ಗೋಳಿಮರ (ಕಥೆಗಳು)

Author : ಗೋಪಾಲ ಕೃಷ್ಣ ನಾಯಕ

Pages 128

₹ 175.00




Year of Publication: 2024
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ), ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

ಕತೆಗಾರ ಗೋಪಾಲಕೃಷ್ಣ ನಾಯಕ ಅವರ ಮೂರನೇ ಕಥಾಸಂಕಲನವಾಗಿರುವ ‘ಗೋಳಿಮರ’ ಈ ಕೃತಿಯಲ್ಲಿ ಒಟ್ಟು ಹದಿನಾಲ್ಕು ಕತೆಗಳು ರೂಪುಗೊಂಡಿವೆ. ವಿಷಯ, ನಿರೂಪಣೆ ಮತ್ತು ಶೈಲಿಯ ದೃಷ್ಟಿಯಿಂದ ಕತೆಗಳು ವಿಭಿನ್ನವಾಗಿದ್ದರೂ ಇಲ್ಲಿನ ಎಲ್ಲ ಕತೆಗಳಲ್ಲಿ ಅಂತಃಕರಣ ಸ್ಥಾಯಿಯಾಗಿ ಇರುವುದು ಕಂಡುಬರುತ್ತದೆ. ಕರಾವಳಿ ಸೀಮೆಯ ಪ್ರಕೃತಿ ಪರಿಸರದಲ್ಲಿರುವ ಚಿಕ್ಕ ಚಿಕ್ಕ ಗ್ರಾಮಗಳೆಂಬ ಕೊಪ್ಪಗಳಲ್ಲಿ ನೆಲೆಸಿರುವ ವಿವಿಧ ಜಾತಿ ಜನವರ್ಗಗಳ ದೈನಂದಿನ ಜೀವನದ ತವಕ-ತಲ್ಲಣಗಳು ಮತ್ತು ಅವರ ಬದುಕಿನ ಧಾವಂತಗಳು ಚಿತ್ರಿಸಲ್ಪಟ್ಟಿವೆ. `ಗೋಳಿಮರ’, `ಲಚ್ಚಿ’, `ಬೇರು’ ಮುಂತಾದ ಕತೆಗಳಲ್ಲಿನ ಸ್ತ್ರೀ ಪಾತ್ರಗಳು ಸಜೀವವಾಗಿ ಓದುಗರೊಂದಿಗೆ ಅನುಸಂಧಾನ ನಡೆಸುತ್ತವೆ. `ಬಂತು ಬಂತು ವಿಮಾನ ಕತೆ’ ಆಧುನಿಕತೆಯ ಮರೀಚಿಕೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಿರ್ವಸಿತರಾಗುವ ಜನರ ದಾರುಣ ಬದುಕನ್ನು ಚಿತ್ರಿಸಿದೆ. ‘ಅಂತಃಕರಣ’ ಕತೆ ಪ್ರಕೃತಿ ವಿಕೋಪ ಹೇಗೆ ಒಡೆದ ಕುಟುಂಬವನ್ನು ಒಗ್ಗೂಡಿಸಬಲ್ಲದು ಎಂಬುದನ್ನು ವಿವರಿಸುತ್ತದೆ. ‘ಟ್ರಂಕು’, ‘ಸಾವು’, ‘ಓಡೋಡಿ ಬಂದ’ ಮುಂತಾದ ಕತೆಗಳು ಕುತೂಹಲವನ್ನು ಕೆರಳಿಸುವಂತಿದೆ. ‘ಎದೆಯ ಮೇಲೆ ದಾರಿ’ ಕತೆಯಲ್ಲಿ ಉಪ್ಪಿನ ಆಗರದಲ್ಲಿ ದುಡಿಯುವ ಬೀರನ ಬದುಕಿನ ದಾರುಣ ಚಿತ್ರಣವನ್ನೂ ಒಡೆಯರ ಶೋಷಣೆಯನ್ನೂ ಅನಾವರಣಗೊಳಿಸಿದೆ. ‘ಪತನ’ ಕತೆ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ರಚನೆಯಾಗಿದ್ದು, ವೃದ್ಧ ದಂಪತಿಗಳನ್ನು ಕೊಲೆಗೈದ ಹಂತಕನ ಮನಸ್ಸಿನೊಳಗೆ ಪ್ರತೀಕಾರದ ಹೊಗೆ ಹೆಪ್ಪುಗಟ್ಟಿ ದುರಂತವನ್ನು ಸೃಷ್ಟಿಸಬಲ್ಲದು ಎಂಬುದನ್ನು ಚಿತ್ರಿಸಲಾಗಿದೆ. ಗ್ರಾಮೀಣ ಪರಿಸರದಲ್ಲಿಯೂ ಇಂತಹ ಸೇಡಿನ ಹತ್ಯೆಗಳು ನಡೆಯುವುದನ್ನು ಮತ್ತು ಗ್ರಾಮಸ್ಥರು ಮಾಡುವ ಊಹೆಗಳು ತನಿಖೆಗೆ ಹೇಗೆ ಪೂರಕವಾಗಿ ಇರುತ್ತವೆ ಎಂಬುದನ್ನು ಕತೆಗಾರರು ದಾಖಲಿಸಿದ್ದಾರೆ. ಓದುಗರನ್ನು ಕುತೂಹಲದಿಂದ ಕರೆದುಕೊಳ್ಳುವ ಈ ಕಥನಲೋಕ ಅತ್ಯಂತ ಸುಂದರವಾಗಿ ರೂಪುಗೊಂಡಿದೆ. ಕತೆಗಳನ್ನು ಓದಿ ಮುಗಿಸಿದಾಗ ಒಂದು ರೀತಿಯ ಸಾಮಾಜಿಕ ದರ್ಶನ ಉಂಟಾಗುತ್ತದೆ. ಸುತ್ತಮುತ್ತಲಿನ ಸಮಾಜವನ್ನು ತೆರೆದ ಕಣ್ಣಿನಿಂದ ನೋಡಿದಾಗ ಇಂತಹ ಕತೆಗಳು ಪ್ರತಿಯೊಂದು ಊರು ಕೇರಿಗಳಲ್ಲಿ ಇರಬಹುದು ಎಂಬ ಅರಿವು ಓದುಗರಲ್ಲಿ ಉಂಟಾಗುತ್ತದೆ. - ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ

Related Books