ಲೇಖಕ ಎಚ್ ಟಿ ಪೋತೆ ಅವರ ಕಥಾ ಸಂಕಲನ ‘ಬೆತ್ತಲಾದ ಚಂದ್ರ’. ವಿಶಿಷ್ಟ ವಿನ್ಯಾಸ, ವಿಭಿನ್ನ ವಿಷಯ ನಿರೂಪಣೆಯಿಂದಲೇ ಉತ್ತಮ ಕಥೆಗಾರರ ಸಾಲಿನಲ್ಲಿ ನಿಲ್ಲಬಲ್ಲವರು ಎಚ್ ಟಿ ಪೋತೆ. ಕನ್ನಡ ದಲಿತ ಕಥಾಸಾಹಿತ್ಯಕ್ಕೆ ಇವರ ಕೊಡುಗೆ ಗಮನಾರ್ಹ. ‘ಬೆತ್ತಲಾದ ಚಂದ್ರ’ ಇವರ ಎರಡನೆ ಕಥಾಸಂಕಲನ.
ಪೋತೆ ತಾವು ಸ್ವತಃ ಕಂಡುಂಡ ದಲಿತಲೋಕದ ಚಿತ್ರಣಗಳನ್ನೇ ತಮ್ಮ ಕಥಾ ರಚನೆಯ ವಸ್ತುವಾಗಿಸಿಕೊಂಡು ಬರೆಯುತ್ತಿರುವವರು. ತಮ್ಮ ಕಥಾರಚನೆ ಮತ್ತು ವಸ್ತುವೈವಿಧ್ಯದ ಕಾರಣದಿಂದ ಗಮನ ಸೆಳೆಯುವ ಇಲ್ಲಿನ ಕಥೆಗಳು, ದಲಿತರ ಬದುಕನ್ನು ಸಮಾನತೆಯತ್ತ ಕರೆದೊಯ್ಯುವ ದೀವಟಿಗೆಯಂತಿವೆ. ವಿಶಿಷ್ಟ ಪರಂಪರೆ ಹೊಂದಿರುವ ದಲಿತ ಕಥಾಸಾಹಿತ್ಯ ಈಗೀಗ ಸೃಜನಶೀಲವಾಗಿಯೂ ಕಾಣುತ್ತಿದೆ. ದಲಿತರ ಬದುಕಿನಲ್ಲಿ ಕಂಡಿದ್ದನ್ನು ಕಂಡಂತೆಯೇ ಕಥೆಯಾಗಿ ಓದುಗರೆದುರು ಇಡಬಲ್ಲ ತಂತ್ರ ಪೋತೆಯವರಲ್ಲಿದೆ. ನನ್ನ ಕಥೆಗೆ ಬಿಗಿ ತಳಪಾಯ ಸಿಕ್ಕಿದ್ದೇ ದಲಿತರ ಬದುಕಿನಲ್ಲಿ ನನಗೆ ಕಂಡ ಈ ಅಂಶಗಳಿಂದ ಎಂದು ಅವರೇ ಹೇಳಿಕೊಂಡಿದ್ದಾರೆ.
ಈ ಸಂಕಲನ ಆರು ಕಥೆಗಳ ಗುಚ್ಛ. ಇಲ್ಲಿನ ಪ್ರತಿಯೊಂದು ಕಥೆಯೂ ಜೀವಪರ ನಿಲುವಿನಿಂದ ಕೂಡಿವೆ. ಕಳೆದುಹೋದ ಘಟನೆಗಳನ್ನು ಸದ್ಯದ ತವಕ-ತಲ್ಲಣಗಳೊಂದಿಗೆ ಹೋಲಿಸಿ, ನಿರೂಪಿಸಲಾಗಿದೆ. ಬುದ್ಧನ ಪ್ರೀತಿ-ಕರುಣೆ, ಶಾಂತಿ, ಬಸವಣ್ಣನ ಸಾಮಾಜಿಕ ಬದಲಾವಣೆಯ ತವಕದಿಂದ ಮೂಡಿದ ತತ್ವ, ಹಾಗೂ ಅಂಬೇಡ್ಕರರ ಸ್ವಾಭಿಮಾನದ ಸಂಗಮದಿಂದ ಮೈದಳೆದ ಕಥೆಗಳೆಂಬುದು ಇವು ಓದುಗರಿಗೆ ಗೊತ್ತಾಗುತ್ತವೆ. ಕತೆಗಾರರ ಪ್ರತಿಭಟನಾ ಮನೋಭಾವ ಇಲ್ಲಿನ ಕತೆಗಳಿಗೆ ದಕ್ಕಿ, ನಿರೂಪಣೆ ಹೊಸದಾರಿ ಹಿಡಿದಿದೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE