ನಂದಿನಿ ಹೆದ್ದುರ್ಗ ಅವರ ‘ಇಂತೀ ನಿನ್ನವಳೇ ಆದ’ ಕೃತಿಯು ಪ್ರೇಮ, ಮೋಹ, ವಿರಹಗಳ ಲೇಖನ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ನಂದಿನಿ ಹೆದ್ದುರ್ಗ ಅವರು, ಒಲವಿನೆಡೆಗೊಂದು ಗಾಢವಿಷಾದ ಮೂಡುವ ಮೊದಲು ಕಡುಮೋಹಿಯಾಗಿ ಬಿಡಬೇಕು. ಇಲ್ಲಿರುವ ಅಷ್ಟೂ ಪ್ರೇಮಕಥೆಗಳಿಗೆ ನಾನೇ ನಾಯಕಿಯಾ ಅಂತ ಕೆಲವೊಮ್ಮೆ ಅನ್ನಿಸುವುದೂ ಇದೆ. ಇಲ್ಲಿ ಕಲ್ಲುಗಳಿಗೂ ಕಾಲು ತಾಕುವ ಭಾಗ್ಯವಿರುವುದಿಲ್ಲ, ಉಳಿ ತಾಕಿ ದೇವರಾದಾವು ಅಷ್ಟೇ! ಪ್ರೇಮವೂ ಹಾಗೆ.. ಒಲುಮೆ ತಾಕಿದ ಪ್ರತಿ ಹೃದಯವೂ ದೈವಿಕ ಎನ್ನಬಹುದು. ಎದೆ ಬೆಚ್ಚಗಿದ್ದಾಗ ಮೋಹ ಅಮರಿಕೊಂಡಾಗ ವಿರಹದಲ್ಲಿ ಹೃದಯ ಬೆವರಿದಾಗ ನೆನಪುಗಳ ಹೊಸ ಮುಗಿಲು ಆವರಿಸಿದಾಗ ಈ ಕತೆಗಳನೊಮ್ಮೆ ನೇವರಿಸಿ. ಹಗುರವೋ ಭಾರವೋ ಆಗಬಲ್ಲಿರಿ ಎಂದಿದ್ದಾರೆ.
ಈ ಕೃತಿಯು ಒಟ್ಟು 16 ಪರಿವಿಡಿಗಳನ್ನು ಹೊಂದಿದ್ದು ಇಫ್ ವಿಶಸ್ ವರ್ ಹಾರ್ಸಸ್, ಅರ್ಧಚಂದ್ರನೂ ಹಾರದ ನೀಲಿ ಹಕ್ಕಿಯೂ, ಸ್ವೀಟ್ ನಥಿಂಗ್, ಅಸ್ತು, ಆ ಎರಡೂವರೆ ಗಂಟೆಗಳು, ಚೌಕಟ್ಟು, ಹಿ ಈಸ್ ಆನ್ಲೈನ್ ಬಟ್ ನಾಟ್ ಫಾರ್ ಯೂ, ದೇವಕಣಗಿಲೆಯೊಂದು ತೊಟ್ಟು ಕಳಚಿದ ಹೊತ್ತು, ಆಮರಣಾಂತ, ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ, ಸೊಳ್ಳೆ ಕೊಂದ ಹುಡುಗಿ, ಅಗಲ ಪಾದದ ಹುಡುಗ, ಬ್ಲೂ ಟಿಕ್, ಪತ್ರ ಸಂಭವ, ಡೈರಿಯ ನಡುವಿನ ಪುಟಗಳು, ಒಂದು ಸೀತಾಫಲದ ಮರ ಮತ್ತಿವನು ಇತಾದಿ ಅಧ್ಯಾಗಳನ್ನು ಪರಿವಿಡಿಯಲ್ಲಿ ಹೊಂದಿದೆ.
ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ. ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ. ...
READ MORE