‘ಅಸ್ಮಿತೆ’ ಕೃಷ್ಣಮೂರ್ತಿ ಚಂದರ್ ಅವರ ಕತಾಸಂಕಲನ. ಈ ಕೃತಿಗೆ ರಾಜೀವ ತಾರಾನಾಥ ಅವರು ಮುನ್ನುಡಿ ಬರೆದಿದ್ದಾರೆ. ನಮ್ಮ ದೊಡ್ಡ ದೊಡ್ಡ ಹೆಸರಿನ ಬರಹಗಾರರ ಕೃತಿಗಳನ್ನು ಓದಿ ನಾನು ಬಗ್ಗಲಿಲ್ಲವಾದರೂ ಕುಗ್ಗಿದ್ದೆ. ಚಂದರ್‍ನ ಕಥೆಗಳು ನನಗೆ ಭೇಷಾಗಿ ಚಾಚಿ ಮೈಮುರಿದ ಖುಷಿ ಕೊಟ್ಟವು ಎನ್ನುತ್ತಾರೆ ರಾಜೀವ ತಾರಾನಾಥರು.
ರಂಗಯ್ಯಂಗಾರರು, ಆಂಡಾಳಮ್ಮ ಇವರ ಕಥೆಯನ್ನೇ ನೋಡೋಣ. ಸ್ಟ್ರಿಕ್ಟ್ ಆದ ನಿದರ್ಶನವಲ್ಲ, ಆದರೆ ಚಂದರ್‍ನ ಒಟ್ಟು ಧಾಟಿ, ಮನಸ್ಸು, ನೋಟಗಳ ಹರಹು ಇವೆಲ್ಲದರ ನಂಜಿಕೊಳ್ಳುವಂತಹ ಆಸ್ಪದ ಹಾಗೂ ಎಲ್ಲಾ ರೀತಿಯಲ್ಲೂ ಒಂದು ಸರ್‍ಪ್ರೈಸ್ ಎಂಡಿಂಗ್ ಇಲ್ಲಿ ಸಿಗಬಹುದು. ತಿಳಿ ಕಾಮಿಡಿ ಅನ್ನಬಹುದಾದ ಸ್ಥಾಯೀಭಾವ ಈ ಕಥೆಯಲ್ಲಿದೆಯಾ? ಅನ್ನುವುದರೊಳಗೆ ಇನ್ನೇನೋ ಆಗಿಬಿಡುತ್ತದೆ. ಇರಲಿ, ಚಂದರ್‍ರ `ಸರಳ ಸಲಿಗೆ' ಅಂದೆನಲ್ಲಾ? ಅದು ಪ್ರತಿ ವಾಕ್ಯದಲ್ಲೂ ಎಷ್ಟು ಸಮಂಜಸವಾಗಿ ಪ್ರಿಸೈಸ್ ಆಗಿ, ಬರಹಗಾರನ ಬೇಡಿಕೆಗಳನ್ನು ನಿಭಾಯಿಸುತ್ತದೆ. ಇದು ಮುಖ್ಯ. ಏಕೆಂದರೆ, ಇದರಿಂದಲೇ ನನಗನ್ನಿಸುವುದು ಈ ರೀತಿಯ ಬರಹದ ತೂಕ ಹೆಚ್ಚುತ್ತದೆ.
ಕನ್ನಡದಲ್ಲಿ ಇದರ ಪರಂಪರೆಯೇ ಇದೆ ಅನ್ನಬಹುದೆ? ಕೈಲಾಸಂ ಬಹು ದೊಡ್ಡ ಹೆಸರು ಪೋಲಿಕಿಟ್ಟಿ, ಟೊಳ್ಳುಗಟ್ಟಿ ನಾಟಕಗಳಲ್ಲಿ ಏನೆಲ್ಲಾ ನಿಭಾಯಿಸುವುದಿಲ್ಲ? ಈ ಕಥೆಯ ಮೈನ್ ಮೂಡ್ ಮತ್ತು ಅದನ್ನು ರೂಪಿಸುತ್ತಿರುವ ಭಾಷೆ ಇವೇ ಅದರ ಅಂತ್ಯದ ಹಾರರ್ ಅನ್ನು ಹೊತ್ತುಕೊಳ್ಳುತ್ತವೆ. ಬರಿಯ ನಗೆಗಡಲಲ್ಲಿ, `ಪೋಯಿಟು ವರೆಯಾ ಕಣ್ಣಾ' ದ ಆಘಾತ, ಅಡುಗೆಮನೆಯ ನಂದಾದೀಪ ತರುವ ಇಚ್ಛೆ - ಇದರ ಭೀಕರ ವ್ಯಂಗ್ಯ ಎಲ್ಲವನ್ನೂ ಚಂದರ್‍ನ ಕನ್ನಡ ಧಾಟಿ ದಕ್ಷವಾಗಿ, ಬ್ರಿಲಿಯಂಟ್ ಆಗಿ ಹಿಡಿದಿಡುತ್ತದೆ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ವಸುದೇವ ಭೂಪಾಲಂ ಕತಾ ದತ್ತಿ ಪ್ರಶಸ್ತಿ ದೊರೆತಿದೆ.
ಕೃಷ್ಣಮೂರ್ತಿ ಚಂದರ್ ಹುಟ್ಟಿದ್ದು 1954ರಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಇಡಿ, ಎಂ.ಎ, ಪಿ.ಎಚ್ ಡಿ ಪಡೆದು ಆನಂತರ ಕೆನಡಾದ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗೀಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ...
READ MORE