‘ಹಳ್ಳಿಹಾದಿ’ ಜಿ.ಎಸ್. ಜಯದೇವ ಅವರ ಲೇಖನಗಳ ಸಂಕಲನ. ಜಯದೇವ ಗಿರಿಜನರ ಮಧ್ಯೆ ಇದ್ದು ಹಳ್ಳಿಯಲ್ಲಿ ದೀನಬಂಧು ಸಂಸ್ಥೆ ಹಾಗೂ ಶಾಲೆಗಳನ್ನು ಸ್ಥಾಪಿಸಿ ಆ ಮೂಲಕ ನೆಲಮೂಲ ಸಂಸ್ಕೃತಿಯ ಒಳಹೊರಗನ್ನು ಅರಿತವರು. ಅವರ “ಹಳ್ಳಿಹಾದಿ”ಯನ್ನು ಓದುತ್ತ ಹೋದಂತೆ ನಮಗೆ ಗೊತ್ತಿಲ್ಲದಿರುವ ಆದರೆ ನಮ್ಮದೇ ಆದ ಭಾರತವೊಂದು ಬಾಗಿಲು ತೆರೆದು ಒಳಗೆ ಕರೆದುಕೊಳ್ಳುತ್ತದೆ. ಇಲ್ಲಿ ಚಲಿಸದ ಇತಿಹಾಸವಿದೆ, ಮಕ್ಕಳ ಕತ್ತು ಹಿಸುಕುವ ಶಿಕ್ಷಣವಿದೆ, ಒಬ್ಬರ ಅಭಿವೃದ್ಧಿ ಇನ್ನೊಬ್ಬರಿಗೆ ಕಂಟಕವಾಗುವ ಅಪಾಯಗಳಿವೆ, ಚಿನ್ನದ ಧೂಳು ಮುಸುಕಿದ ಮಬ್ಬಿದೆ. ಇಂಥ ವಾತಾವರಣವನ್ನು ಹಸನು ಮಾಡುವ ಉದ್ದೇಶದಿಂದ ಬರೆದ ಲೇಖನಗಳಿವು.
ಚಾಮರಾಜನಗರದಲ್ಲಿ ನೆಲೆಸಿರುವ ಜಿ.ಎಸ್.ಜಯದೇವ ಅವರು 'ದೀನಬಂಧು' ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. 1992 ರಲ್ಲಿ ಆರಂಭವಾದ ಸಂಸ್ಥೆಯು ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ಪಡೆದು, ಅವರಿಗೆ ವಸತಿ, ಊಟ, ಮತ್ತು ಬಟ್ಟೆಯನ್ನು ಪೂರೈಸುವ ಕಾರ್ಯ ಮಾಡುತ್ತಿದೆ. ಪ್ರಾಧ್ಯಾಪಕರಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮೈಸೂರಿನಲ್ಲಿರುವ ಮಹಿಳಾ ಪುನರ್ವಸತಿ ಕೇಂದ್ರವಾದ 'ಶಕ್ತಿಧಾಮ'ದಲ್ಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಜಯದೇವ ಅವರು ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಮಗ. ಪ್ರಜಾವಾಣಿಯಲ್ಲಿ ’ಹಳ್ಳಿ ಹಾದಿ’ ಎಂಬ ಅಂಕಣ ಬರೆಯುತ್ತಿದ್ದರು. ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ...
READ MORE