‘ಅರಿವಿನ ಬೆಳಕು’ ಕೃತಿಯು ಸಂತೋಷ್ ರಾವ್ ಪೆರ್ಮುಡ ಅವರ ಕೌತುಕ ಮೂಡಿಸುವ ನೈಜ್ಯ ಸಂಗತಿಗಳನ್ನು ಒಳಗೊಂಡ ಕೃತಿ. ಸಾಹಿತಿ ಪ.ನಾ. ಹಳ್ಳಿ ಹರೀಶ್ ಕುಮಾರ್ ಅವರು ಕೃತಿಗೆ ಮುನ್ನಡಿ ಬರೆದು ‘ಸುಮಾರು 34 ವಿವಿಧ ವೈವಿಧ್ಯಮಯ ಲೇಖನಗಳಿದ್ದು, ಈ ಎಲ್ಲ ಲೇಖನಗಳು ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆಗಳಿಂದ ಹಿಡಿದು ರಾಷ್ಟ್ರೀಯ ವಾರಪತ್ರಿಕೆ ವಿಕ್ರಮದಲ್ಲಿ ಕೂಡ ಪ್ರಕಟವಾಗಿರುತ್ತದೆ. ರಾಜ್ಯದ ವಿವಿಧ ಜಾನಪದ ಕ್ರೀಡೆಗಳು, ಸಂಪ್ರದಾಯಗಳು, ವಿಶ್ವದ ವಿಶಿಷ್ಟ ಸಾಧಕರು, ವಿಚಿತ್ರ ಸಂಪ್ರದಾಯಗಳು, ಕೌತುಕದ ವಿಚಾರಗಳು ಮತ್ತು ವಿಸ್ಮಯಕಾರಿ ಘಟನೆಗಳ ಮೇಲೆ ಬೆಳಕನ್ನು ಚೆಲ್ಲಿದೆ. ಕೃತಿಯ ಪ್ರಾರಂಭದಲ್ಲೇ ಸಂತೋಷ್ರಾವ್ ಅವರು ಕರಾವಳಿಯ ಪ್ರಖ್ಯಾತ ಜಾನಪದ ಕ್ರೀಡೆ, ರಾಜ್ಯದ ಮತ್ತು ಇತ್ತೀಚಿನ ಕೆಲವರ್ಷಗಳ ಹಿಂದೆ ದೇಶದ ಗಮನ ಸೆಳೆದಿದ್ದ ಕಂಬಳ ಕ್ರೀಡೆಯ ಕುರಿತು, ಅದರ ಹಿನ್ನೆಲೆ ಹಾಗೂ ಅದರ ವೈಶಿಷ್ಟ್ಯ, ಕಂಬಳದ ಅನೇಕ ಪ್ರಕಾರಗಳ ಕುರಿತು ಸವಿವರವಾಗಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ, ಕಂಬಳ ಕ್ರೀಡೆಯು ಪ್ರಾಣಿಹಿಂಸೆಯೆಂದು ಕೆಲವರಿಗೆ ಅನಿಸಿದರೂ, ಅದು ಪ್ರಾಣಿ ಹಿಂಸೆಗಿಂತಲೂ ಪ್ರಾಣಿ ಪ್ರೇಮದ ಮತ್ತು ಆರಾಧನೆಯ ಧ್ಯೋತಕ ಎನ್ನುವುದನ್ನು ತಮ್ಮ ಲೇಖನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಲೇಖಕರು ತುಳುನಾಡಿನ ವಿಶಿಷ್ಟ ಕಲೆ ಹಾಗೂ ಆಚರಣೆಯಾಗಿರುವ 'ಆಟಿ ಕಳೆಂಜ' ಎನ್ನುವ ವಿಶೇಷ ಸಂಪ್ರದಾಯವುಳ್ಳ ಮತ್ತು ಸಂಪ್ರದಾಯದ ಹಿನ್ನೆಲೆಯುಳ್ಳ ಕ್ರೀಡೆ ಮತ್ತು ಜಾನಪದಕಲೆಯ ಕುರಿತಾಗಿಯೂ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. 