ʼಈ ತನಕದ ಕಥೆಗಳುʼ ಲೇಖಕ ಅಬ್ದುಲ್ ರಶೀದ್ ಅವರು ರಚಿಸಿದ ಕಥೆಗಳ ಸಂಕಲನ. ಬಹುತೇಕ ಕತೆಗಳು ಮಲೆನಾಡು-ಕೊಡಗಿನ ಮೋಡ ಮುಸುಕಿದ ತೇವ ಭರಿತ ವಾತಾವರಣದ ಎಲ್ಲ ಆತಂಕ, ಮಜಾ ಮತ್ತು ನೀರವವನ್ನು ಕಂಬಳಿಯಂತೆ ಹೊದ್ದಿವೆ. ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಆ ಕಗ್ಗತ್ತಲೆಯ ಕಾಫಿ ತೋಟದ ಕಾಡಿನಂಥ ಕಾಡಿನೊಳಗಿನ ಕಾಲುದಾರಿಯಲ್ಲಿ ಕಾಲಡಿಯ ಒಣಗಿದ ಎಲೆಯ ಚರಪರ ಸದ್ದು ಮತ್ತು ಮೈಗೆ ಸವರುವ ಗಿಡಬಳ್ಳಿಗಳ ನಡುವಲ್ಲೇ ದಾರಿ ನುಸುಳಿಕೊಂಡು ನಮ್ಮತ್ತ ನುಗ್ಗುತ್ತದೆ. ಇಲ್ಲಿ ಲೇಖಕರು ತಾನು ಬಳಸುತ್ತಿರುವ ಭಾಷೆ, ಶಬ್ದಗಳನ್ನು ಮುಖ್ಯವಾಗಿರಿಸದೇ ಈ ಹಂಗನ್ನು ಮೀರಿ ಬೆಳೆದು, ಮೌನದಲ್ಲಿ ಕೂಡ ಮಾತನಾಡತೊಡಗುತ್ತವೆ. ನಿಜ ಅರ್ಥದಲ್ಲಿ , ಇಲ್ಲಿನ ಕಥೆಗಳು ಕಥೆಗಳಿಗಿಂತ ಹೆಚ್ಚು ಕವನದ ಲಯ, ಧಾಟಿ ಹೊಂದಿವೆ. ಇಲ್ಲಿನ ಗದ್ಯ ಹೆಚ್ಚು ಜೀವಂತವಾಗಿದೆ, ತೇವ ಹೊಂದಿದೆ. ಒಟ್ಟಾರೆಯಾಗಿ, ಕಥಾಸಂಕಲನದಲ್ಲಿ ಅನುಭವಗಳು ಹೆಚ್ಚು ಸಾಂದ್ರವಾಗಿ ಪಡಿಮೂಡಿವೆ ಮಾತ್ರವಲ್ಲ ಬದುಕಿನ ಸಂಕೀರ್ಣ ವಿನ್ಯಾಸಗಳು ಹೆಚ್ಚು ಸಹಜವಾಗಿಯೇ ರಶೀದರ ಕತೆಯಲ್ಲಿ ಮೈದಳೆದಿದೆ.
'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...
READ MOREhttps://narendrapai.blogspot.com/2008/08/blog-post_29.html