ಮಗ್ಗ

Author : ಸ್ನೇಹಲತಾ ದಿವಾಕರ್‌

Pages 92

₹ 110.00




Year of Publication: 2019
Published by: ಸಿರಿವರ ಪ್ರಕಾಶನ
Address: ನಂ.M37/B, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು-560021
Phone: 9844107060

Synopsys

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸ್ನೇಹಲತಾ ಅವರ ಆಯ್ದ ಹತ್ತು ಕತೆಗಳ ಸಂಗ್ರಹ ರೂಪ ‘ಮಗ್ಗ’. ಸ್ವವಿಮರ್ಶಕಿಯಾಗಿ ಗಟ್ಟಿಕಾಳುಗಳನ್ನು ಮಾತ್ರವೇ ಆರಿಸಿ ಮುಂದಿಡುವ ಸಂಯಮ ಅವರದ್ಧಾಗಿದ್ದು, ಅರ್ಹ ಎನಿಸಿದ ಕತೆಗಳನ್ನು ನೀಡಿದ್ಧಾರೆ. ಬದುಕಿನ ಕಟು ವಾಸ್ತವವೊಂದನ್ನು ಬೆಚ್ಚಿ ಬೀಳಿಸುವ ಆರ್ದ್ರ ಶೈಲಿಯಲ್ಲಿ ಕತೆಗಳನ್ನು ನಿರೂಪಿಸಿದ್ದಾರೆ. ಅಲ್ಲದೆ, ಸಮಕಾಲಿನ ಸಮಾಜದ ಕ್ರೂರತೆಯನ್ನು ವ್ಯಂಗ್ಯಗಳಲ್ಲಿ ಹೇಳುವ ಶೈಲಿ ಓದುಗರ ಗಮನ ಸೆಳೆಯುತ್ತದೆ. ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದವರ ಬದುಕಿನ ಪ್ರಾತಿನಿಧಿಕ ಸ್ವರೂಪಗಳನ್ನು ಕತೆಯಲ್ಲಿ ತಂದಿದ್ಧಾರೆ.

About the Author

ಸ್ನೇಹಲತಾ ದಿವಾಕರ್‌

ಕತೆಗಾರ್ತಿ ಸ್ನೇಹಲತಾ ದಿವಾಕರ್‌ ಕಾಸರಗೋಡಿನಲ್ಲಿ (1972ರಲ್ಲಿ) ಜನಿಸಿದರು. 18 ವರ್ಷದವರಿದ್ದಾಗ ಬರೆದ ‘ಕರುಪ್ಪ ಮತ್ತು ಕಡಲಮ್ಮ‘ ಕತೆಯು ತರಂಗದಲ್ಲಿ ಪ್ರಕಟವಾಗಿ ಸಂಚಲನ ಸೃಷ್ಟಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಸಂಪಾದಿಸಿದ ‘ಕಾಸರಗೋಡಿನ ಸಣ್ಣ ಕತೆಗಳು’ ಪ್ರಾತಿನಿಧಿಕ ಸಂಕಲನದಲ್ಲಿ ಈ ಕತೆಯು ಸೇರ್ಪಡೆಯಾಗಿದೆ. ‘ಮಗ್ಗ’ ಕಥಾ ಸಂಕಲನ 2020ರಲ್ಲಿ ಪ್ರಕಟಣೆ ಕಂಡಿದೆ. ...

READ MORE

Excerpt / E-Books

ಮುನ್ನುಡಿ ಸಣ್ಣಕತೆಯ ಪ್ರಕಾರದಲ್ಲಿ ಕಾಸರಗೋಡಿಗೆ ಒಂದು ಸತ್ವಯುತವಾದ ಪರಂಪರೆ ಇದೆ.ತಮ್ಮ ಕತೆಗಳ ಮೂಲಕ ಮನುಷ್ಯಸಂಬಂಧಗಳ ನಿಗೂಢಲೋಕವನ್ನು ದರ್ಶಿಸಿದ ಎಂ. ವ್ಯಾಸ. ಬದುಕಿನ ವ್ಯಾಪಾರಗಳ ಮೇಲೆ ಅಸ್ತಿತ್ವವಾದಿ ದಾರ್ಶನಿಕನ ಹೊಳಹುಗಳನ್ನು ಬೀರಿದ ಕೆ.ವಿ ತಿರುಮಲೇಶ್, ದಲಿತ ಲೋಕದ ಸಂಕಟಗಳನ್ನು ಮತ್ತು ಸಂಸ್ಕೃತಿಯ ಅನಾವರಣವನ್ನು ತಮ್ಮದೇ ರೀತಿಯಲ್ಲಿ ಅನಾವರಣಗೊಳಿಸಿದ ಜನಾರ್ದನ ಎರ್ಪಕಟ್ಟೆ, ಹೆಚ್ಚು ಬರೆಯದಿದ್ದರೂ ದೇವನೂರು ಮಹಾದೇವರಂತೆ ತಮ್ಮ ವಿಶಿಷ್ಟ ವಸ್ತು ಮತ್ತು ಶೈಲಿಯಿಂದ ಗಮನ ಸೆಳೆದ ಶಶಿ ಭಾಟಿಯಾ ಮೊದಲಾದವರು ಇಲ್ಲಿ ನೆನಪಾಗುತ್ತಾರೆ.

ಹಾಗೆಯೇ, ತಮ್ಮ ಕತೆಗಾರಿಕೆಯ ಶಕ್ತಿಯ ಮೂಲಕ ಈಚಿನ ದಿನಗಳಲ್ಲಿ ಅಖಿಲ ಕರ್ನಾಟಕ ಮಟ್ಟದಲ್ಲಿ ತಮ್ಮ ಛಾಪನ್ನೊತ್ತಿದ ಅನುಪಮಾ ಪ್ರಸಾದ್ ಕೂಡ. ಸ್ನೇಹಲತಾ ಈ ಪ್ರಕಾರಕ್ಕೆ ತಡವಾಗಿ ಬಂದವರೇನಲ್ಲ. ಅವರಿಗೆ ಕೇವಲ 18 ವರ್ಷವಾಗಿದ್ದಾಗ ಬರೆದ ‘ಕರುಪ್ಪ ಮತ್ತು ಕಡಲಮ್ಮ ‘ ಕತೆ ತರಂಗದಲ್ಲಿ ಪ್ರಕಟವಾದಾಗ ಅದು ಒಂದು ಸಂಚಲನ ಸೃಷ್ಟಿಸಿತ್ತು. ವಸಂತಕುಮಾರ್ ಪೆರ್ಲರು ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಸಂಪಾದಿಸಿದ ‘ ಕಾಸರಗೋಡಿನ ಸಣ್ಣ ಕತೆಗಳು’ ಪ್ರಾತಿನಿಧಿಕ ಸಂಗ್ರಹದಲ್ಲಿ ಈ ಕತೆ ಒಳಗೊಂಡದ್ದು ಈ ಸತ್ವಯುತ ಪರಂಪರೆಯ ಒಂದು ಗಟ್ಟಿ ಕೊಂಡಿ ಈಕೆ ಎನ್ನುವುದಕ್ಕೆ ಸಾಕ್ಷಿ.

