`ಹಿನ್ನೀರ ದಂಡೆಯ ಸೀತಾಳೆದಂಡೆ’ ಮಂಗಳ ಟಿ.ಎಸ್.ತುಮರಿ ಅವರ ಕಥಾಸಂಕಲನವಾಗಿದೆ. ಇದಕ್ಕೆ ಅಜಿತ್ ಹರೀಶಿ ಅವರ ಬೆನ್ನುಡಿ ಬರಹವಿದೆ; ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಕಥೆಗಳಿಗೆ ನವಜಾತ ಶಿಶುವಿನ ಗಂಧವಿದೆ. ಮುಗ್ಧತೆ ಮತ್ತು ನವಿರುತನ ಇಲ್ಲಿನ ಸ್ಥಾಯೀ ಭಾವಗಳು, ಮಹಿಳೆಯೊಬ್ಬಳು ಕಥೆಗಾರ್ತಿಯಾಗಿ ರೂಪುಗೊಂಡಾಗ, ಸಾಹಿತ್ಯ ಕ್ಷೇತ್ರಕ್ಕೆ ಸಿಗಬಹುದಾದ ಬಹುತೇಕ ಲಾಭಗಳು ಈ ಕೃತಿಯಿಂದ ದೊರೆಯುತ್ತದೆ. ಮಂಗಳಾ ಅವರು ತಮ್ಮ ಬಾಲ್ಯ ಮತ್ತು ಯೌವನದ ದಿನಗಳು: ಮಲೆನಾಡು, ನಗರ ಜೀವನವನ್ನು ತಮ್ಮದೇ ಆದ ಕೋನಗಳಿಂದ ಸೆರೆಹಿಡಿದು ಓದುಗನ ಮುಂದಿಟ್ಟಿದ್ದಾರೆ. ಪ್ರಸಿದ್ಧರ ಪತ್ನಿಯ ಸಂದರ್ಶನದಂತಹ ಸಮಕಾಲೀನ ಕಥಾವಸ್ತುವಿನಿಂದ ಹಿಡಿದು ತಲೆಮಾರಿನ ಹೊಯ್ದಾಟವು, ಈ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡ ಪರಿ ಅನನ್ಯವಾದುದು. ನಾಮಕರಣದಂತಹ ವಿಷಯವನ್ನು ತೆಗೆದುಕೊಂಡು ರಚಿಸಿದ ಕಥೆಯ ತಂತ್ರ, ಮಂಗಳಾ ಅವರು ಪಳಗಿದ ಕಥೆಗಾರ್ತಿಯಾಗುವ ಭರವಸೆಯನ್ನು ಹುಟ್ಟುಹಾಕುತ್ತದೆ. ಗುಲಾಬಿ ಫ್ರಾಕಿನ ಕಥೆಗೆ ಭಾವುಕತೆಯೇ ಇಂಧನ. ಸುಕ್ರಿ ಎಂಬ ಮೀನು ಮಾರುವ ಸಶಕ್ತ ಹೆಂಗಸಿನ ಪಾತ್ರದ ಜೊತೆಗೆ ಕಾಲೇಜಿನಲ್ಲಿ ಪೀಡಿಸುವ ಹುಡುಗನಿಗೆ ಹೆದರುವ ಅಬಲೆಯನ್ನು ಮಂಗಳಾ ಚಿತ್ರಿಸಬಲ್ಲರು. ನಿತ್ಯ ಬದುಕಿನಲ್ಲಿ ಸಿಗಬಹುದಾದ ವಾಣಿ ಬಿಕ್ಕಿಯಂತಹ ಪಾತ್ರ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಮುಂಬೈನಂತಹ ಶಹರಿನ ಎರಡು ಮುಖಗಳು, ದುರ್ಬಲ ಮಹಿಳೆಯಿಂದ ಭೂಮಿ ಕಿತ್ತುಕೊಳ್ಳುವ ಸಮಾಜ, ಗಂಡಹೆಂಡಿರ ಜಗಳದ ಮಧ್ಯದ ಹೂವಮ್ಮ ಮಂಗಳಾ ಅವರ ಕಥೆ ನೇಯ್ದೆಯ ಕಾಯಕಕ್ಕೆ ಸಾಕ್ಷಿ. ಅವನಿಯಂತಹ ಭೂಮಿ ತೂಕದ ಹೆಣ್ಣು, ನೊಂದ ಜೀವಗಳಿಗೆ ಸ್ಫೂರ್ತಿಯಾಗಬಲ್ಲಳು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.