ಲೇಖಕ ಲೋಕೇಶ ಅಗಸನಕಟ್ಟೆ ಅವರ ಕಥಾ ಸಂಕಲನ-ಮೀಸೆ ಹೆಂಗಸು ಮತ್ತು ಇತರೆ ಕಥೆಗಳು. ಕಥಾ ವಸ್ತುವಿನ ವೈಶಿಷ್ಟ್ಯತೆ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದು ಈ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಲೋಕೇಶ ಹೋಲಿಸಿದರೆ ಇವು ಕೆಲವು ಕಾರಣಗಳಿಗೆ ವೈವಿಧ್ಯತೆಗಳನ್ನು ಪಡೆದುಕೊಂಡಿವೆ. ಮತ್ತೂ ಕೆಲವು ತೀರ ಸಡಿಲವಾದ ವಸ್ತುವನ್ನು ಒಳಗೊಂಡಿವೆ ಎಂದು ಮೊದಲಲ್ಲೇ ಹೇಳಬಹುದಾದ ಮಾತು, ತೊಂಭತ್ತರ ದಶಕದ ನಂತರದಲ್ಲಿ ಬರೆದ ಕತೆಗಾರರನ್ನು ಮತ್ತು ಅವರ ಕಥನಗಾರಿಕೆ, ವಸ್ತು ವೈವಿಧ್ಯವನ್ನು ನಮ್ಮ ವಿಮರ್ಶೆ ಇನ್ನೂ ಗಂಭೀರವಾಗಿ ಚರ್ಚೆ ನಡೆ ಸಜೆಕಾಗಿದೆ . -ಅಗಸನಕಟ್ಟೆಯವರ ಸಮಕಾಲೀನರು ಎನ್ನಬಹುದಾದ ಕೇಶವಮಳಗಿ, ಅವರೇಶ, ಚನ್ನಪ್ಪ ಕಟ್ಟಿ, ಯೋಗಪ್ಪನವರ್ ಮುಂತಾದವರು ತಮ್ಮ ಹೊಸ ಬಗೆಯ ವಸ್ತುಗಾರಿಕೆಯಿಂದ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಇದರಲ್ಲಿ ಅಮರೇಶ ಅವರ ಕತೆಗಳು ಬಹುಮಟ್ಟಿಗೆ ಇಳಿಮುಖಗೊಂಡಂತೆ ಕಂಡರೆ, ಲೋಕೇಶ ಅವರನ್ನು ಒಳಗೊಂಡಂತೆ ಇತರರು ಪ್ರಯೋಗಶೀಲತೆಯ ಹಾದಿಯಲ್ಲಿ ಉಳಿದಿದ್ದಾರೆ.
ಲೋಕೇಶ ಅವರ ಇಲ್ಲಿನ ಕತೆಗಳನ್ನೇ ನಿದರ್ಶನಕ್ಕೆ ಎತ್ತಿಕೊಂಡರೆ, ಅವರ ಕತೆಗಳ ವಸ್ತು ಇದುವರೆಗೆ ತಾವು ಗ್ರಹಿಸಿದ ಗ್ರಾಮಲೋಕದ ಕಥನವನ್ನು ಹಿಗ್ಗಿಸಿದ್ದಾರೆ. ಕೊಂಚ ತಾತ್ವಿಕವಾಗಿ ಹೇಳುವುದಾದರೆ ತೊಂಭತ್ತರ ದಶಕದ ಕತೆಗಳನ್ನು ಮತ್ತು ಹೊಸಬರ ಕತೆಗಳನ್ನು ವಿವೇಚಿಸುವಾಗ ಪಾಶ್ಚಾತ್ಯ ಥಿಯರಿಗಳು ತೀರಾ ಸಹಾಯಕ್ಕೆ ಬರಲಾರವು. ನಮಗೇನಿದ್ದರೂ ಈ ನೆಲಕ್ಕೆ ಅಂಟಿಕೊಂಡ ಮತ್ತು ಈ ನೆಲದ ಕುರಿತು ಆಳವಾಗಿ ಚಿಂತಿಸಿದ ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾರ ತತ್ವಗಳು ನೆರವಿಗೆ ಬರಬಹುದು. ಲೋಕೇಶರ ಕತೆಗಳ ಅಂತರಂಗದಲ್ಲಿ ನೇರವಾಗಿ ಅಲ್ಲದಿದ್ದರೂ ಅನೇಕ ಕಡೆ ಗ್ರಾಮೀಣ ಬದುಕಿಗೆ ಅಂಟಿಕೊಂಡಂತೆ ಮೇಲಿನವರ ತತ್ವಗಳು ಪ್ರವೇಶ ಪಡೆದುಕೊಂಡಿವೆ. 'ಮಾತುಸೋತ ಭಾರತ', 'ಮೀನುಪೇಟೆ', 'ಧರೆ ಹತ್ತಿ ಉರಿದೊಡೆ', 'ಮುಟ್ಟಿಕೊಂಡವರು' ಈ ಕತೆಗಳು ಕೇವಲ ಹಳೆಕಾಲದ ಗ್ರಾಮೀಣ ನೆನಪುಗಾರಿಕೆ-ಹಳಹಳಿಕೆಗಳಂತೆ ಕಂಡು ಪೇಲವ ಎನಿಸಬಹುದು. ಆದರೆ, ಸಮಕಾಲೀನ ರಾಜಕೀಯ, ಜಾತಿಗಳ ಧೃವೀಕರಣ, ಮಠಗಳ ಒಳರಾಜಕೀಯ, ಜಾತಿಗಳ ಸೌಹಾರ್ದವನ್ನು ವಿಘಟಿಸುವ ಕ್ರಮಗಳಿಂದ ಅವಲೋಕಿಸಿದರೆ ಒಳನೋಟಗಳು ಸಿಗುತ್ತವೆ.
'ಮಾತುಸೋತ ಭಾರತ' ವಸ್ತುವಿನಿಂದ ಗೆದ್ದರೆ, ಕಥನಗಾರಿಕೆಯಿಂದ ಪೇಲವ ಎನಿಸುವ ಕತೆ, ಕೇವಲ ಅನುಭವನಿಷ್ಠೆಗೆ ಒಳಗಾಗಿ ಅಲ್ಲಲ್ಲಿ ವರದಿಯ ಹಂತಕ್ಕೆ ತಲುಪಿಬಿಡುತ್ತದೆ. ಆದರೆ ಆಂತರದಲ್ಲಿ ಈ ನೆಲದ ಜಾತಿಗಳ ಸೌಹಾರ್ದದ ಭಾವನಾತ್ಮಕತೆಯನ್ನು ಸೂಕ್ಷ್ಮವಾಗಿ ಸ್ಪರ್ಶಿಸುವ ಮೂಲಕ ಗಮನ ಸೆಳೆಯುತ್ತದೆ. ಇನ್ನು ಮೇಲೆ ಪ್ರಸ್ತಾಪಿಸಿದ ಇತರ ಕತೆಗಳೂ ಹೀಗೇ ಒಂದು ಹಂತದಾಚೆ ತಮ್ಮ ಮೀತಿಗಳನ್ನು ಮೀರಿ, ವಸ್ತುವನ್ನು ವರ್ತಮಾನಕ್ಕೆ ಎಳೆಯುವ ರೀತಿಯಿಂದಾಗಿ ತಾಜಾ ಅನಿಸುತ್ತವೆ. ಗ್ರಾಮೀಣಲೋಕದ ಹೊಸಬಗೆಯ ಜಾತಿವ್ಯವಸ್ಥೆ ಮತ್ತು ಹೊಸ ಬಗೆಯ ಬಂಡವಾಳಶಾಹಿ ಕ್ರಮಗಳು ತಲೆ ಎತ್ತುತ್ತಿರುವ ಬಗೆಗಳು 'ಮಿನುಪೇಟೆ' ಮುಂತಾದ ಕತೆಗಳು ಅನಾವರಣ ಮಾಡುತ್ತವೆ. ಹುಸಿ ಅಧ್ಯಾತ್ಮದೊಂದಿಗೆ ಕಾಣಿಸುವ ಪೂಜ್ಯಪಾದರು ಸಮಕಾಲೀನ ಆಧ್ಯಾತ್ಮ ಮತ್ತು ರಾಜಕೀಯಗಳ ಸಮೀಕರಣದಿಂದಾಗಿ ವಿನಾಶಗೊಳ್ಳುತ್ತಿರುವ ಜನಸಾಮಾನ್ಯ ಲೋಕವನ್ನು ನೆನಪು ಮಾಡುತ್ತಾರೆ... ವಾಸ್ತವ ಲೋಕವನ್ನು ಕಲಾತ್ಮಕಗೊಳಿಸುವ ಕಥನಗಾರಿಕೆಯಲ್ಲಿ ಈ ಕತೆ ಸಂಪೂರ್ಣವಾಗಿದೆ.
