ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಾಷ್ಟ್ರೀಯತಾವಾದಿಯಾಗಿ, ಕಾನೂನು ತಜ್ಞರಾಗಿ, ರಾಜಕೀಯ ನೇತಾರರಾಗಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ.. ಹೀಗೆ ಹಲವಾರು ವಿಭಾಗಗಳಲ್ಲಿ ಚಿರಪರಿಚಿತರು.
ಸಮಾಜದ ಕೆಳವರ್ಗಗಳ ಸಾಮಾಜಿಕ ಸ್ವಾತಂತ್ಯ್ರಕ್ಕಾಗಿ, ರಾಜಕೀಯ ಹಕ್ಕುಗಳಿಗಾಗಿ ದುಡಿದವರು. ಬರೆಹಗಳ-ಭಾಷಣಗಳ ಮೂಲಕ, ವೈಚಾರಿಕ ಚರ್ಚೆ-ಸಂವಾದಗಳ ಮೂಲಕ ಸಾಮಾಜಿಕ-ರಾಜಕೀಯ ಜಾಗೃತಿಯನ್ನು ಮೂಡಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜಂಟಿಯಾಗಿ ಅಂಬೇಡ್ಕರ್ ಅವರ ಬರೆಹಗಳು ಹಾಗೂ ಭಾಷಣಗಳನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.
ಈ ಸಂಪುಟದಲ್ಲಿ ಭಾರತದಲ್ಲಿ ಜಾತಿಗಳು, ಜಾತಿಯ ನಿರ್ಮೂಲನೆ, ಭಾಷಾವಾರು ಪ್ರಾಂತ್ಯವಾಗಿ ಮಹಾರಾಷ್ಟ್ರ, ನಿರ್ಬಂಧ ಮತ್ತು ಸಮದಂಡಿಗಳ ಅವಶ್ಯಕತೆ, ಭಾಷಾವಾರು ರಾಜ್ಯಗಳನ್ನು ಕುರಿತ ವಿಚಾರಗಳು, ನಾಯಕ ಮತ್ತು ನಾಯಕಾರಾಧನೆ ವಿಭಾಗದಲ್ಲಿ ರಾನಡೆ, ಗಾಂಧಿ ಮತ್ತು ಜಿನ್ನಾ, ಸಂವಿಧಾನಾತ್ಮಕ ಸುಧಾರಣೆಗಳು; ಸೌತ್ಬರೋ ಸಮಿತಿಗೆ ನೀಡಿದ ಸಾಕ್ಷ್ಯ, ಒಕ್ಕೂಟ ವ್ಯವಸ್ಥೆ ಮತ್ತು ಸ್ವಾತಂತ್ಯ್ರ, ಕೋಮು ಪ್ರಾತಿನಿಧ್ಯದ ಬಿಕ್ಕಟ್ಟು: ಒಂದು ಪರಿಹಾರ ಮಾರ್ಗ, ರಾಜ್ಯಗಳು ಮತ್ತು ಅಲ್ಪಸಂಖ್ಯಾತರು. ಆರ್ಥಿಕ ಸಮಸ್ಯೆಗಳು: ಭಾರತದಲ್ಲಿ ಸಣ್ಣ ಹಿಡುವಳಿಗಳು ಮತ್ತು ಅವುಗಳ ಪರಿಹಾರಗಳು, ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.