ಪತ್ರಕರ್ತ, ಸಾಹಿತಿ ಟಿ.ಕೆ. ತ್ಯಾಗರಾಜ್ ಅವರು ಬರೆದ ’ಭಾವಭಿತ್ತಿಯ ಚಿತ್ರಗಳು’ ಹತ್ತು ಅನನ್ಯ ಕತೆಗಳಿರುವ ಸಂಕಲನ.
ಸಾಹಿತಿ ಶಿವರಾಮ ಕಾಡನಕುಪ್ಪೆ ಅವರು ಪುಸ್ತಕದ ಬೆನ್ನುಡಿಯಲ್ಲಿ ’ಟಿ ಕೆ ತ್ಯಾಗರಾಜ್ ಅವರ ಕಥೆಗಳು ಸಾಂಪ್ರದಾಯಿಕ ಕಥಾಬಂಧವನ್ನು, ಶೈಲಿಯನ್ನು ಪ್ರಯತ್ನಪೂರ್ವಕವಾಗಿಯೇ ಮುರಿದಿವೆಯೆಂದು ತಿಳಿಯಬೇಕು. ಇದು ಕನ್ನಡ ಕತೆಯ ಹೊಸ ಅಭಿವ್ಯಕ್ತಿ ಕ್ರಮದ ಸೂಚನೆಯಾಗಿ ತೋರುತ್ತದೆ. ಅವರ ಕತೆಗಳ ಹಿನ್ನೆಲೆಯಾಗಿ ದಟ್ಟ ಜೀವದ್ರವ್ಯ ಕೆಲಸ ಮಾಡಿದೆ. ಲೇಖಕರ ಲೋಕಾನುಭವ, ವೈಯಕ್ತಿಕ ನೆಲೆಯ ತಲ್ಲಣ ರಂಪಾಟಗಳು, ಸಾಮಾಜಿಕ, ಜನಪರ ನಿಲುವಿನಿಂದಾಗಿ ಸಂಭವಿಸಿರಬಹುದಾದ ಆಘಾತ ಮತ್ತು ನೋವುಗಳು ಈ ಕತೆಗಳ ದರ್ಶನ ಧ್ವನಿಯಾಗಿ ಅಭಿವ್ಯಕ್ತಗೊಂಡಿವೆ. ಲೇಖಕರ ಮಾಗಿದ ಅನುಭವಗಳು ಇಲ್ಲಿ ಜೀವನಮೌಲ್ಯಗಳ ಅಂತಃಸತ್ವವನ್ನು ವಿಮರ್ಶಿಸಿ, ಪರಿಶೋಧಿಸುವ ಬಗ್ಗೆ ಗಮನ ಹರಿಸಿವೆ. ಈ ಲೇಖಕರಿಗಿರುವ ಅಪಾರವಾದ ಓದು ಮತ್ತು ಜೀವನಾನುಭವದ ಅರಿವು ಈ ಕತೆಗಳನ್ನು ಓದಿ ಮುಗಿಸಿದಾಗ ಮನದಟ್ಟಾಗುತ್ತದೆ. ಈ ಅರಿವಿಗೆ ಅವರು ‘ಶೋಧ’ದ ಮಾದರಿಯಲ್ಲಿ ರೂಪು ನೀಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ’ ಎಂದಿದ್ದಾರೆ.
ವಿಮರ್ಶಕ ಪ್ರೊ. ಎಚ್.ಎಸ್. ರಾಘವೇಂದ್ರರಾವ್ ಅವರು ‘ಭಾವಭಿತ್ತಿಯ ಚಿತ್ರಗಳು’ ಒಂದು ತಲೆಮಾರಿನ ಆತ್ಮನಿವೇದನೆಯಾಗಿದೆ’ ಎಂದು ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರು ’ಡೆಕ್ಕನ್ ನ್ಯೂಸ್’ ವೆಬ್‌ಸೈಟ್‌ನ ಪ್ರಧಾನ ಸಂಪಾದಕರು. ಪ್ರಜಾವಾಣಿಯಲ್ಲಿ ’ಭಾವಭಿತ್ತಿ’ ಎಂಬ ಅಂಕಣ ಬರೆಯುತ್ತಿದ್ದರು. ಅವರ ’ಭಾವಭಿತ್ತಿಯ ಚಿತ್ರಗಳು’ ಕಥಾ ಸಂಕಲನಕ್ಕೆ ವಸುದೇವ ಭೂಪಾಲಂ (2014) ಪ್ರಶಸ್ತಿ ಸಂದಿದೆ. ...
READ MORE