ಕವಿ ಸಿದ್ಧಲಿಂಗಯ್ಯ ಅವರ ಲೇಖನಗಳ ಸಂಗ್ರಹ. ಈ ಸಂಗ್ರಹದ ಬಗ್ಗೆ ಹಿರಿಯ ಜಾನಪದ ವಿದ್ವಾಂಸ ಬಿ.ಎ. ವಿವೇಕ ರೈ ಅವರು ’ಡಾ. ಸಿದ್ಧಲಿಂಗಯ್ಯ ಅವರು ಕನ್ನಡ ಸಾಹಿತ್ಯ ಜಗತ್ತಿಗೆ ದಲಿತ ಸಂವೇದನೆಯ ಶಕ್ತಿ ತುಂಬಿದ ಕವಿ. ಜಾನಪದವನ್ನು ಜನಪರವನ್ನಾಗಿ ಅಧ್ಯಯನ ಮಾಡಿರುವ ಡಾ. ಸಿದ್ದಲಿಂಗಯ್ಯ ಅವರು ಸಾಹಿತ್ಯ ಮತ್ತು ಜಾನಪದದ ಸಂಬಂಧವನ್ನು ಶೋಷಿತ ವರ್ಗಗಳ ಹೋರಾಟದ ಹಾದಿಗಳನ್ನು ಕಂಡುಕೊಳ್ಳಲು ಸಮರ್ಥವಾಗಿ ಬಳಸಿದವರು. ಜನಪದ ಆರಾಧನೆಗಳು ಸಮಾಜಮುಖಿಯಾಗಿ ಕೆಲಸ ಮಾಡುವ ಬಗೆಗಳನ್ನು ಅನ್ವೇಷಣೆ ಮಾಡಿದವರು. ಡಾ. ಸಿದ್ದಲಿಂಗಯ್ಯ ಅವರ 'ಜನಸಂಸ್ಕೃತಿ' ಎನ್ನುವ ಲೇಖನಗಳ ಸಂಕಲನವು ವಿಶಿಷ್ಟವಾಗಿದೆ. ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಎನ್ನುವ ಮೂರು ನೆಲೆಗಳಲ್ಲಿರುವ ಇಲ್ಲಿನ ಲೇಖನಗಳು ಪರಸ್ಪರ ಅಂತರ್ ಸಂಬಂಧಿಯಾಗಿರುವುದರ ಜೊತೆಗೆ ಸಮಗ್ರ ಕಾಂತಿಗೆ ತಳಹದಿಯಾಗಿದೆ. ದಲಿತ, ವಚನ, ಬಂಡಾಯ ಮತ್ತು ಜನಪದ ಸಾಹಿತ್ಯಗಳನ್ನು ಒಂದೆಡೆ ಸೇರಿಸಿ ಸಾಹಿತ್ಯ ಎನ್ನುವ ಪರಿಕಲ್ಪನೆಯನ್ನು ಇಲ್ಲಿ ವಿಸ್ತರಿಸಲಾಗಿದೆ. ಆರಾಧನೆಗಳು ಮತ್ತು ಆಚರಣೆಗಳು ದಲಿತರ ಸಂಸ್ಕೃತಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಅದರೊಳಗಿನ ಮಾಹಿತಿಗಳ ಕುರಿತು ಚಿಂತನೆ ನಡೆಸಲಾಗಿದೆ. ಅಂಬೇಡ್ಕರ್ ಅವರ ವಿಚಾರಧಾರೆಯ ಭದ್ರ ಬುನಾದಿಯಲ್ಲಿ ಜಾತ್ಯತೀತ, ಅಂತರ್ಜಾತಿ ವಿವಾಹ, ಕಾರ್ಮಿಕರ ಮತ್ತು ದಲಿತರ ದುರಂತಗಳನ್ನು ಅನಾವರಣ ಮಾಡಲಾಗಿದೆ’ ಎಂದಿದ್ದಾರೆ.
ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...
READ MORE