ಮಲ್ಲಿಕಾರ್ಜುನ ಗೌಡ, ತೂಲಹಳ್ಳಿಯವರ ಹಳ್ಳಿ ಅನುಭವಗಳ "ಅಗಸ್ತ್ಯ ನಕ್ಷತ್ರ" ಎಂಬ ನಾಲ್ಕು ನೀಳ್ಗತೆಗಳ ಸಂಕಲನ ಸಾರಸ್ವತ ಲೋಕದಲ್ಲಿ ಒಂದು ಶಾಶ್ವತ ಧ್ರುವ ತಾರೆಯಾಗುವಂತಹ ಕೃತಿ. ಒಂದು ಹಳ್ಳಿಯೆಂದರೆ ಅದೊಂದು ಪ್ರಾಪಂಚಿಕ ಲೋಕಕ್ಕೆ ಸಮ. ಆ ಲೋಕದ ಬದುಕು ಸಮಾಜಕ್ಕೆ ಮಾದರಿಯು ಆಗಬಹುದು ಅಥವಾ ಮಾರಕವು ಆಗಬಹುದು. ಅದನ್ನು ಹೇಗೆಂದು ಸ್ವೀಕರಿಸುವ ಗುಣ ಮಾತ್ರ ಲೇಖಕರ ಮನೋಧರ್ಮಕ್ಕೆ ಸೇರುತ್ತದೆ. ಇಲ್ಲಿ ಅಗಸ್ತ್ಯ ನಕ್ಷತ್ರದಲ್ಲಿನ ನಾಲ್ಕು ನೀಳ್ಗತೆಗಳು ಸಾಮಾಜಿಕ ಕಥೆಗಳಾಗಿದ್ದು ಹಳ್ಳಿ ಜೀವನದ ಪದರುಗಳೆಲ್ಲವನ್ನು ಪ್ರತಿ ಕಥೆಯಲ್ಲಿ ಹರವಿ ಬಿಟ್ಟು ಸಾರವನ್ನೆಲ್ಲ ಹೊರಗೆಳಿದ್ದಿದ್ದಾರೆ. ಇಲ್ಲಿ ನೀರಿಲ್ಲದ ಸಂಕಟ ಇದೆ, ಗಣಿಗಾರಿಕೆ ನುಂಗಿದ ಹೊಲವಿದೆ, ನೋವ ನುಂಗುವ ರೈತರಿದ್ದಾರೆ, ಮಾಗಿದ ವಯೋವೃದ್ಧರಿದ್ದಾರೆ, ಅಪರಾಧ, ತೇರನ್ನೆಳೆಯುವ ಜಾತ್ರೆ, ಪ್ರಣಯವು ಒಂದು ಕಡೆ, ಹಳ್ಳಿಯ ಗೂಡಂಗಡಿ ಇತ್ಯಾದಿ ಸೇರಿದ ಬದುಕಿನ ಸತ್ಯಗಳಿವೆ. ಈಗಿನ ಧಾವಂತದ ಬದುಕಿನ ಸದ್ಯದಲ್ಲಿ ಮರಿಚೀಕೆಯಾದ ಇಂತಹ ಕಥೆಗಳು ನಮ್ಮನ್ನೊಮ್ಮೆ ಸುಖದ ಹಾದಿಯಲ್ಲಿ ಕೊಂಡೊಯ್ಯುತ್ತದೆ. ಈ ಕೃತಿಯ ನಾಲ್ಕು ಕಥೆಗಳಲ್ಲಿ ಅಗಸ್ತ್ಯ ನಕ್ಷತ್ರ ಸುಂದರವಾದ ಕಥಾ ಹಂದರ. ಇದರಲ್ಲಿ ಕಥೆಗಾರರು ಗ್ರಾಮವೊಂದರ ಅನೇಕ ಮಗ್ಗುಲುಗಳ ವಿಚಾರಗಳನ್ನು ಕೈಗೆತ್ತಿಕೊಂಡರು, ಕೊನೆಗೊಂದು ಏಕರೂಪದ ನಿರ್ಧಾರ ತಳೆದಿರುವುದು ಮುಖ್ಯವಾಗಿ ಈ ಕಥೆಯ ಹೆಚ್ಚುಗಾರಿಕೆ. ಜಾತಿ ಪಂಕ್ತಿಗಳನ್ನು ಸೂಚ್ಯವಾಗಿ ಬಳಸಿದರು ಸಮಾನತೆಯ ಭಾವನೆಯೇ ಕಥೆಯಲ್ಲಿ ಎದ್ದು ಕಾಣುತ್ತದೆ. ಕಥೆಯ ನಾಯಕ ಭೋಜನ ಗೌಡರೆಂಬ ಭೋಜ ಗೌಡ ಕುತಂತ್ರಗಳಿಗೆ ಸಿಲುಕಿದರು ಆತನ ಒಳ್ಳೆಯತನ ಆತನನ್ನು ಕಾಪಾಡುವ ತಿರುಳು ಕಥೆಯಲ್ಲಿದೆ.
ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 'ಶರೀಫನ ಬೊಗಸೆ' ಮತ್ತು 'ತುಂಗಭದ್ರೆಯ ಪಾತ್ರದಲಿ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಕವಿತೆಗಳು ಕನ್ನಡ ಪ್ರಭ, ಅವಧಿ ಮುಂತಾದ ದಿನ ಪ್ರತಿಕೆಗಳಲ್ಲಿ ಪ್ರಕಟವಾಗಿವೆ. ...
READ MORE