`ಬಡವರ ನಗುವಿನ ಶಕ್ತಿ’ ಕೃತಿಯು ದಂಡಪ್ಪ ಅವರ ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯ ಕುರಿತ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : 1975ರಿಂದ ಈಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ದಲಿಂಗಯ್ಯನವರ ಕವಿತೆಗಳ ಎರಕದಲ್ಲಿ ರೂಪುಗೊಂಡರು. ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದ ತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳು. ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು. ಸಿದ್ದಲಿಂಗಯ್ಯನವರ ಸಂವೇದನೆ ಈಚೆಗೆ ಬೇರೆ ದಿಕ್ಕುಗಳತ್ತ ಹೊರಳತೊಡಗಿದೆ. ಮೊದಲಿಗೆ, ತಮ್ಮ ಸಾಹಿತ್ಯ ಸಂಕಲ್ಪದ ಮೂಲಕ ಕವಿ ಕಟ್ಟಿದ್ದು ಆಕ್ರೋಶ ಮತ್ತು ಆಕಾಂಕ್ಷೆಗಳಲ್ಲಿ ಹೊಯ್ದಾಡುವ ರಾಜಕೀಯ ಜನಾಂಗವನ್ನು ಈಗ ಮತ್ತೆ ತಮ್ಮ ಪ್ರತಿಭಾ ಮೂಸೆಯಲ್ಲಿ ಕವಿ ಕಾಣುತ್ತಿರುವ ಹೊಸ ಬಗೆಯ ಸಾಂಸ್ಕೃತಿಕ ರಾಜಕಾರಣದ್ದು, ಆಕ್ರೋಶ ಆಕಾಂಕ್ಷೆಗಳ ಲಯಗಳಿಂದ ಹೆಚ್ಚು ಬಹುಮುಖಿಯಾದ ದಲಿತ ಸಮಷ್ಟಿಯ ಸೃಷ್ಟಿ ಕವಿಯ ಕಮ್ಮಟದಲ್ಲಿ ನಡೆಯತೊಡಗಿದೆ ’ ಎಂದು ಕೃತಿಯನ್ನು ಪರಿಚಯಿಸುತ್ತಿದೆ.