ಭೂಮಿಯ ಪ್ರಶ್ನೆಗಳು ಅದರ ತಕರಾರಿನ ಪ್ರಶ್ನೆಗಳು, ದಲಿತತನದ ಪ್ರಶ್ನೆಗಳು ಎಷ್ಟೇ ಸಹ್ಯ ಬದುಕಿನ ಆವರಣಕ್ಕೆ ಬಂದರೂ, ಅಷ್ಟೇ ಸಂಘರ್ಷಮಯವಾಗುವ ಸೂಚನೆಗಳನ್ನು ಈ ಕತೆಗಳು (ಧರೆ ಹತ್ತಿ ಉರಿದೊಡೆ) ಅಭಿವ್ಯಕ್ತಿಸುತ್ತವೆ. ಲೋಕೇಶ ಅವರು ಭೂಮಿಯ ಪ್ರಶ್ನೆ ಬಂದಾಗ ಒಂದು ಕತೆಯಲ್ಲಿ ವಸುಧೇಂದ್ರರ ಕತೆಯ ಪ್ರಸ್ತಾಪ ತರುವುದು ತೀರ ಕೃತಕ ಎನಿಸುತ್ತದೆ. ಏಕೆಂದರೆ ಆ ಕತೆಗೆ ತಾನಾಗಿಯೇ ಗಂಭೀರತೆ ಒದಗಿದೆ. ಇದು ಈ ಸಂಕಲನದ ಕತೆಗಳ ಒಂದು ಭಾಗವಾದರೆ, ಮತ್ತೊಂದು ನೆಲದ ಸೊಗಸುಗಾರಿಕೆ, ಆಧ್ಯಾತ್ಮದ ಸೆಳತಗಳು, ಮನುಷ್ಯ ಸಂಬಂಧಗಳ ಮಾನಸಿಕ ತುಯ್ದಾಟಗಳು, ಹೆಣ್ಣುನೋಟಗಳು, ವಲಸೆ ಬದುಕು, ಸಿದ್ಧಾಂತಗಳನ್ನು ಮೀರಿದ ಜೀವನ ಕ್ರಮಗಳು ಮುನ್ನೆಲೆಗೆ ಬಂದಿವೆ. ಹಣ್ಣು ಸಂಬಂಧಿ ಕತೆಗಳನ್ನು ಕೆಲವು ಬಾರಿ ವಿನಾಕಾರಣ `ಸ್ತ್ರೀವಾದ'ದ ಬೆನ್ನಲ್ಲಿ ಕಟ್ಟಿಹಾಕುವುದು ಸರಿಯಲ್ಲ. ಇಲ್ಲಿನ ಕೆಲವು ಮಹಿಳೆಯರು ತಮ್ಮ ಪರಿಸರಕ್ಕೆ ತಕ್ಕಂತೆ ಕುಟುಂಬ ವ್ಯವಸ್ಥೆಗೆ ಒಗ್ಗಿಸಿಕೊಂಡಿದ್ದಾರೆ. 'ಮೀಸೆ ಹೆಂಗಸು' ಕತೆಯ ಪಾರವ್ವ ಅಪ್ಪಟ ದೇಸಿ ಅಥವ ಗ್ರಾಮೀಣ ಮನಸ್ಸು ತಾನಾಗಿಯೇ ಈಕೆಗೆ ಮಾನಸಿಕ ಸ್ಥಿಮಿತತೆ ಬಂದುಬಿಟ್ಟಿದೆ. ಬದುಕಿನ ಜಂಜಾಟಗಳು ಹಲವು ಬಾರಿ ಇವರಿಗೆ ಸರಾಗ, ಆದರೆ, ನಿಜವು ತೋರದಲ್ಲಿ' ಕತೆಯ ಭಾನುಮತಿ ಧೈರ್ಯವಿದ್ದರೂ ಗಂಡಿನ ಸಂಶಯಗಳ ಪರಿಸರದಿಂದ ಧೈರ್ಯಗೆಡುತ್ತಾಳೆ.. ಇಲ್ಲಿನ ಗಂಡಿಗೋ ತನ್ನದೇ ಒತ್ತಡಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಬರುವುದಿಲ್ಲ. 'ಮಹಾಪ್ರಸ್ಥಾನ' ಕತೆಗೆ ಹೋಲಿಸಿದರೆ “ನಿಜವು ತೋರದಲ್ಲ' ಕತೆ ತನ್ನ ವಸ್ತುವಿನಿಂದ ತಾಜ ಅನಿಸಿದರೂ ಅಂತಿಮ ಹಂತಕ್ಕೆ ಮಾಮೂಲಿ ಕತೆಯಾಗಿ ಪ್ರಬಂಧದ ಧಾಟಿಗೆ ತಿರುಗಿದೆ..ಆದರೆ, ಮತ ಧರ್ಮಗಳಾಚೆ ಹಸಿವು, ಬದುಕು ಮುಖ್ಯವಾಗುವ ಪ್ರಕ್ರಿಯೆಯನ್ನು ತೋರಿಸಿದೆ.
'ತುಮುರೇ ಕಾರಣ್' ಕತೆ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. ಬರಿ ಪ್ರಶ್ನೆಗಳ ಮುಖೇನ ಸಾಗುವ ಈ ಕಥನ ಮನುಷ್ಯರ ಹಲವು ರೀತಿಯ ಮಾನಸಿಕ ಪಲ್ಲಟಗಳನ್ನು ಅನಾವರಣಗೊಳಿಸುತ್ತದೆ. ಹೆಣ್ಣೂಬ್ಬಳ ತಾತ್ವಿಕ ಪ್ರಶ್ನೆಗಳು ಇಲ್ಲಿನ ಬದುಕನ್ನು ಮಾಗಿಸಿವೆ. ಕಥನಗಾರಿಕೆಯಿಂದ 'ಮೀನುಪೇಟೆ' ಕತೆಯಂತೆ ಖಚಿತತೆಯನ್ನು ಪಡೆದುಕೊಂಡಿರುವ 'ಉತ್ತರಾಯಣ'ವು ನಿಸರ್ಗದ ರೂಪಕಗಳ ಮೂಲಕ ಬದುಕಿನ ವೈವಿಧ್ಯಮಯ ಸ್ತರಗಳನ್ನು ತಾಗುತ್ತದೆ. ಇಲ್ಲೆಲ್ಲಾ ಕಾಲಮಾನದ ಒತ್ತಡಗಳಿಂದ ಬದಲಾಗುತ್ತಿರುವ ಜೀವನಕ್ರಮದ ರಿವಾಜುಗಳು ರೂಪು ಪಡೆದಿವೆ.
ಈ ಸಂಕಲನದ ಹಲವು ಕತೆಗಳಲ್ಲಿ ದೇಸಿ ಜ್ಞಾನಪರಂಪರೆಗಳ ಪರಿಚಯ ಮತ್ತು ಅದೈತ ಪರಂಪರೆಗಳು ಜಾಗ ಗಿಟ್ಟಿಸಿಕೊಂಡಿವೆ. ಮತ್ತು ಮೀನುಪೇಟೆ'ಯಂಥ ಕತೆಗಳ ವಸ್ತುವಿಗೆ ತಕ್ಕಂತೆ ಅವು ಆತುಕೊಂಡು ಬಂದಿವೆ. ಆದರೆ ಅವು ಪುನರಾವರ್ತಿತವಾಗುತ್ತಾ ತೆಳುವಾಗುತ್ತಾ ಬಂದಿವೆ ಎನಿಸುತ್ತದೆ. ಈಚೆಗೆ ಈ ಜ್ಞಾನಪರಂಪರೆಗಳನ್ನೆ ಕತೆಯಾಗಿಸಿದ ಕೇಶವಮಳಗಿಯವರ 'ಆಕಥಕಥಾ' ಕಟ್ಟಿಯವರ “ಊರ್ಧ್ವರೇತ' ಜಿ.ವಿ. ಆನಂದಮೂರ್ತಿಯವರ `ಹುಲ್ಲೇಕರು' ಮುಂತಾದ ಕತೆಗಳನ್ನು ನೋಡಬಹುದು, ಲೋಕೇಶ ಅವರ ಹಿಂದಿನ ಕತೆಗಳಿಗೆ ಹೋಲಿಸಿದರೇ ಆ ಪರಂಪರೆಗಳು ಇಲ್ಲಿ ಮೊಟಕಾಗಿದೆ. ಕೇವಲ ಡೈಲಾಗ್ ರೂಪದಲ್ಲಿ (ಎರಿ ತಾತನ ಮಾತುಗಳು) ಮಾತ್ರ ಕಾಣಿಸಿಕೊಳ್ಳುತ್ತವೆ. 'ಮೀನುಪೇಟೆ' ಮಾತ್ರ ಈ ನೆಲೆಯಿಂದ ಯಶಸ್ವಿ ಕತೆ ಎನ್ನಬಹದು.
