‘ನೀಲವ್ವ’ ಲೇಖಕ ವಿಕಾಸ್ ಆರ್ ಮೌರ್ಯ ಅವರ ಕತಾಸಂಕಲನ. ಈ ಕೃತಿಗೆ ಲೇಖಕ ಗುರುಪ್ರಸಾದ್ ಕಂಟಲಗೆರೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಸೋಷಿಯಲ್ ಆಕ್ಟಿವಿಸ್ಟ್ ವಿಕಾಸ್ ಮೌರ್ಯ ತಮ್ಮ ಬರವಣಿಗೆಯಲ್ಲೂ ಹೋರಾಟದ ಚಹರೆಗಳನ್ನೇ ಮುಂದುವರೆಸಿದ್ದಾರೆ. ಈಗ ಅವರು ನಮ್ಮನ್ನು ಎದುರುಗೊಳ್ಳುತ್ತಿರುವುದು ಸೃಜನಶೀಲ ಕಥಾ ಪ್ರಕಾರದಿಂದಲೇ ಆದರೂ ಅವರು ಅದಕ್ಕಾಗಿ ತಾವು ನಂಬಿದ, ತಿಳಿದ, ಬೆಳೆದ ಪರಿಸರದಿಂದ ದೂರ ಉಳಿದು ಇನ್ನೇನನ್ನೋ ಹೇಳಲು ತಿಣುಕಾಡುವುದಿಲ್ಲ. ವಿಕಾಸ್ ತಾನು ಬದುಕ್ಕಿದ್ದನ್ನು, ಕನಸಿದ್ದನ್ನು ಕಾಣಿಸುವುದನ್ನೇ ಬರಹಧರ್ಮವಾಗಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ಕಥಾ ಸಂಕಲನಕ್ಕೆ ನೀಲವ್ವ ಎಂದೇ ಹೆಸರಿಡುವ ಮೂಲಕ ಹತ್ತೂ ಕಥೆಗಳಲ್ಲೂ ಈ ವೈಚಾರಿಕತೆಯನ್ನೇ ಬಿತ್ತಿ ಬೆಳೆದಿದ್ದಾರೆ ಎನ್ನುತ್ತಾರೆ.
ಇವತ್ತಿನ ಅಥವ ಯಾವತ್ತಿನ ಇಂಡಿಯಾದ ಕೇಡುಗಳಾದ ಅಸ್ಪೃಶ್ಯತೆ, ಜಾತಿಯತೆ, ಅತ್ಯಾಚಾರ, ಕೋಮುವಾದ, ಲಿಂಗತಾರತಮ್ಯ, ದುಡಿಯುವ ವರ್ಗಗಳ ಸಂಕಟ, ಅಕ್ಷರಕ್ಕಾಗಿ ಪರಿತಪಿಸುವುದು, ಇವುಗಳೆ ಇಲ್ಲಿನ ಕಥೆಗಳ ಹೃದಯವಾಗಿದೆ ಎನ್ನುತ್ತಾರೆ. ವಿಕಾಸ್ ಅವರರ ಕಥೆಗಳ ಮತ್ತೊಂದು ವಿಶೇಷತೆ ಅಂದರೆ ಕಥೆ ಮುಗಿಯಿತು ಎಂದುಕೊಳ್ಳುತ್ತಿರುವಾಗಲೂ ಅವು ಮುಂದುವರೆದಿರುತ್ತವೆ. ಒಂದೇ ಕಥೆಯಲ್ಲಿ ಎರಡು ಮಗ್ಗುಲು ಕಾಣಸಿಗುತ್ತದೆ. ಒಂದು ಮಗ್ಗುಲು ವಾಸ್ತವಕ್ಕೆ ಕನ್ನಡಿ ಹಿಡಿದರೆ, ನಂತರದ್ದು ಕಥೆಗಾರ ಕನಸುವ ಆದರ್ಶ ಸಮಾಜದೆಡೆಯ ಹಂಬಲದ್ದಾಗಿದೆ. ಈ ಕಾರಣದಿಂದಲೇ ಇಲ್ಲಿನ ಪ್ರತಿ ಕಥೆಯೂ ಕೊನೆಯಲ್ಲೊಂದು ಸಡನ್ ತಿರುವಿಗೆ ತೆತ್ತುಕೊಳ್ಳುತ್ತದೆ ಎಂದು ಗುರುಪ್ರಸಾದ್ ಕಂಟಲಗೆರೆ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಹಾಗೇ 'ನೀಲವ್ವ' ...
READ MORE