ಈ ಕತೆಯ ಹುಟ್ಟಿನ ಹಿನ್ನೆಲೆಯನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘವು ಉಳ್ಳಾಲದಲ್ಲಿ ಒಂದು ಕಥಾಶಿಬಿರವನ್ನು ಆಯೋಜಿಸಿತ್ತು. ಆ ಶಿಬಿರದಲ್ಲಿ ಪಾಲ್ಗೊಂಡಿದವರಲ್ಲ್ದಿ ಅತ್ಯಂತ ಎಳೆಯಳಾಗಿದ್ದ ಸ್ನೇಹಲತಾ ಖ್ಯಾತನಾಮರ ನಡುವೆ ಉದಯೋನ್ಮುಖ ಕಥನ ಪ್ರತಿಭೆಯಾಗಿ ಶ್ಲಾಘನೆಗೆ ಪಾತ್ರಳಾಗಿದ್ದಳು. ಆ ಶಿಬಿರದಲ್ಲಿ ಮೂಡಿಬಂದ ಕತೆಯು ಕಡಲಮಕ್ಕಳ ಬದುಕಿನ ಸಂಕಟಗಳನ್ನು ಭಾವವಿಕಾರಗಳನ್ನು ಸೂಕ್ಷ್ಮ ಸಂವೇದನೆಯೊಂದಿಗೆ ಪರಿಣಾಮಕಾರಿಯಾದ ಕಥನಕೌಶಲದ ಮೂಲಕ ಚಿತ್ರಿಸಿದ್ದು ಒಬ್ಬ ಭರವಸೆಯ ಕತೆಗಾರ್ತಿಯ ಹುಟ್ಟನ್ನು ಸಾರಿತ್ತು..ಮತ್ತೆ ಆಕೆ ಈ ಭರವಸೆಯನ್ನು ಹುಸಿಗೊಳಿಸಲಿಲ್ಲ. ಒಳ್ಳೊಳ್ಳೆಯ ಕತೆಗಳನ್ನು ಬರೆದಳು.ಆದರೆ ಒಟ್ಟಾಗಿ ಒಂದು ಸಂಕಲನ ಬರಲಿಲ್ಲ. ಈ ಮಧ್ಯೆ ಕೆಲವು ಕತೆಗಳು ಯಾರ ಕೈಗೋ ಕೊಟ್ಟದ್ದು ಮರಳಿಬಾರದೆ ಕಳೆದುಹೋದವು. ಅಂತೂ ಈಗ ಕಾಲ ಕೂಡಿಬಂದು ಲಭ್ಯವಿರುವ ಕತೆಗಳಲ್ಲಿ ಆಯ್ದ ಹತ್ತು ಕತೆಗಳು ಸಂಗ್ರಹರೂಪದಲ್ಲಿ ಓದುಗರ ಕೈಸೇರುತ್ತಿರುವುದು ಬಹಳ ಸಂತೋಷದ ವಿಚಾರ.. ಹಾಗೆಂದೇ, ಸ್ನೇಹಲತಾ ತನ್ನ ಆಯ್ದ ಕತೆಗಳೊಂದಿಗೆ ಬಂದು ಇದಕ್ಕೊಂದು ಮುನ್ನಡಿಯನ್ನು ಬರೆಯಬೇಕೆಂದು ನನ್ನಲ್ಲಿ ಕೇಳಿಕೊಂಡಾಗ ನನಗೆ ಅಚ್ಚರಿಯ ಜೊತೆ ಸಂತೋಷ ಕೂಡ..ಯಾಕೆಂದರೆ ತನ್ನ ಕಾಲೇಜು ದಿನಗಳಲ್ಲೇ ಅತ್ಯಂತ ಪ್ರತಿಭಾನ್ವಿತ ಕತೆಗಾರ್ತಿಯಾಗಿ ಗುರುತಿಸಿಕೊಂಡ ಈಕೆಯ ಕಥಾಸಂಕಲನ ಎಂದೋ ಬರಬೇಕಿತ್ತು.ನಾನೂ ಸೇರಿದಂತೆ ಅವಳ ಅಧ್ಯಾಪಕರು ಹಾಗೂ ಸಹಪಾಠಿಗಳನೇಕರು ಅವಳಿಗೆ ಈ ವಿಚಾರದಲ್ಲಿ ಒತ್ತಾಯಿಸಿದ್ದುಂಟು..ಆಗೆಲ್ಲ ಅವಳು ತೀರ ನಿರಾಸಕ್ತಿಯನ್ನೇ ತೋರಿದ್ದಳು.ಈ ಒಂದು ದೂರು ನಮಗೆ ಅವಳ ಕುರಿತಾಗಿ ಇತ್ತು ಎಂದರೆ ಅತಿಶಯವಲ್ಲ. ಈ ಕಾರಣದಿಂದಲೇ ಕೊನೆಗೂ ಈ ದಿಸೆಯಲ್ಲಿ ಅಡಿಯಿಟ್ಟ ಅವಳೊಡನೆ ‘ಈ ಕಥಾಸಂಕಲನ ನಿನ್ನ ಕನಸು ಮಾತ್ರವಲ್ಲ ನಮ್ಮ್ಮೆಲ್ಲರ ಕನಸು’ ಎಂದು ನಾನು ಹೇಳಿದೆ. ಬರೆದದ್ದನ್ನೆಲ್ಲ ಅಚ್ಚು ಹಾಕಿಸುವ ಹಲವರ ಮಧ್ಯೆ ಸ್ವವಿಮರ್ಶಕಿಯಾಗಿ ಗಟ್ಟಿಕಾಳುಗಳನ್ನು ಮಾತ್ರವೇ ಆರಿಸಿ ಮುಂದಿಡುವ ಈ ಸಂಯಮ, ಸಂಕಲ್ಪ ದೊಡ್ಡದು. ಹಾಗಾಗಿ, ಮುನ್ನುಡಿ ಬರೆಯಲು ಸಂತೋಷದಿಂದಲೇ ಒಪ್ಪಿಕೊಂಡೆ.

