‘ಗಿಣಿ ಬಾಗಿಲು’ ಹರೀಶ್ ಕೇರ ಅವರ ಬದುಕು ಅರಳಿಸುವ ಲಹರಿಗಳ ಕಥಾಸಂಕಲನವಾಗಿದೆ. ಮೂವತ್ತೊಂಬತ್ತು ಲಹರಿಗಳಿರುವ ಈ ಪುಸ್ತಕದಲ್ಲಿ, ಟೈಟಾನಿಕ್ ಹಡಗಿನ ಬಗ್ಗೆ ʻಒಂದು ಹಡಗು ಮುಳುಗುವ ಮುನ್ನʼ ಲಹರಿಯ ಕೊನೆಯಲ್ಲಿ, ಟೈಟಾನಿಕ್ ಹಡಗಿನ ಬಗ್ಗೆ ಬಿಬಿಸಿಗೆ ಎರಡು ಘಂಟೆಗಳ ಡಾಕ್ಯುಮೆಂಟರಿ ಮಾಡಿದ ಜೇಮ್ಸ್ ಕ್ಯಾಮರೂನ್ ಹೇಳುತ್ತಾನೆ: ʻಟೈಟಾನಿಕ್ ಮನುಕುಲದ ಪಾಲಿಗೆ ಒಡೆದ ಹಾಳಿಗುಳ್ಳೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಎಂಥ ಸಾಧನೆಯ ಅಬ್ಬರವಿತ್ತು! ಲಿಫ್ಟ್ ಗಳು! ವಾಹನಗಳು! ವಿಮಾನಗಳು! ನಿಸ್ತಂತು ರೇಡಿಯೋ! ಎಲ್ಲವೂ ಪರಮಾಧ್ಭುತವಾಗಿ, ಮನುಷ್ಯನ ಸಾಧನೆಯ ಕೊನೆಯಿಲ್ಲದ ಮೆಟ್ಟಿಲುಗಳಾಗಿ ಕಾಣಿಸುತ್ತಿದ್ದವು. ಟೈಟಾನಿಕ್ ನೊಂದಿಗೆ ಅಂತಿಮವಾಗಿ ಎಲ್ಲವೂ ಮುಳುಗಿದವು…ʼ ಈ ವಿಷಯಗಳನ್ನು ಎಂಬತ್ತನೇ ದಶಕದಲ್ಲಿ ಆಲ್ವಿನ್ ಟಫ್ಲರ್, ತನ್ನ ಫ್ಯೂಚರ್ ಶಾಕ್, ದಿ ಥರ್ಡ್ ವೇವ್, ವಾರ್ ಆಂಡ್ ಆಂಟಿ ವಾರ್ ಪುಸ್ತಕಗಳಲ್ಲಿ ಚರ್ಚಿಸಿದರೆ, ತೀರ ಇತ್ತೀಚೆಗೆ ಥಾಮಸ್ ಫ್ರೈಡ್ ಮನ್ ʻದಿ ವರ್ಲ್ಡ್ ಇಸ್ ಫ್ಲ್ಯಾಟ್ʼ ಪುಸ್ತಕದಲ್ಲಿ ಚರ್ಚಿಸಿದ್ದಾನೆ. ಈ ಇಬ್ಬರು ಲೇಖಕರ ಮಧ್ಯೆ, ಬಹಳಷ್ಟು ಜನ ಲೇಖಕರು ತಮ್ಮದೇ ಆದ ವಿಧಾನಗಳಲ್ಲಿ ಆಧುನಿಕ ನಾಗರೀಕತೆಯ ಹೊಸ ಆವಿಷ್ಕಾರಗಳ ನಶ್ವರತೆಯನ್ನು ವಿಮರ್ಶಿಸಿದ್ದಾರೆ. ಈ ನಶ್ವರತೆಯು ಅರಿವಾಗುತ್ತಿದ್ದಂತೆ ಮನುಷ್ಯನಿಗೆ ಮತ್ತೆ ವಾಸ್ತವದ ಅರಿವಾಗುತ್ತದೆ ಮತ್ತು ಆತ ಅಂತರ್ಮುಖಿಯಾಗಿ ಆತ್ಮ ವಿಮರ್ಶೆ ಮಾಡಲಾರಂಭಿಸುತ್ತಾನೆ. ಈ ಆತ್ಮ ವಿಮರ್ಶೆಗಳ ಹಲವು ಮುಖಗಳನ್ನು ಲೇಖಕ ಸರಳವಾಗಿ ತಮ್ಮ ಪುಸ್ತಕದಲ್ಲಿ ಚರ್ಚಿಸಿದ್ದಾರೆ.
ಪತ್ರಕರ್ತ ಹರೀಶ್ ಕೇರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ. ಕಲಿತದ್ದು ಸಿವಿಲ್ ಇಂಜಿನಿಯರಿಂಗ್. ಹೊಸದಿಗಂತ, ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಭಾನುವಾರದ ಪುರವಣಿಗಳ ಮುಖ್ಯಸ್ಥರಾಗಿ, ವಿಜಯಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ವಿಸ್ತಾರ ನ್ಯೂಸ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಪತ್ರಕರ್ತ; ಆದರೆ ಹೃದಯದಲ್ಲಿ ಕತೆ, ಕವಿತೆಗಳಿವೆ. ‘ನಕ್ಷತ್ರ ನೇಯುವ ಹಕ್ಕಿಗಳು’ ಅವರ ಕವನ ಸಂಕಲನ. ...
READ MORE