ಹತ್ತು ಸಣ್ಣಕಥೆಗಳ ಸಂಕಲನ ಪ್ರಶಸ್ತಿ. `ಪ್ರಶಸ್ತಿ’ ಕತೆಯಲ್ಲಿ ಇಪ್ಪತ್ತೈದು ವರ್ಷಗಳು ಶ್ರುತಿ ಎನ್ನುವ ಕಾವ್ಯನಾಮದಲ್ಲಿ ತಮ್ಮ ಕತೆ ಕಾದಂಬರಿಗಳಿಂದ ಪ್ರಸಿದ್ಧರಾಗಿ, `ಕೃತಿ’ ಎನ್ನುವ ತಮ್ಮ ಕಾದಂಬರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನೂ ಪಡೆದ ಶ್ರುತಿಯನ್ನು ನೋಡಬೇಕೆಂದು ತಹತಹಿಸುತ್ತಿದ್ದ ಒಬ್ಬ ಗಣ್ಯವ್ಯಕ್ತಿಯು ಹೇಳುವ ಕತೆ ಇದು. ಅವನು ಶ್ರುತಿಯವರು ಬರೆದ `ಕೃತಿ’ ಎನ್ನುವ ಕಾದಂಬರಿಯನ್ನು ಓದಿರುತ್ತಾನೆ. ಆ ಕಾದಂಬರಿಗೆ ಪ್ರಶಸ್ತಿ ಬಂದದ್ದರಿಂದ ಶ್ರುತಿಯವರನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ, ಈ ಕತೆಯನ್ನು ಹೇಳುವ ನಿರೂಪಕನನ್ನು ಕರೆದಿರುತ್ತಾರೆ. ಅವನನ್ನು ವೇದಿಕೆಯಲ್ಲಿ ಕೂರಿಸಿದಾಗ ತನ್ನ ಪಕ್ಕದಲ್ಲಿದ್ದ ಸ್ವಲ್ಪ ಸ್ಥೂಲವಾದ ಮೈ, ಸಂಪೂರ್ಣ ಬೆಳ್ಳಿಗೂದಲನ್ನು ಎತ್ತಿಕಟ್ಟಿದ ತುರುಬು, ಹಣೆಯ ಅರ್ಧ ತುಂಬಿದ ದುಂಡು ಕುಂಕುಮ, ಕಣ್ಣಿಗೆ ಕಪ್ಪು ಕನ್ನಡಕ, ಪ್ರಿಂಟೆಡ್ ಸಿಲ್ಕ್ ಸೀರೆಯುಟ್ಟು ಬರುತ್ತಿದ್ದ ವ್ಯಕ್ತಿಯನ್ನು ತೋರಿಸಿ ``ಇವರೇ ಶ್ರುತಿ, ನಿಮ್ಮನ್ನು ಆಹ್ವಾನಿಸಲು ಇವರೇ ಕಾರಣ’’ ಎಂದು ಸಂಘದ ಅಧ್ಯಕ್ಷರು ಹೇಳಿದಾಗ ನಿರೂಪಕ ಹಿಗ್ಗುತ್ತಾನೆ. ಸ್ವಾಗತ, ಅತಿಥಿಗಳ ಭಾಷಣ ಆದಮೇಲೆ ಶ್ರುತಿ ಸಭಿಕರಿಂದ ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ ಮೇಲೆ ಅಳುತ್ತಾಳೆ. ಯಾರೋ ಒಬ್ಬರು, ಸಭಿಕರು ``ನಿಮ್ಮ ಪತಿದೇವರಿಗೆ ಎಂದು ಅರ್ಪಣೆ ಮಾಡಿದ್ದೀರಿ. ಆದರೆ ಅವರ ಬಗ್ಗೆ ಏನು ಹೇಳಿಲ್ಲ...’’ ಎಂದು ಕೇಳುತ್ತಾರೆ. ``ನನ್ನ ವೈಯಕ್ತಿಕ ವಿಷಯದ ಪ್ರಸ್ತಾಪ ಇಲ್ಲಿ ಬೇಡ’’ ಎಂದು ಹೇಳಿ ಶ್ರುತಿ ಪುಸ್ತಕದಲ್ಲಿ ತಮ್ಮ ಹೆಸರು ಬರೆದು, ಕನ್ನಡಕ ತೆಗೆದು ನಿರೂಪಕನ ಕಡೆಗೆ ಬರುತ್ತಾಳೆ. ``ಆ ಕಣ್ಣುಗಳನ್ನು ನೋಡುತ್ತಿದ್ದಂತೆ ನನಗೆ ಗಾಬರಿಯಾಯಿತು. ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಇಪ್ಪತ್ತೈದು ವರ್ಷಗಳ ಹಿಂದೆ ನನ್ನಿಂದ ದೂರವಾದ ನನ್ನ ಪತ್ನಿ ಕಥಾನಾಯಕಿ ಕೃತಿ ಹಾಗೂ ಶ್ರುತಿ ನನ್ನ ಮುಂದೆ ನಿಂತಿದ್ದಳು’’ ಎಂದು ನಿರೂಪಕ ಹೇಳುವಲ್ಲಿಗೆ ಕತೆ ಮುಗಿಯುತ್ತದೆ.
ಇಂತಹ ವಿಭಿನ್ನ ಆಲೋಚನೆಗಳಲ್ಲಿ ಸ್ತ್ರೀ ಸ್ವಾತಂತ್ಯ್ರದ ಕುರಿತು ಮಾತನಾಡುವ ಕತೆಯಳು ಈ ಕೃತಿಯಲ್ಲಿವೆ.