‘ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’ ಕೆ. ಸತ್ಯನಾರಾಯಣ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಸ್ತ್ರೀವಾದ ಮತ್ತು ಹವ್ಯಾಸಿ ಸ್ತ್ರೀವಾದಿಗಳ ಬರವಣಿಗೆಯ ಆಚೆಗಿರುವ ಹೆಣ್ಣುಮಕ್ಕಳ ಕಥನವಿದೆ. ಕೃತಿಯ ಕುರಿತು ಲೇಖಕರು ಹೀಗೆ ಹೇಳುತ್ತಾರೆ: ಇಲ್ಲಿರುವ ಎಲ್ಲ ಕತೆಗಳು ತೀರಾ ಈಚೆಗೆ ಬರೆದಂಥವು. ಒಂದೆರಡು ಕತೆಗಳು ತೀರಾ ನಿನ್ನೆ ಮೊನ್ನೆ ನಡೆದಂಥವು. ಒಂದು ಕತೆಯಂತೂ ಇನ್ನೂ ನಡೆಯುತ್ತಿದೆ. ಆದರೆ ಬರೆಯುವ ಅಗತ್ಯಕ್ಕಾಗಿ ಇಲ್ಲಿ ಮುಕ್ತಾಯದ ಧ್ವನಿ ಕೊಡಬೇಕಾಯಿತು. ಇನ್ನೊಂದು ಕತೆ ಸುಮಾರು 80-85 ವರ್ಷಗಳಷ್ಟು ಹಿಂದಿನದು. ಹುಟ್ಟೂರಿನ ನೆರೆಯ ತಾಲೂಕಿನದು. ಆದರೆ ಕತೆ ಮುಂಚಾಚು ಪಡೆದುಕೊಂಡದ್ದು ಈಚೆಗೆ ನೆದರ್‌ಲ್ಯಾಂಡಿನಲ್ಲಿ. ಮತ್ತೊಂದು ಕತೆಯ ಬೇರೆ ಬೇರೆ ಭಾಗಗಳು ಕೂಡ ನೂರು ನೂರೈವತ್ತು ವರ್ಷಗಳಷ್ಟು ಹಿಂದಿನದು. ಈವತ್ತಿಗೆ ತನ್ನ ಕೊಂಡಿಯನ್ನು ಸಿಕ್ಕಿಹಾಕಿಸಿಕೊಂಡಿತು. ಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ನನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇ ತಾನಾಗಿ ರೂಪುಗೊಂಡಿದೆ. ಬರೆದಿದ್ದೇನೆ. ಕತೆಯಷ್ಟೇ ಈ ತೊಳಲಾಟವು ಕೂಡ ಮುಖ್ಯವಾದದ್ದು. ಇದನ್ನೆಲ್ಲ ಓದುಗರಲ್ಲಿ ನಿವೇದಿಸಿಕೊಂಡರೆ ತಪ್ಪೇನಿಲ್ಲ ಎಂದು ನನ್ನ ಮತ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE