ದಿಲೀಪ್ ಎನ್.ಕೆ ಅವರ ’ಬಲಿಷ್ಠ’ ಸಂಕಲನದಲ್ಲಿ ಏಳು ಕತೆಗಳಿವೆ. ರಂಜಾನ್ ದರ್ಗಾ ಅವರು ಹೇಳುವಂತೆ, ಒಂದು ಸಮುದಾಯದ ಭಾಷೆಯನ್ನು ಅರಿಯದೇ ಆ ಜನರ ನೋವಿನ ಮೂಲವನ್ನು ಅರ್ಥೈಸಿಕೊಳ್ಳಲಿಕ್ಕಾಗದು. ಶಿಷ್ಟರು ಪರಿಶಿಷ್ಟರ ಭಾಷಾ ಪ್ರಭೇದದ ಮೂಲಕವೇ ಅವರನ್ನು ಅರ್ಥೈಸಿಕೊಳ್ಳಬೇಕು. ಆ ಭಾಷೆಯನ್ನು ಕಳಚಿಬಿಟ್ಟರೆ ಅವರ ಬದುಕಿನ ಸೂಕ್ಷ್ಮತೆಯನ್ನು ಹಿಡಿದಿಡಲಿಕ್ಕೆ ಆಗುವುದಿಲ್ಲ ಎಂಬ ಕಾಳಜಿಯನ್ನು ದಿಲೀಪ ಹೊಂದಿದ್ದಾರೆ. ಬಲಿಷ್ಠ ಕಥಾಸಂಕಲನದಲ್ಲಿನ ಎಲ್ಲ ಕತೆಗಳೂ ತಳಸ್ತರ ಜಾತಿ ವ್ಯವಸ್ಥೆ ಮತ್ತು ಬವಣೆಗಳನ್ನು ತೆರೆದಿಡುವಲ್ಲಿ ಆಸಕ್ತಿ ವಹಿಸುತ್ತವೆ. ಎಳೆ ಇಲ್ಲದೆ ಎಳೆದದ್ದು ತೇರು ಎಳೆಯುವ ಘಟನೆಯನ್ನು ಇಟ್ಟುಕೊಂಡು ಸಾಮಾಜಿಕ ಪ್ರತಿಷ್ಠೆಯನ್ನು ಪ್ರಶ್ನಿಸುತ್ತಾರೆ. 'ಕೊರಳೊಡ್ಡುವ ಮುನ್ನ' ಜಾತಿ ತಾಕಲಾಟಗಳ ನಡುವೆಯೇ ಹೆಣ್ಣೂಬ್ಬಳ ತುಮುಲವನ್ನು ಕಟ್ಟಿಕೊಡುತ್ತದೆ.