ಒಟ್ಟು ಒಂಬತ್ತು ಕತೆಗಳನ್ನು ಹೊಂದಿರುವ ಈ ಸಂಕಲನ, ಅನುಭವದ ನೆಲೆಯಲ್ಲಿ ರಚನೆಯಾದವು. ಕತೆ ಹೇಳುವ ಶೈಲಿ ಇನ್ನಷ್ಟು ಪಳಗಬೇಕಾಗಿದೆಯಾದರೂ, ಮೊದಲ ಸಂಕಲನ ಸಾಕಷ್ಟು ಭರವಸೆ ಹುಟ್ಟಿಸಿರುವುದು ನಿಜ. ಮುಂಬಯಿಯಲ್ಲಿ ನೆಲೆಯಾಗಿದ್ದರೂ, ಕತೆಯ ಬೇರು ತನ್ನೂರನ್ನು ವ್ಯಾಪಿಸಿಕೊಂಡಿದೆ. “ಸತ್ಯದ ಕಹಿ' ಮುಂಬಯಿ ವಲಸೆಯನ್ನು ಹಿನ್ನೆಲೆಯಾಗಿಟ್ಟು, ಬದುಕನ್ನು ನೋಡಲು ಕತೆಗಾರ್ತಿ ಯತ್ನಿಸುತ್ತಾರೆ. “ಹುಚ್ಚು ನಾಯಿ...' ಕತೆ ಹೆಣ್ಣಿನ ಪ್ರತಿಭಟನೆಯ ಶಕ್ತಿಯನ್ನು ದ್ರವ್ಯವಾಗಿಟ್ಟುಕೊಂಡು ಬರೆಯಲಾಗಿದೆ. “ಸತ್ಯಮೇವ ಜಯತೆ' ಅಧ್ಯಾತ್ಮ ಮತ್ತು ಅದನ್ನು ಸುತ್ತಿಕೊಂಡ ವ್ಯಂಗ್ಯಗಳನ್ನು ವಸ್ತುವಾಗಿಟ್ಟುಕೊಂಡಿದೆ. 'ಯಾರಿಗೆ ಯಾವ ಹುಚ್ಚು?' ಕತೆ, ಬದುಕನ್ನು ಅರಸಿ ಮುಂಬೈಗೆ ಬಂದವರು ಹೇಗೆ, ಈ ಶಹರದಲ್ಲಿ ಅಸಹಾಯಕರಾಗಿ ಬದುಕು ಕಳೆದುಕೊಳ್ಳುತ್ತಾರೆ ಎನ್ನುವುದನ್ನು ಹೇಳುತ್ತದೆ. 'ಕಮರಿ ಹೋಯಿತು' ಕತೆ ವರದಕ್ಷಿಣೆಯ ಅಮಾನವೀಯತೆಯನ್ನು ಹೇಳುತ್ತದೆ. ನವೋದಯದ ಹಿನ್ನೆಲೆಯಲ್ಲೇ ಬೆಳೆದು ಬಂದಿರುವ ಕತೆಗಳು ಇವಾದರೂ, ಇಲ್ಲಿರುವ ಪ್ರತಿಭಟನೆ ನವ್ಯವಾದುದು.