ಸಂಕಲನದ ಮೊದಲ ಕತೆ ‘ಹಸಿವು’ಕತೆಗಾರ್ತಿಯ ಚೊಚ್ಚಲ ಕತೆಯಾಗಿದ್ದು ಇದರಲ್ಲಿ ಬದುಕಿನ ಕಟುವಾಸ್ತವವೊಂದನ್ನು, ಬೆಚ್ಚಿಬೀಳಿಸುವ ಸತ್ಯವನ್ನು ಭಾವಾದ್ರ್ರ ಶೈಲಿಯಲ್ಲಿ ನಿರೂಪಿಸಿದ್ದಾರೆ. ಹೊಟ್ಟೆಯ ಹಸಿವು ಎನ್ನುವುದು ಜೀವಿಯ ಮೂಲಭೂತವಾದ ಪ್ರಚೋದನೆ. ಮನುಷ್ಯನಿಗೂ ಈ ಪ್ರಶ್ನೆ ಅದರ ಪರಾಕಾಷ್ಠೆಯಲ್ಲಿ ಕಾಡಿದಾಗ ಆತ ಪ್ರಾಣಿಗಿಂತ ಭಿನ್ನನೇನಲ್ಲ..ಕತೆಯ ಕ್ಲೈಮ್ಯಾಕ್ಸ್ ನಲ್ಲಿ ಬರುವ ಆ ಉತ್ಕಟ ಕ್ಷಣದಲ್ಲಿ ರೂಕ್ಷತೆ ಇರುವಂತೆಯೇ ಅದನ್ನು ಅಷ್ಟೇ ತೀವ್ರತೆಯಲ್ಲಿ ಬೆಸೆದಿರುವ ಮಾನವೀಯ ಮುಖವೂ ಇದೆ. ಸತ್ಯವನ್ನು ಮುಖಕ್ಕೆ ಹೊಡೆದಂತೆ ಮಂಡಿಸುವ ಇಲ್ಲಿನ ರೀತಿ ನಿರಂಜನ, ತರಾ.ಸು ಮೊದಲಾದ ಪ್ರಗತಿಶೀಲರಿಗೆ ಹೆಚ್ಚು ಹತ್ತಿರವಾದದ್ದು. ಕುತೂಹಲದ ವಿಚಾರವೆಂದರೆ, ಇಲ್ಲಿ ಪಾತ್ರಗಳಿಗೆ ಹೆಸರಿಲ್ಲ. ‘ಅವನು’ ಮತ್ತು ‘ಅವಳು’ ಎಂಬ ಸರ್ವನಾಮದಿಂದಲೇ ಗುರುತಿಸಲ್ಪಡುವುದು, ಈ ಕತೆಯ ಪ್ರಾತಿನಿಧಿಕ ಸ್ವರೂಪಕ್ಕೆ ಯೋಗ್ಯವಾಗಿದೆ. ಬದುಕಿನಲ್ಲಿ ಕಂಡುಂಡ ಅನುಭವಗಳು ಕತೆಗಾರ್ತಿಯನ್ನು ಪ್ರಗತಿಶೀಲ ಮತ್ತು ಬಂಡಾಯ ಆಶಯಗಳಿಗೆ ತುಡಿಯುವಂತೆ ಮಾಡಿದ್ದರಲ್ಲಿ ಆಶ್ಚರ್ಯವಿಲ್ಲ. ಸಂಗ್ರಹದ ಇತರ ಕೆಲವು ಕತೆಗಳಲ್ಲೂ ಈ ದಾರಿದ್ರ್ಯದ, ಹೊಟ್ಟೆಪಾಡಿನ ಪ್ರಶ್ನೆ ಮುಖ್ಯವಾಗಿರುವುದನ್ನು ಗುರುತಿಸಬಹುದು.ಉದಾಹರಣೆಗೆ, ಅಂತಿಮ ಕತೆಯಲ್ಲಿ ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದವರ ಬದುಕಿನ ಪ್ರಾತಿನಿಧಿಕ ಸ್ವರೂಪ ಇದೆ. ಬರ ಮತ್ತು ಕಾಲರಾದಿಂದ ತತ್ತರಿಸಿದ ಮಂದಿಯ ಮಧ್ಯೆ ಹನುಮಿಯ ಪಾಡು ಇನ್ನೂ ಭೀಕರವಾಗಿ ಆಕೆ ಮೈ ಮಾರುವ ಅನಿವಾರ್ಯತೆಗೆ ಒಳಗಾಗುತ್ತಾಳೆ. ಆದರೆ, ಅವಳಿಗೆ ಎದುರಾಗುವ ಒಂದು ಧರ್ಮಸೂಕ್ಷ್ಮದ ಸನ್ನಿವೇಶವನ್ನು ಕತೆಗಾರ್ತಿ ತಂದಿದ್ದು ಅದನ್ನು ಆಕೆ ಎದುರಿಸುವ ಬಗೆಯಲ್ಲಿ ಕತೆಯ ಜೀವಪರ ಆಶಯ ದೃಢಗೊಳ್ಳುತ್ತದೆ.

‘ಬಾನು ಭುವಿಯ ನಡುವೆ’ ಕತೆಯಲ್ಲೂ ಇನ್ನೊಂದು ಬಗೆಯ ಧರ್ಮಸೂಕ್ಷ್ಮವು ಕಥಾನಾಯಕನಿಗೆ ಎದುರಾಗುತ್ತದೆ. ಮೊದಲ ಹೆಂಡತಿಯನ್ನು ಬಲಿ ತೆಗೆದುಕೊಂಡ ಕ್ರೌರ್ಯದ ಮೂಲ ತನ್ನಲ್ಲೇ ಹುದುಗಿರುವ ಅರಿವಿನ ಸಾಕ್ಷಾತ್ಕಾರವೇ ತನ್ನ ಎರಡನೇ ಪತ್ನಿ ಗರ್ಭ ಧರಿಸಿರುವುದು ತನ್ನಿಂದಲ್ಲವೆಂದು ತಿಳಿದೂ ಒಂದಷ್ಟು ಒಳಗಿನ ತುಮುಲದ ಬಳಿಕ ಅವಳನ್ನು ಒಪ್ಪಿಕೊಳ್ಳುವ ಒಂದು ಜೀವಪರ ನಿಲುವನ್ನು ತಳೆಯುವುದು ಆತನಿಗೆ ಸಾಧ್ಯವಾಗುತ್ತದೆ. ದಾರಿದ್ರ್ಯ, ಅವಿದ್ಯೆ, ಅಜ್ಞಾನವೇ ಮೊದಲಾದ ಸಮಸ್ಯೆಗಳು ಸೃಷ್ಟಿಸುವ ಖೆಡ್ಡಾಗಳ ಬಗ್ಗೆ ಮಾತ್ರವಲ್ಲ ಗಂಡು ಹೆಣ್ಣುಗಳು ವರ್ಗ-ವರ್ಣಾತೀತವಾಗಿ ಮನೋದೇಹಿಗಳೆಂಬ ವಾಸ್ತವದ ಅರಿವೂ ಈ ಕತೆಗಿದೆ.

ಲಟಾರಿ ಸೈಕಲ್ಲಿನ ಮೇಲೆ ಬರುವ ಐಸಿನಕಾಕಾನನ್ನು ಕೇಂದ್ರೀಕರಿಸಿ ಹೆಣೆದ ಕತೆಯಲ್ಲಿ ಎರಡು ಲೋಕಗಳನ್ನು ವೈದೃಶ್ಯಕ್ಕೆ ಒಡ್ಡಲಾಗಿದೆ. ವ್ಯವಹಾರದ ಸಂಬಂಧವನ್ನು ಮೀರಿ ಬೆಸೆದ ಬಾಂಧವ್ಯದ ಬಾಲ್ಯದ ಮುಗ್ಧಲೋಕ ಮತ್ತು ಅಸಹಾಯ ಜೀವಗಳಿಗೆ ಆಸರೆಯಾದ ಮಾನವೀಯತೆ ತುಂಬಿದ ಕಾಕನ ಹೃದಯ ಶ್ರೀಮಂತಿಕೆಯ ಲೋಕ ಒಂದೆಡೆಯಾದರೆ, ಕಾಲಗತಿಯಲ್ಲಿ ಆ ಮುಗ್ಧತೆಗೆ ವಿದಾಯ ಹೇಳಿ ವಿವಾಹದ ಬಳಿಕ ಹಣ ಅಂತಸ್ತು, ಪ್ರತಿಷ್ಠೆಗಳನ್ನು ಹೊಂದಿ ಐಸಿನಕಾಕರಂಥ ವರನ್ನು ವ್ಯವಹಾರಕ್ಕೆ ಮಾತ್ರ ಬಳಸಿ ದೂರವೇ ಇಟ್ಟುಕೊಳ್ಳುವ ನಾಗರಿಕ ಬದುಕಿನ ಸ್ವಾರ್ಥಪರ ಲೋಕ ಇನ್ನೊಂದೆಡೆ. ಇದರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಲತಾ ಮಾನಸಿಕ ಹೊಯ್ದಾಟಕ್ಕೆ ಗುರಿಯಾದರೂ ಕಾಕಾನ ಕಷ್ಟಕ್ಕೆ ಒದಗದೇ ಮುಂದೆ ಪಶ್ಚಾತ್ತಾಪ ಪಡುವಂತಾಗುವುದು ಮಾರ್ಮಿಕವಾಗಿದೆ.