ಇವನ್ನು ಮೀರಿ ಅನಿವಾಸಿ ಬದುಕಿಗೆ ಅಂಟಿಕೊಂಡ ಕತೆಗಳು ಇಲ್ಲಿವೆ. ಗ್ರಾಮೀಣ ಮನಸ್ಸು ವಲಸೆಯ ಬದುಕನ್ನು ಚಿತ್ರಿಸಿದರೆ ಹೇಗಿರಬಲ್ಲದು ಎಂಬುದಕ್ಕೆ ಇಲ್ಲಿನ ಕತೆಗಳ ನಿದರ್ಶನವಾಗಿವೆ. ಲೋಕೇಶರ ಮಾಗಿದ ಅನುಭವಗಳು ಇಂಥ ಕಡೆ ಯಶಸ್ಸು ಕಂಡಿವೆ. 'ಆಳುವ ಕಡಲೊಳು' ಮತ್ತು 'ಗೋ! ಕಿಸ್ ದ ವರ್ಲ್ಡ್' ಕತೆಗಳು ಇಂದಿನ ಬದುಕಿನ ಸೂಕ್ಷ್ಮತೆಯನ್ನು ಅಭಿವ್ಯಕ್ತಿಸುತ್ತವೆ. ಅದರಲ್ಲೂ ಅಳುವ ಕಡಲೊಳು ಕತೆ ಯ ಬೆಳವಣಿಗೆ ಸ್ವ ಬದುಕಿನಿಂದ ಅಮೆರಿಕಾದ ವಾಣಿಜ್ಯ ಜೀವನ ಕ್ರಮಗಳ ಆಯಾಮಗಳ ಕಡೆ ಸಾಗುತ್ತದೆ. ಇಂಥ ಈ ಪುಸ್ತಕ ಮುನ್ನುಡಿ ಬೆನ್ನುಡಿಗಳಲ್ಲದೆ ನಡು ನುಡಿಯ ಭಾರದಿಂದ ತೊನೆದಾಡಿದೆ. ಇದೇನು ಲೇಖಕನ ಆತ್ಮವಿಶ್ವಾಸದ ಕೊರತೆಯ ಸಾಕ್ಷಿಯೋ ಎಂಬ ಅನುಮಾನ ಉಂಟಾಗುತ್ತದೆ. ಇತ್ತೀಚೆಗೆ ಆರಂಭವಾಗಿರುವ ಈ ಅತಿ ಆಶೀರ್ವಾದದ ಚಾಳಿ ಕೃತಿ ಓದನ್ನು ವಿಚಲಿತಗೊಳಿಸಬಲ್ಲುದಾಗಿದೆ. ನಮ್ಮ ಹೊಸ ತಲೆಮಾರಿನಲ್ಲಂತೂ ಮುನ್ನುಡಿಗಳ ಜೊತೆಗೆ ಪ್ರಕಟಣಾಪೂರ್ವ ಜಾಹೀರಾತುಗಳೇ ಅಧಿಕವಾಗಿವೆ, ಹಾಗಾಗಿ ಈಗ ಬೇಕಿರುವುದು ಇವರನ್ನೊಳಗೊಂಡ ಇಡಿಯಾದ ಅಧ್ಯಯನ.
-ಸುರೇಶ್ ನಾಗಲಮಡಿಕೆ
ಕೃಪೆ: ಹೊಸ ಮನುಷ್ಯ ಜೂನ್ 2020
©2024 Book Brahma Private Limited.