'ಹಾದಿ ಜಂಗಮ’ ಕೃತಿ ಮೂಲಕ ಗಮನ ಸೆಳೆದವರು ಬಸವರಾಜ ಹೂಗಾರ. ಅವರ ಎರಡನೇ ಪುಸ್ತಕ ’ಬೀದಿ ಬೆಳಕಿನ ಕಂದೀಲು’ ಕೂಡ ಲಡಾಯಿ ಪ್ರಕಾಶನದಿಂದಲೇ ಹೊರಬಂದಿದೆ. ಮೊದಲನೆಯದು ಕವನ ಸಂಕಲನವಾದರೆ ಎರಡನೆಯದು ಲೇಖನಗಳ ಸಂಗ್ರಹ.
ಕಂದೀಲು ಸದಾ ಒಂದು ರೂಪಕ. ಮನುಷ್ಯನ ಅಂತರಂಗಕ್ಕೂ ಆಗಾಗ ಬೆಳಕು ಅಗತ್ಯವಿರುತ್ತದೆ. ಅಂತಹ ಬೆಳಕನ್ನು ನೀಡಬಲ್ಲ ಶಕ್ತಿ ಇರುವುದು ಸಾಹಿತ್ಯದಂತಹ ಸಾಧನಗಳಿಗೆ ಮಾತ್ರ. ಧರ್ಮ, ಸಮಾಜ, ರಾಜಕಾರಣ ಸಾಗುತ್ತಿರುವ ಹಾದಿಯನ್ನು ಅವರು ಮನೋಜ್ಞವಾಗಿ ಕೃತಿಯಲ್ಲಿ ವಿವರಿಸಿದ್ದಾರೆ. ಕೃತಿ ಒಟ್ಟು ಹದಿನೆಂಟು ಲೇಖನಗಳನ್ನು ಹೊಂದಿದೆ. ಕನ್ನಡ ಸಂಸ್ಕೃತಿ, ಹಿಂಸೆ- ಅಹಿಂಸೆ, ಹಳ್ಳಿನಗರಗಳ ಮನಸ್ಥಿತಿಯ ವಿಶ್ಲೇಷಣೆ, ಪೂಜಿಕ ಸಂಸ್ಕೃತಿ, ನಮ್ಮ ಶಿಕ್ಷಣದ ವರ್ತಮಾನದ ಸವಾಲುಗಳು, ಹೆಣ್ಣು ಮತ್ತು ಹೋರಾಟ, ಸುವರ್ಣ ಕರ್ನಾಟಕದ ಹೆಬ್ಬಾಗಿಲಲ್ಲಿ ನಿಂತ ಕನ್ನಡಿಗನ ಸವಾಲು, ಎಚ್. ಎಲ್. ಕೆ. ಚಿಂತನೆ, ಕರ್ನಾಟಕದ ಮುನ್ನಡೆ ಕುರಿತು ಅವರ ವಿಚಾರ ಲಹರಿ ಹರಿದಿದೆ. ತಥಾಕಥಿತ ಎನ್ನವಂತಹ ಎಲ್ಲ ಸಂಗತಿಗಳಿಗೂ ಮುಖಾಮುಖಿಯಾಗಿ ಸವಾಲೆಸೆಯುವ ಲೇಖನಗಳು ಇಲ್ಲಿವೆ.