ನಿಡುಗಾಲದ ಬದುಕನ್ನು ಜೊತೆಯಾಗಿ ಕಳೆದ ಮಕ್ಕಳಿಲ್ಲದ ಜೋಡಿ ಕಾಕಾ ಮತ್ತು ಆತನ ಮಡದಿ ಬೀವಿ. ಹಣವಿಲ್ಲದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲಾಗದೇ ಆಕೆಯೂ ಆಕೆಯನ್ನನುಸರಿಸಿ, ಆತನೂ ಮರಣ ಹೊಂದುವುದು ವಿರಳವಾದ ಘಟನೆ ಎನ್ನಿಸಿದರೂ ನಾಟಕೀಯವೆನಿಸುವುದಿಲ್ಲ ಯಾಕೆಂದರೆ, ಅಂತಹ ಘಟನೆಗಳು ಅಸಂಭಾವ್ಯವಲ್ಲ ಮತ್ತು ಕತೆಯ ಹರಿವಿನಲ್ಲಿ ಅಸಹಜ ಎನಿಸುವುದಿಲ್ಲ. ಲತಾಳ ಗೆಳತಿ ಸುಧಾಳ ಪಾತ್ರ ಆಕೆಯನ್ನೆಚ್ಚರಿಸುವ ಆತ್ಮಸಾಕ್ಷಿಯಂತಿದ್ದು ಮನುಷ್ಯ ಸಂಬಂಧಗಳ ಬಗ್ಗೆ ಆರೋಗ್ಯಕರ ನಿಲುವನ್ನು ಪ್ರತಿನಿಧಿಸುತ್ತದೆ.

ಕತೆಗಾರ್ತಿ ಸ್ನೇಹಲತಾರ ವ್ಯಕ್ತಿತ್ವಕ್ಕೆ ಇನ್ನೊಂದು ಮುಖವೂ ಇದೆ. ರಾಜಕೀಯವ್ಯವಸ್ಥೆಯಲ್ಲಿ ಸಾಕಷ್ಟು ವರ್ಷ ದುಡಿದು ಗಳಿಸಿದ ಅನುಭವ ಅವರದು.ಓರ್ವಮಹಿಳೆಯಾಗಿ ಸಕ್ರಿಯ ರಾಜಕಾರಣದಲ್ಲಿದ್ದು ಪಂಚಾಯತ್ ಮತ್ತು ಬ್ಲಾಕ್ ಪಂಚಾಯತ್ ಮಟ್ಟದಲ್ಲಿ ಜನಪ್ರತಿನಿಧಿಯಾಗಿ ಜನರ ಜೊತೆ ಒಡನಾಡಿದ ತಾಜಾ ಅನುಭವಗಳನ್ನು ಹೊಂದಿರುವ ಅವರು, ಈ ಹಿನ್ನೆಲೆಯಲ್ಲಿ ಬರೆದ ಕತೆ ‘ಕಣ್ಣಾಮುಚ್ಚೇ…!’ ವ್ಯವ್ಯಸ್ಥೆಯ ಹುಳುಕುಗಳನ್ನೂ ಇದರ ಜಂಜಾಟದಲ್ಲಿ ಸಿಲುಕಿಕೊಂಡ ಬಡಜನರ ಪಡಿಪಾಟಲುಗಳನ್ನೂ ಜೊತೆಯಲ್ಲಿಯೇ ಪಂಚಾಯತ್ ಮಟ್ಟದಲ್ಲಿ ಜನಪ್ರತಿನಿಧಿಗಳೆನಿಸಿಕೊಂಡವರು ಆಡಳಿತದ ತಾಂತ್ರಿಕ ಸಿಕ್ಕುಗಳಲ್ಲಿ ಹೈರಾಣಾಗುವುದನ್ನೂ ನೈಜವಾಗಿ ಇದರಲ್ಲಿ ಚಿತ್ರಿಸಲಾಗಿದೆ. ಕತೆಯ ಕ್ಲೈಮ್ಯಾಕ್ಸ್ ನಲ್ಲಿ ದುರಂತದೊಂದಿಗೆ ಕ್ರೂರವ್ಯಂಗ್ಯವೂ ಬೆರೆತು ವ್ಯವಸ್ಥೆಯ ಕೆಟ್ಟಮುಖವನ್ನು ಬತ್ತಲೆಗೊಳಿಸುತ್ತದೆ. ಬಡವರ ಬಂಧು ಎಂದೇ ಸಾಮಾನ್ಯವಾಗಿ ಗುರುತಿಸಿಕೊಂಡ ಹಲಸು, ಹೊಟ್ಟೆಯ ಹಸಿವನ್ನು ತಣಿಸುವುದಕ್ಕೆ ನಾನಾರೂಪಗಳಲ್ಲಿ ಒದಗಿದರೂ ಮನೆಯಲ್ಲಿ ನಿತ್ಯ ಬಳಕೆಯಿಂದ ತಿರಸ್ಕಾರಕ್ಕೆ ಗುರಿಯಾಗುವುದು (ಅದರಲ್ಲೂ ಮಕ್ಕಳಿಂದ) ಅಸಹಜವೇನಲ್ಲ. ಆದರೆ, ಅದಲ್ಲದೆ ಬೇರೊಂದಿಲ್ಲದ ಅನಿವಾರ್ಯ ಸನ್ನಿವೇಶ ಬಡವರದಾಗಿರುವಾಗ ಅಡುಗೆ ಮನೆಯ ಒಡತಿ ತಾಯಿ ಅಸಹಾಯಕಳೇ. ಕತೆಯ ನಾಯಕಿ ಹದಿಹರೆಯದ ಕಾಲೇಜು ಕನ್ಯೆ,.ತರಗತಿಯ ಹುಡುಗರ ತುಂಟಾಟದ ಲವಲವಿಕೆಯ ವಿವರಗಳೊಂದಿಗೆ ಆರಂಭವಾಗುವ ಕತೆಗೆ ಹಲಸಿನ ಬೀಜದ ಎಂಟ್ರಿಯಾಗುವುದು ಹೇಗೆಂದರೆ ಪ್ರಾಕ್ಟಿಕಲ್ ಕ್ಲಾಸಿಗೆ ಮೇಷ್ಟ್ರು ಜಿರಳೆಗೆ ದಾರ ಸುತ್ತಿ ತಂದದ್ದನ್ನು ನೋಡಿದಾಗ ಈಕೆಗೆ ಅದು ಹಲಸಿನ ಬೀಜದಂತೆ ಕಾಣುವ ಪ್ರಸಂಗದಿಂದ.ಯಾಕೆ ಅದು ಖರ್ಜೂರದಂತೆ ಕಾಣಲಿಲ್ಲ ಹಲಸಿನ ಬೀಜದಂತೆ ಯಾಕೆ ಕಂಡಿತು ಎಂಬ ಪ್ರಶ್ನೆಯ ಬೆನ್ನಲ್ಲೆ ಕತೆ ಬೆಳೆಯುತ್ತ ಹೋಗುತ್ತದೆ. ಬಡತನ ಕಷ್ಟಕಾರ್ಪಣ್ಯಗಳ ತನ್ನ ಮನೆ ಬಿಟ್ಟರೆ ಒಂದಿಷ್ಟು ತರಲೆ,ಹುಡುಗು ಬುದ್ಧಿಯ ಈಕೆಗೆ ಎದುರಾಗುವ ಪ್ರಪಂಚವು ತನ್ನಮನೆಯ ಬವಣೆ ಜಂಜಾಟಗಳ ಬಗ್ಗೆ , ತಾಯಿಯ ಬಗ್ಗೆ ತಿರಸ್ಕಾರವನ್ನು ಅಸಹನೆಯನ್ನೂ ಹುಟ್ಟಿಸುತ್ತದೆ.. ಗಂಡನಿದ್ದೂ ಮನೆವಾರ್ತೆಯನ್ನು ಏಕಾಂಗಿಯಾಗಿಯೇ ನಿಭಾಯಿಸುತ್ತ , ದಾಯಾದಿಗಳೊಂದಿಗೆ ತನ್ನ ಹಕ್ಕಿಗೆ ಬೇಕಾಗಿ ಹೋರಾಡುತ್ತ ಆ ಹೈರಾಣದಲ್ಲಿ ಮೊಂಡುಹಠದ ಮಗಳ ಬಗ್ಗೆ ಕಿಡಿಕಿಡಿಯಾಗುತ್ತ ಇರುವ ತಾಯಿಯ ವ್ಯಕ್ತಿತ್ವದ ಬೆಲೆ ಅರ್ಥೈಸಿಕೊಳ್ಳಲಾಗದ ಎಳಸುತನದಿಂದ ಪ್ರೌಢತೆಗೆ ಮಾಗುವ ಸನ್ನಿವೇಶಕ್ಕೆ ನಿಮಿತ್ತವಾಗುವುದು ಮತ್ತೆ ಆ ಹಲಸು ಎನ್ನುವುದು ಮಾರ್ಮಿಕವಾಗಿದೆ. ಈ ಮಧ್ಯೆ ಬರುವ ವಿವರಗಳು, ಬಡತನದ ಕಾರ್ಪಣ್ಯದ ಜೊತೆಗೆ ಕಥಾನಾಯಕಿಯ ಅಮ್ಮ ಮತ್ತು ಅಕ್ಕ- ಇವರಲ್ಲಿ ಹೊಮ್ಮುವ ಜೀವನಪ್ರೀತಿ ಹಾಗೂ ಹೋರಾಟದ ಕೆಚ್ಚನ್ನೂ ಬಿಚ್ಚಿಡುತ್ತ ಕತೆಯ ಕ್ಲೈಮ್ಯಾಕ್ಸಿಗೆ  ಕರೆದೊಯ್ಯುತ್ತವೆ. ಬದುಕಿನ ಕ್ರೂರ ವ್ಯಂಗ್ಯಗಳನ್ನೂ ಬೆಚ್ಚಿಬೀಳಿಸುವ ಸತ್ಯಗಳನ್ನೂ ಅನಾವರಣಗೊಳಿಸುತ್ತ ಎಂ. ವ್ಯಾಸರ ಕಥಾಮಾರ್ಗದಲ್ಲಿ ಸಾಗುವ ಕತೆ ‘ಬದುಕು’. ಬಂಧುತ್ವದ ನೆಲೆಯಲ್ಲಿ ಮಲಅಣ್ಣನಾಗಿದ್ದವನಿಗೆ ಸೋದರಿಯ ಜೊತೆ ದೈಹಿಕ ಸಂಬಂಧ ಏರ್ಪಟ್ಟು ಈ ನಿಷಿದ್ಧಕಾಮ ರೂಢಿಯಾಗಿ ಮುಂದುವರಿದು ಆಕೆಯ ವೈವಾಹಿಕ ಜೀವನಕ್ಕೂ ತಡೆಯಾಗಿ ಲೋಕದ ಕಣ್ಣಿಗೆ ತಾಯಿತಂದೆಯರಿಲ್ಲದ ತಬ್ಬಲಿ ಮಲತಂಗಿಯರಿಗಾಗಿ ತಾನು ಅವಿವಾಹಿತನಾಗಿ ಉಳಿದ ತ್ಯಾಗಮೂರ್ತಿಯಾಗಿ ಮೆರೆಯುವ ವಿಚಿತ್ರವ್ಯಂಗ್ಯ ಕತೆಯಲ್ಲಿ ಸಂಭವಿಸುತ್ತದೆ.

ಕತೆಯಲ್ಲಿ ಸ್ನೇಹಲತಾ ಅವರು ವಿವರಗಳನ್ನು ಸರಳೀಕರಿಸದೆ ಅಥವಾ ವೈಭವೀಕರಿಸದೆ ಸಂಯಮದಿಂದ ಅಪೂರ್ವ ನಿರ್ಲಿಪ್ತತೆಯಿಂದ ನಿರೂಪಿಸುವುದು ವಿಶೇಷ ವಿಚಾರ. ಸರಿತಪ್ಪುಗಳ ಸರಳ ಸಮೀಕರಣಕ್ಕೆ ಬರಲು ಸಾಧ್ಯವಾಗದಂತೆ ಘಟನೆಗಳ ಜಾಡು ಸಾಗುತ್ತದೆ, ಬೇರೆ ಹಿರಿಯರಿಲ್ಲದ ಮನೆಯಲ್ಲಿ ಕಾಮ ಎನ್ನುವ ಇನ್ಸ್ಟಿಂಕ್ಟ್ ಪ್ರಚೋದನೆಗೊಳಗಾಗುವುದು ಮತ್ತೆ ಅದರಿಂದ ಹೊರಬರಲಾಗದೆ ಅದೇ ರೂಢಿಯಾಗುವುದು, ಅಣ್ಣತಂಗಿಯರ ಮಧ್ಯೆ ಏರ್ಪಡುವ ಈ ನಿಷಿದ್ಧಕಾಮ ಗೌಪ್ಯವಾಗಿದ್ದರೂ ಅದು ಕುಟುಂಬ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮ, ಅದು ತಂಗಿಯ ಮುಂದೆ ಬಹಿರಂಗಗೊಳ್ಳುವ ಸನ್ನಿವೇಶ, ತಂಗಿಯಂದಿರ ಬದುಕಾದರೂ ನೇರ್ಪವಾಗಿರಲೆಂದು ಒಮ್ಮೆ ಬಲಿಯಾದ ಅಕ್ಕ ಹಾಗೆಯೇ ಮುಂದುವರಿಯುವ ಕ್ರೂರ ಸತ್ಯವನ್ನುತಂಗಿಯ ಮುಂದೆ ಬಿಚ್ಚಿಟ್ಟ ಬಳಿಕ ತನ್ನ ಬದುಕಿನ ದಾರಿಯನ್ನು ಹುಡುಕುತ್ತ ಹೊರಡುವುದು- ಹೀಗೆ ಕತೆಯು ‘ಬದುಕು ಹೀಗೂ ಇರುತ್ತದಲ್ಲ’ಎಂದು ಮನುಷ್ಯನ ಪಾಡನ್ನು ನೆನೆದು ಮರುಗುವಂತೆ, ‘ಮನಸಿಜನ ಮಾಯೆ ವಿಧಿವಿಲಸನದ ನೆರಂಬಡೆಯೆ ಕೊಂದುಕೂಗದೆ ನರರಂ’ಎಂಬ ಭಯಾನಕ ಸತ್ಯವನ್ನು ಅರಗಿಸಿಕೊಳ್ಳಲಾಗದೆ ವಿಹ್ವಲರಾಗುವಂತೆ ಮಾಡುತ್ತದೆ. ಬದುಕಿನ ದಾರುಣತೆಗೆ ಅನಂತಮುಖಗಳು.ಸ್ನೇಹಲತಾ ಅವರ ಕತೆಗಳಲ್ಲಿ ಈ ಭಿನ್ನ ಮುಖಗಳನ್ನು ದರ್ಶಿಸುವ ಪ್ರಯತ್ನವನ್ನು ಮಾಡಲಾಗಿದೆ. ಅಂತಹ ಪ್ರಯತ್ನದಲ್ಲಿ ಸಾಫಲ್ಯವನ್ನು ಕಂಡ ಒಂದು ಕತೆ ‘ಕರುಪ್ಪ ಮತ್ತು ಕಡಲಮ್ಮ’. ಹೊಟ್ಟೆಪಾಡಿಗಾಗಿ ಕಡಲಮ್ಮನನ್ನು ಆಶ್ರಯಿಸಿದ ಕಡಲಮಕ್ಕಳ ಒಡಲಕೂಗು ತಾರಕಕ್ಕೇರುವುದು ಮಳೆಗಾಲದ ಬಿರುಸಿನ ದಿನಗಳಲ್ಲಿ. ಭೋರ್ಗರೆವ ಕಡಲಿಗೆ ಇಳಿವಂತಿಲ್ಲ. ಆದರೆ ಒಳಗಿಂದ ಭೋರ್ಗರೆವ ಒಡಲ ಹಸಿವಿಗೆ ಇಕ್ಕುವುದು ಏನನ್ನು ಎಂಬ ಪ್ರಶ್ನೆಯೇ ಹಾಗೆ ಸ್ವಲ್ಪ ಮಳೆಯ ಬಿರುಸು ಕಡಿಮೆಯಾದಾಗ ಸಮುದ್ರಕ್ಕೆ ಇಳಿವ ಆಸೆಯನ್ನು ಮೀಟುತ್ತದೆ. .ಅದರಂತೆ ಕೇರಿಯ ಮೂಪ್ಪ( ಮುಖಂಡ)ನ ಮಾತನ್ನು ಉಲ್ಲಂಘಿಸಿ ಕಡಲಿಗೆ ಇಳಿದ ಕರುಪ್ಪನನಿಗೆ ಹೆಜ್ಜೆಹೆಜ್ಜೆಗೆ ಎದುರಾಗುವುದು ಆತಂಕದ ಕ್ಷಣಗಳೇ. ಆದರೆ ಕತೆ ಅಷ್ಟು ಸರಳವಾದುದಲ್ಲ. ಅದಕ್ಕೆ ಇನ್ನೂ ಸಂಕೀರ್ಣವಾದ ಮುಖ ಇದೆ. ಮೊದಲಾಳಿ ಮತ್ತು ಕರುಪ್ಪನಿಗೆ ಏರ್ಪಡುವ ಸಂಘರ್ಷಕ್ಕೆ ಒಂದು ಹಿನ್ನೆಲೆ ಇದೆ. ಕೆರಳಿದ ಅಲೆಗಳ ನಡುವೆ ಏಕಾಂಗಿಯಾಗಿ ನಡೆಸುವ ಹೋರಾಟ ಒಂದೆಡೆಯಾದರೆ ಅವನ ಮನಸ್ಸಿನಲ್ಲಿ ಏಳುವ ಭಾವನೆಗಳ ಅಲೆಯ ಹೊಯ್ದಾಟವೂ ಅಷ್ಟೇ ಜೋರಾದುದು. ತಂಗಮಣಿಯ ಮೇಲಿನ ಪ್ರೀತಿ, ಮೊದಲಾಳಿಯ ಮೇಲಿನ ಜಿದ್ದು, ರೋಷ, ತಾನು ಹಾಗೂ ತನ್ನ ಹೆತ್ತವರು ಅನುಭವಿಸಿದ ಅವಮಾನ ಸಂಕಟಗಳು-ಹೀಗೆ ಪ್ರಕ್ಷುಬ್ಧಕಡಲಿನೊಂದಿಗೆ ಏಗುವ ಅವನ ಮನದ ಪ್ರಕ್ಷುಬ್ಧತೆಯನ್ನು ಕತೆಗಾರ್ತಿ ಸಮೀಕರಿಸಿದ ಬಗೆ ಮನೋಜ್ಞವಾಗಿದೆ.. ಅಧಿಕಾರ ಅಂತಸ್ತು, ಹಣವುಳ್ಳವರು ಅಂತಹ ಬಲವಿಲ್ಲದವರನ್ನು ಅಂಕೆಯಲ್ಲಿರಿಸುವುದು, ಅವರ ಮೇಲೆ ದೌರ್ಜನ್ಯವನ್ನು ನಡೆಸುವುದು ಜಾತಿಮತ ಪಂಗಡಗಳನ್ನು ಮೀರಿ ಎಲ್ಲೆಡೆ ಇರುವಂಥದ್ದೇ.