'ತೆಂಗಿನಕಾಯಿಯಲ್ಲಿ ಕಲೆಯನ್ನು ಅರಳಿಸುವ ಜಗದೀಶ ಭಾವಿಕಟ್ಟಿ' ಇವರ ಬಗ್ಗೆಯೂ ಬೆಳಕನ್ನು ಚೆಲ್ಲಿದ್ದಾರೆ. ಪರಿಸರ ಕಾಳಜಿಯ ಲೇಖನಗಳನ್ನೂ ಕೃತಿಯಲ್ಲಿ ಅಳವಡಿಸಿದ್ದು, ಅದರಲ್ಲಿ 'ಪರಿಸರಸ್ನೇಹಿ ಗಣೇಶೋತ್ಸವ', ದೀಪಾವಳಿಗೆ ಮೆರಗನ್ನು ನೀಡುವ 'ಐಸ್ಕ್ರೀಂಕಡ್ಡಿಯ ಗೂಡುದೀಪ'ದ ಬಗ್ಗೆ, ವಿಭಿನ್ನ ಸನ್ನಿವೇಶದಲ್ಲಿ 'ಆನ್ಲೈನ್ಶಿಕ್ಷಣ'ವನ್ನು ದುರುಪಯೋಗ ಮಾಡಿಕೊಳ್ಳದೇ ಅಳವಡಿಸಿಕೊಳ್ಳಬಹುದು, ಎಸ್.ಎಸ್.ಎಲ್.ಸಿ ನಂತರ ಮುಂದೇನು ಮಾಡಬೇಕು ಎನ್ನುವ ಗೊಂದಲವಿರುವ ಮಕ್ಕಳಿಗೂ ಮಾರ್ಗದರ್ಶನ ನೀಡಿದ್ದಾರೆ. ಲೇಖಕರು ಓದುಗರಿಗೆ ಬಹಳಷ್ಟು ವಿಚಾರಗಳ ರಸದೌತಣವನ್ನು ಒದಗಿಸಬಲ್ಲ ಲೇಖನಗಳನ್ನು ತಮ್ಮ ಕೃತಿಯಲ್ಲಿ ಅಳವಡಿಸಿದ್ದು, ಅದರಲ್ಲಿ 'ರಸ್ತೆ ಸುರಕ್ಷತೆಯಲ್ಲಿ ನಮ್ಮ ಪಾಲು', ವಾಹನಗಳ 'ನೋಂದಾವಣೆ ಫಲಕಗಳಲ್ಲಿ ಇರುವ ವಿಭಿನ್ನತೆ, ಹೆಲೈಟ್ ಧರಿಸುವುದರಿಂದ ಆಗುವ ಉಪಯೋಗವನ್ನು ವಿವರಿಸುವ ಶಿರ ರಕ್ಷಕ ಹೆಲೈಟ್', 'ಹೆಲೈಟ್ಗೆ ವೈಪರ್'ಗಳ ಅವಶ್ಯಕತೆಯ ಕುರಿತು, 'ಹವಾನಿಯಂತ್ರಣ ವ್ಯವಸ್ಥೆ ಇರುವ ಹೆಲೈಟ್' ಬಗ್ಗೆಯೂ ಸವಿಸ್ತಾರವಾಗಿ ತಮ್ಮ ಲೇಖನಗಳಲ್ಲಿ ವಿವರಣೆಯನ್ನು ನೀಡಿದ್ದಾರೆ. ಪ್ರವಾಸವು ಪ್ರಯಾಸವಾಗದೇ ಇರಬೇಕಾದರೆ ಮಾಡಿಕೊಳ್ಳಬೇಕಾದ ಪೂರ್ವ ತಯಾರಿಯ ಬಗ್ಗೆ ಕಾಳಜಿ ಇರುವ ಲೇಖನಗಳು ಈ ಕೃತಿಯಲ್ಲಿ ಇವೆ. ಒಟ್ಟಾರೆಯಾಗಿ, ಲೇಖಕರು ಕೇವಲ ಒಂದು ನಿರ್ದಿಷ್ಟ ವಿಚಾರಕ್ಕಷ್ಟೇ ಒತ್ತನ್ನು ನೀಡದೇ, ಎಲ್ಲ ರೀತಿಯ ವಿಭಿನ್ನ ಕುತೂಹಲಕಾರಿ ವಿಚಾರಗಳು ಮತ್ತು ಹೊಂದಬೇಕಾದ ಕಾಳಜಿಯ ಕುರಿತು ಒತ್ತನ್ನು ನೀಡಿ ಓದುಗರ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಿರುವುದು ಸಂತೋಷ್ರಾವ್ ಪೆರ್ಮುಡ ಇವರ ಹೆಗ್ಗಳಿಕೆ ಎಂದೇ ಹೇಳಬಹುದು’ ಎಂದು ಪ್ರಶಂಸಿಸಿದ್ದಾರೆ.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...
READ MORE