂಗುರ’" ಎನ್ನುತ್ತಾರೆ ಲೇಖಕಿ.
ವೈಚಾರಿಕ ಬರಹಗಳಿಗೆ ಹೆಚ್ಚು ಒತ್ತು ನೀಡುವ ಬರೆಹಗಾರ್ತಿ ಕೃಷ್ಣಾ ಕೌಲಗಿ ವೃತ್ತಿಯಲ್ಲಿ ಶಿಕ್ಷಕರು. 1946 ಫೆಬ್ರುವರಿ 09 ಧಾರವಾಡದಲ್ಲಿ ಜನಿಸಿದರು. ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸ. ಇಳಿ ವಯಸ್ಸಿನಲ್ಲೂ ಬತ್ತದ ಬರವಣಿಗೆಯ ಉತ್ಸಾಹ ಅವರನ್ನು ಸಮಾಜಮುಖಿಯನ್ನಾಗಿಸಿದೆ. ತನ್ನೊಬ್ಬ ಹಳೆಯ ವಿದ್ಯಾರ್ಥಿಯಿಂದ ಟೈಪಿಂಗ್ ಕಲಿತು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಚಿಂತನಾ ಬರೆಹಗಳನ್ನು ಓದುಗರಿಗೆ ತಲುಪಿಸಿದರು. ‘ನೀರ ಮೇಲೆ ಅಲೆಯ ಉಂಗುರ’ ಅವರ ಅಂಕಣ ಬರಹಗಳ ಸಂಕಲನ. ...
READ MORE