ಮೇಲ್ಜಾತಿ,ಕೆಳಜಾತಿ ಎಂಬ ಅಸಮಾನತೆಗಿಂತ ಭಿನ್ನವಾಗಿ ಒಂದೊಂದು ಜಾತಿ, ಪಂಗಡಗಳೊಳಗೇ ನಡೆಯುವ ಈ ವಿದ್ಯಮಾನಗಳಲ್ಲಿ ನಲುಗುವುದು ಸೂಕ್ಷ್ಮಮನಸ್ಸುಗಳು. ತಂಗಮಣಿ ಮತ್ತು ಕುರುಪ್ಪ ಒಂದಾಗಿ ಬಾಳುವುದು ಸಾಧ್ಯವಾಗದೆ ಇಬ್ಬರೂ ಬದುಕಲ್ಲದ ಬದುಕನ್ನು ಕಳೆಯುವಂತಾದ ಅವರ ದುರಂತಕ್ಕೆ ಕತೆ ಮಿಡಿಯುತ್ತದೆ. ಕತೆಯ ಆರಂಭದಲ್ಲಿ ಮೂಪ್ಪನ ವಿರುದ್ಧ ಬಂಡಾಯವೇಳುವ ಕುರುಪ್ಪನನ್ನು ಒಂದು ಧೀರೋದಾತ್ತ ಪ್ರಭಾವಳಿ ಆವರಿಸಿ ಆತ ಅಲೆಗಳೊಂದಿಗೆ ಹೋರಾಡುವ ದೃಶ್ಯ ಮನಸ್ಸನ್ನು ಸೆರೆಹಿಡಿಯುತ್ತದೆ. ಕತೆಯ ಕೊನೆಯಲ್ಲಿ ಮೊದಲಾಳಿಯ ಕ್ರೌರ್ಯಕ್ಕೆ ಬಲಿಯಾಗಿ ಮಾನಸಿಕ ಅಸ್ವಸ್ಥನಾದ ಅವನ ಅವಸ್ಥೆಗೆ ಊರವರು ಯಾವ ಕಾರಣವನ್ನು ಹೇಳಿದರೂ ಅದನ್ನು ಒಪ್ಪಬೇಕೆಂದು ಕತೆಗಾರ್ತಿ ಖಂಡಿತವಾಗಿ ಸೂಚಿಸುವುದಿಲ್ಲ. ಬದಲಾಗಿ ಅವನ ಈ ಅವಸ್ಥೆಗೆ ನಿಜಕಾರಣವನ್ನು ತಿಳಿಯುವಂತೆ ಕತೆ ಒತ್ತಾಯಿಸುತ್ತದೆ. ನಿಜವಾಗಿಯೂ ಕತೆ ಒಂದು ದೃಶ್ಯಕಾವ್ಯವಾಗಿ ಓದುಗರ ಮನದಲ್ಲಿ ಅಚ್ಚೊತ್ತುತ್ತದೆ. ಸಂಗ್ರಹದ ಮತ್ತೊಂದು ಉತ್ಕೃಷ್ಟ ಕತೆ ‘ಮಗ್ಗ’. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ವಸನವನ್ನು ನಿರ್ಮಿಸಿಕೊಡುವ ಪರಂಪರಾಗತವೃತ್ತಿ ನೇಯ್ಗೆಅದರ ಪ್ರಧಾನ ಪರಿಕರ ಮಗ್ಗ. ಪಾರಂಪರಿಕವಾದ ಈ ನೇಕಾರವೃತ್ತಿ ನೆಲಕಚ್ಚುವ ಸನ್ನಿವೇಶದಲ್ಲಿ ಮಗ್ಗವನ್ನು , ಆ ಕಾಯಕವನ್ನು ಪ್ರಾಣದಂತೆ ಪ್ರೀತಿಸಿದ ಅಜ್ಜನ ಭಾವನೆಯೊಂದಿಗೆ ಮೂರನೆಯ ತಲೆಮಾರು ಮೊಮ್ಮಗನ ವ್ಯಾವಹಾರಿಕತೆ ಒಂದಿಷ್ಟೂ ತಾಳೆಯಾಗದೆ ಸಂಘರ್ಷವೇರ್ಪಡುತ್ತದೆ. ಜಾಗತೀಕರಣದ ಬಿರುಸು, ಆಧುನಿಕತೆಯ ಭರಾಟೆ ಕತೆಯ ಮುನ್ನೆಲೆಗೆ ಅಷ್ಟಾಗಿ ಬಾರದಿದ್ದರೂ ಅದರ ಪ್ರಬಾವವನ್ನು ಕತೆ ಸಮರ್ಥವಾಗಿ ಗುರುತಿಸುತ್ತದೆ.ಅಜ್ಜನ ಭಾವನಾತ್ಮಕ ಸೆಳೆತಕ್ಕೆ ಗಟ್ಟಿಸಮರ್ಥನೆ ಕತೆಯಲ್ಲಿ ಇರುವಂತೆಯೇ ಬದುಕಿನ ವಾಸ್ತವಗಳು ಒಡ್ಡುವ ಅಗ್ನಿದಿವ್ಯಗಳ ಕ್ರೌರ್ಯವನ್ನೂಕತೆ ಒಡಲುಗೊಂಡಿದೆ. ಬೇರೆ ಆರ್ಥಿಕ ಮೂಲವಿಲ್ಲದ್ದರಿಂದಲೂ ಸಮುದಾಯದ ದೇವಸ್ಥಾನದಲ್ಲಿ ವೃತ್ತಿ ಸಂಕೇತವಾಗಿ ಮಗ್ಗವನ್ನು ಇಡುವ ಉಳ್ಳವರ ಪ್ರಸ್ತಾಪದಂತೆ ಅದಕ್ಕಾಗಿ ಮಗ್ಗಮಾರಿ ಹೇಗೋ ಸಂಬಂಧ ಕೂಡಿ ಬಂದ ಮೊಮ್ಮಗಳ ಮದುವೆಯನ್ನು ಗೊತ್ತುಮಾಡುವ ಅನಿವಾರ್ಯ ನಿರ್ಧಾರಕ್ಕೆ ಬಂದ ಮನೆಯ ಇತರರಿಗೆ ಅದಕ್ಕೆ ಅಡ್ಡಿಬರುವ ಅಜ್ಜ ಒಂದು ತೊಡಕಾಗಿ ಕಾಣಿಸಿದರೆ ಮಗ್ಗಮಾರುವ ಪ್ರಸ್ತಾಪ ಅಜ್ಜನಿಗೆ ಕೊಲೆಯಷ್ಟೇ ಭಯಾನಕವಾಗಿ ತೋರುವುದು. ಕತೆಗಾರ್ತಿ ಸನ್ನಿವೇಶದ ಸಂಕೀರ್ಣತೆಯನ್ನುಎಷ್ಟು ಪ್ರಬುದ್ಧವಾಗಿ ದರ್ಶಿಸಬಲ್ಲರು ಎನ್ನುವುದಕ್ಕೆ ಸಾಕ್ಷಿ.ಮಧ್ಯದ ತಲೆಮಾರಿಗೆ ಸೇರಿದ ಪೊಟ್ಟನ ಮೌನ ಮಾತಿಗಿಂತ ತೀಕ್ಷ್ಣವಾಗಿದ್ದು ಕತೆಯ ಕೊನೆಯಲ್ಲಿ ಆತ ಮಗ್ಗವನ್ನುಒಡೆಯುವ ಕ್ರಿಯೆಗೆ ಮುಂದಾಗುವುದು ಅಜ್ಜನನ್ನು ಮಾತ್ರವಲ್ಲ ಓದುಗರನ್ನು ಮೌನದಲ್ಲಿ ಅದ್ದುತ್ತದೆ..ಅದು ಒಂದು ಬಗೆಯಲ್ಲಿ ಮಹಾಭಾರತದ ಕೊನೆಯ ವಿಷಾದಮೌನದಂತೆ ಇರಿಯುತ್ತದೆ..ಅದು ಕತೆಯ ಶಕ್ತಿಕೂಡ.ಮಗ್ಗದ ಕುರಿತಾಗಿ ಮೂರು ತಲೆಮಾರುಗಳ ಭಾವಗಳನ್ನು ಕಟ್ಟಿಕೊಟ್ಟ ರೀತಿ ಬಹಳ ಸೊಗಸಾಗಿದೆ.

