ಬುಕ್ ಬ್ರಹ್ಮದ ʻಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2022ʼರ ಅಂತಿಮ ಸುತ್ತಿಗೆ ಆಯ್ಕೆಯಾದ 20 ಕತೆಗಳ ಸಂಕಲನ ʻವಿನ್ನರ್ ವಿನ್ನರ್ ಚಿಕನ್ ಡಿನ್ನರ್ʼ. ಇಲ್ಲಿರುವ 20 ಲೇಖಕರ ಕತೆಗಳ ಪೈಕಿ 6 ಕತೆಗಳು ಬಹುಮಾನ ಪಡೆದವಾಗಿವೆ. ಪುಸ್ತಕದ ಕುರಿತು ವಿಮರ್ಶಕಿ, ಲೇಖಕಿ ಎಂ. ಎಸ್. ಆಶಾದೇವಿ ಅವರು, ಮಾನವ ದಯಾಮೃತದ ಅಮೃತವಾಹಿನಿ ಮನುಷ್ಯರಲ್ಲಿ ಬತ್ತಿಲ್ಲ ಎನ್ನುವ ಭರವಸೆಯ ಸತ್ಯವನ್ನೂ ಕತೆಗಳು ಪ್ರತಿಪಾದಿಸಿದವು. ಹೆಣ್ಣಿನ ಧಾರಣ ಶಕ್ತಿಯನ್ನು ಅನೇಕ ಕತೆಗಳು ಎತ್ತಿಹಿಡಿದದ್ದು. ಏನೆಂಥ ಕಷ್ಟ ಕಾಲದಲ್ಲಿಯೂ ಹೆಣ್ಣಿನ ಜೀವ ಜೀವನ ಪ್ರೀತಿ ಮುರುಟುವುದಿಲ್ಲ, ಅದು ಒಂದಲ್ಲ ಒಂದು ಒಳದಾರಿಯನ್ನು, ಕಾಲುದಾರಿಯನ್ನು ತಾನಾಗಿ ಸೃಷ್ಟಿಸಿಕೊಳ್ಳುವ ಸತ್ಯವನ್ನು ಹೇಳುವ ಕತೆಗಳಿದ್ದವು ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ; ಬಿಡುಗಡೆ, ನೇಮ, ಬಯಲು ಬಂದಿಖಾನೆ, ಕ್ಯಾಲಿಫೋರ್ನಿಯಾ ಸನ್‌ಶೈನ್, ಚಂದ್ರಶಾಲೆಯಲ್ಲಿ ನಿಂತ ತೇರು, ಮೌನ ಮುರಿವ ಸದ್ದು, ನೆಲದಲ್ಲೆ ನೀರ ಸೆಲೆ, ನೆರಳ ನರ್ತನ, ಚಾಪುಡಿ, ಸಂಸಾರವೆಂಬ ಹೆಣ ಬಿದ್ದೊಡೆ, ಹಿಪ್ಸ್ ಡೋಂಟ್ ಲೈ, ಕುಂತ್ಯಮ್ಮಳ ಮಾರಾಪು, ಪಾತ್ರ, ತಾಪತ್ರಯ, ವಿನ್ನರ್ ವಿನ್ನರ್ ಚಿಕನ್ ಡಿನ್ನರ್, ಇವ ನಮ್ಮವ, ಬಾಗಿದ ರೆಪ್ಪೆಯ ಅಡಗು ತಾಣದಲ್ಲಿ, ಸರ್ವೆ ನಂಬರ್ 97, ಒಂಟಿ ಓಲೆಯ ಮುತ್ತು!, ಹಾಗೂ ಕರಿಕೋಟಿನ ಪುಸ್ತಕಗಳ ಎದುರು... ಶೀರ್ಷಿಕೆಗಳ ಕತೆಗಳಿವೆ.
ವಿನ್ನರ್ ವಿನ್ನರ್ ಚಿಕನ್ ಡಿನ್ನರ್ ಕೃತಿಯ ವಿಮರ್ಶೆ
ಹೊಸ ಚಿಗುರು - ಹಳೆ ಬೇರು ಕೂಡಿದಾಗ ಮರ ಸೊಬಗೆಂದು ಡಿವಿಜಿಯವರು ಹೇಳಿದಂತೆ ಹಿರಿಯರು ಮತ್ತು ಎಳೆಯರ ನಡುವಿನ ಬಾಂಧವ್ಯವು ತುಂಬ ಮಹತ್ವವಾದದ್ದು. ಕೆಲವು ಇಲ್ಲಿನ ಕಥೆಗಳು ಅದನ್ನು ದೃಢಪಡಿಸುತ್ತವೆ. ಇತ್ತೀಚಿನ ಆಧುನಿಕವೆನ್ನಬಹುದಾದ ಸಮಾಜದ ಪೀಳಿಗೆಗಳು ಯುವ ಪೀಳಿಗೆ-ನಡೆಯುತ್ತಿರುವ ದಾರಿಯ ಬಗೆಗಿನ ಚಿತ್ರಣಗಳೂ ಇಲ್ಲಿ ಸಿಗುತ್ತವೆ. ಯುವ ಜನರಿಗೆ ದಾರಿ ದೀಪವಾಗುವುದು ಅವಶ್ಯಕವಾದರೂ ಹಳೆಯ, ಇಂದಿಗೆ ಪ್ರಸ್ತುತವಲ್ಲದ ಕಂದಾಚಾರಗಳನ್ನು ಹೇರುವುದೂ ಅಪರಾಧವೇ. ಸುಮಾರು ಐವತ್ತು ವರ್ಷಗಳಿಂದೀಚೆಗೆ ಅನೂಹ್ಯ ಬದಲಾವಣೆಗಳಾಗಿವೆ. ಪಾರಂಪರಿಕ ವಿನ್ಯಾಸಗಳು ಸಹ ಬದಲಾಗಿವೆ. ಅಜ್ಜ ನೆಟ್ಟ ಆಲದ ಮರವೆಂದು ಜೋತು ಬೀಳಲು ಸಾಧ್ಯವಿಲ್ಲ, ಅಲ್ಲವೇ? ಈ ನಿಟ್ಟಿನಲ್ಲಿ ಹಲವು ಕಥೆಗಳು ನಮ್ಮನ್ನು ಎಚ್ಚರಿಸುತ್ತವೆ. ಇವೆಲ್ಲವುಗಳಿಂದಾಗಿ ಕೌಟುಂಬಿಕ ಸಾಮರಸ್ಯ ಕೆಡದಂತೆ ಜೋಪಾನ ಮಾಡುವುದು ದುಸ್ತರವಾದರೂ ಅತೀ ಅಗತ್ಯ. ಹಲವಾರು ಕಥೆಗಳು ಇಂದಿನ ಜಟಿಲ ವ್ಯವಸ್ಥೆಯನ್ನು ಪರಿಚಯಿಸುತ್ತವೆ.
(ಕೃಪೆ: ಹೊಸತು, ಡಿಸೆಂಬರ್- 2022)