ಸ್ನೇಹಲತಾ ಅವರ ಕತೆಗಳ ಶಕ್ತಿ ಅವರು ಬಳಸುವ ಭಾಷೆಯಲ್ಲೂ ಎದ್ದು ಕಾಣುತ್ತದೆ. ಕನ್ನಡದ ಕಥಾಪರಂಪರೆಯ ಸತ್ವವನ್ನು ತನ್ನ ಓದಿನಿಂದ ಆರ್ಜಿಸಿದ ಮತ್ತು ಆ ಕಥಾಪರಂಪರೆಗೆ ವಿಶಿಷ್ಟ ಸಾಂಸ್ಕೃತಿಕ ಪರಿಸರದ ಕಾಸರಗೋಡಿನ ಕನ್ನಡದ ಘಮಲನ್ನು ಕತೆಗಳ ಮೂಲಕ ನೀಡಿದ ಅವರು ಅಭಿನಂದನೆಗೆ ಅರ್ಹರಾಗುತ್ತಾರೆ. ಸಂಭಾಷಣೆಯಲ್ಲಿ ‘ ಇಕ್ಕಳ್ಳಿ. ಹೇಳಲಿಲ್ಲಾಂತ ಬೇಡ. ನಾಳೆ ನಾಡಿದ್ದರಲ್ಲಿ ಮಗ್ಗ ಕೊಂಡು ಹೋಗುವುದೇ… ನೀವು ಇನ್ನು ಬಂದವರೆದುರು ದೊಂಡೆ ಬಿಚ್ಚಿದರೆ’,’ ಈ ತೊಂಡ ಎಂತ ಮಾಡ್ತಾನೆ ನೋಡುವ’ -ಇಂತಹ ಸಾಲುಗಳು ಮಾತಿನ ಶಕ್ತಿಯನ್ನು ಅದರ ಕಾಕುವಿನ ಸಮೇತ ಮನಸ್ಸಿಗೆ ಮುಟ್ಟಿಸುತ್ತವೆ.ಬಹುಭಾಷೆ ಮತ್ತು ವಿವಿಧ ಸಮುದಾಯಗಳ ಕಾಸರಗೋಡಿನ ವಿಶಿಷ್ಟ ಬದುಕಿನ ವರ್ಣಗಳು ಕತೆಗಳಲ್ಲಿ ಸಾಂದರ್ಭಿಕವಾಗಿ ಎಡೆ ಪಡೆದಿವೆ. ಮಲೆಯಾಳಿ ನುಡಿಗಳೂ,ವೃತ್ತಿ ಸಂಬಂಧಿ ಪಾರಿಭಾಷಿಕಪದಗಳೂ, ಆಚರಣೆ, ಹಬ್ಬ ಇತ್ಯಾದಿ ಪ್ರಸ್ತಾಪಗಳೂ ಇಲ್ಲಿಯ ಸಹಜ ಪರಿಸರವನ್ನು ಓದುಗರಿಗೆ ಮುಟ್ಟಿಸುತ್ತವೆ. ಮುಖ್ಯವಾಗಿ, ಕಾಸರಗೋಡಿನ ಎರಡು ಪ್ರಮುಖ ಸಮುದಾಯಗಳ ( ಮುಕ್ಕುವ ಮತ್ತು ನೇಕಾರ) ಸಾಂಸ್ಕೃತಿಕ ವಿವರಗಳು ಕತೆಗಳ ಆಶಯಕ್ಕೆ ಪೂರಕವಾಗಿ ಬಂದಿವೆ. ಏಕತಾನತೆ ಇಲ್ಲದೆ ಓದಿಸಿಕೊಂಡು ಹೋಗುವ ಗುಣ ಮಾತ್ರವಲ್ಲ ಕತೆಗಳ ಶೈಲಿಯ ಸೊಗಸು ಅವುಗಳ ಧ್ವನಿ ರಮ್ಯತೆಗೆ ಪೂರಕವಾಗಿ ದುಡಿಯುತ್ತದೆ ಎನ್ನುವುದು ಇಲ್ಲಿಯ ಹೆಚ್ಚುಗಾರಿಕೆ.

ಸಂಕಲನದ ಇತರೆಲ್ಲ ಕತೆಗಳಿಗಿಂತ ಭಿನ್ನವಾದ ಒಂದು ರಮ್ಯಕಾವ್ಯದಂತೆ ಓದಿಸಿಕೊಂಡು ಹೋಗುವ ಒಂದು ಪುಟ್ಟಕತೆ’ ಕಾದವಳು ರಾಧೆ’.ಕತೆಯಲ್ಲಿ ಹಾಗೇನೂ ಸಂಭವಿಸುವುದಿಲ್ಲ.ಹಾಗಿದ್ದರೂ ಅದು ಒಂದು ಕತೆಯೇ. ಹಲವು ರಾಧೆಯರ ಮೂಕ ಕತೆ. ಈ ಸಂಗ್ರಹದ ಅರ್ಧದಷ್ಟು ಕತೆಗಳನ್ನು ಕತೆಗಾರ್ತಿ ತನ್ನ ವಿದ್ಯಾರ್ಥಿದೆಸೆಯಲ್ಲಿ ಬರೆದದ್ದು ಮತ್ತು ಅವುಗಳು ಕಾಲೇಜಿನ ವಿದ್ಯಾರ್ಥಿಗಳೇ ನಡೆಸುವ ಪತ್ರಿಕೆಯಲ್ಲಿ ಪ್ರಕಟವಾದವು. ಅವು ಸತ್ವದಲ್ಲಿ ಇನ್ನೂ ತಾಜಾ ಆಗಿ ಇವೆ - ಎನ್ನುವುದನ್ನು ಇಲ್ಲಿ ನೆನೆದಾಗ ಕಾಸರಗೋಡಿನ ಕನ್ನಡದ ಕ್ರಿಯಾಶೀಲತೆಯ ಬಗ್ಗೆ ಅಭಿಮಾನವುಂಟಾಗುತ್ತದೆ .ನವ  ಮಾಧ್ಯಮಗಳು ವಿಜೃಂಭಿಸುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಓದು ಮತ್ತು ಬರವಣಿಗೆಯ ಆಸಕ್ತಿ ಬಹುತೇಕ ಸೆಲ್ಫಿಯ ವ್ಯಾಮೋಹದಲ್ಲಿ ಕಳೆದುಹೋಗಿರುವುದು ಸುಳ್ಳಲ್ಲ. ಕಾಸರಗೋಡಿನ ಕನ್ನಡ ಈಗ ಇನ್ನಷ್ಟು ಆತಂಕ, ತಲ್ಲಣಗಳನ್ನು ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಕನ್ನಡದ ಈ ಸತ್ವಪೂರ್ಣ ಕಥಾಸಂಕಲನ ಹೊಸಭರವಸೆಯ ಬೀಜಗಳನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತಲಿ ಎಂದು ಹಾರೈಸುತ್ತೇನೆ. ಜೊತೆಗೆ ಸ್ನೇಹಲತಾ ಅವರ ಈ ಚೊಚ್ಚಲ ಕೃತಿಯನ್ನು ಓದುಗರು ಪ್ರೀತಿಯಿಂದ ಎತ್ತಿಕೊಳ್ಳಲಿ ಹಾಗೂ ಅದಕ್ಕೆ ಅರ್ಹವಾದ ಗೌರವ ಮಾನ್ಯತೆಗಳು ಎಲ್ಲೆಡೆಯಿಂದ ಲಭಿಸಲಿ ಎಂದು ಮನಸಾರೆ ಹಂಬಲಿಸುತ್ತೇನೆ.

ಕನ್ನಡದ ಕಥಾಕಣಜಕ್ಕೆ ಭವಿಷ್ಯದಲ್ಲಿ ಅವರಿಂದ ಇನ್ನಷ್ಟು ಗಟ್ಟಿಕಾಳುಗಳು ಸೇರ್ಪಡೆಗೊಳ್ಳುತ್ತವೆ ಎಂಬ ನಿರೀಕ್ಷೆಯೊಂದಿಗೆ ಈ ಶುಭ ಸಂದರ್ಭದಲ್ಲಿ ಮುನ್ನುಡಿಯ ಸೇರಿಸಿರುವುದಕ್ಕೆ ಅವಕಾಶ ಕಲ್ಪಿಸಿದ ಆ ಅಕ್ಕರೆಗೆ ಕೃತಜ್ಞತೆಯನ್ನುಸಲ್ಲಿಸುತ್ತೇನೆ.

-ಗುಬ್ಬಿಮನೆ ಮಹೇಶ್ವರಿ. ಯು (ಕೃತಿಗೆ ಬರೆದ ಮುನ್ನುಡಿ)

Related Books